ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಕೊರೊನಾ ಪರೀಕ್ಷೆಗೂ ಶುಲ್ಕ ವಸೂಲಿ

ಪರೀಕ್ಷಾ ವರದಿ ತಡ; ಮತ್ತಷ್ಟು ಮಂದಿಗೆ ಸೋಂಕು ವ್ಯಾಪಿಸುವ ಆತಂಕ
Last Updated 6 ಜುಲೈ 2020, 19:44 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಯೋಧರೆಂಬ ಗೌರವಕ್ಕೆ ಪಾತ್ರರಾದ ಪೊಲೀಸರಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವೈಯಕ್ತಿಕವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವ ಪೊಲೀಸರಿಂದ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಈ ಬಗ್ಗೆ ಇಲಾಖೆಯಲ್ಲೇ ಅಸಮಾಧಾನ ವ್ಯಕ್ತವಾಗಿದೆ.

ಕೊರೊನಾ ಸೋಂಕು ಹೆಚ್ಚಿರುವ ಕಂಟೈನ್‌ಮೆಂಟ್‌ (ನಿಯಂತ್ರಿತ) ಪ್ರದೇಶ ಹಾಗೂ ಸೀಲ್‌ಡೌನ್ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. 20ಕ್ಕೂ ಹೆಚ್ಚು ಠಾಣೆಗಳನ್ನು ಸೀಲ್‌ಡೌನ್ ಸಹ ಮಾಡಲಾಗಿದೆ.

ಸೋಂಕಿತ ಪೊಲೀಸರ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಸಿಬ್ಬಂದಿಯನ್ನು ಮಾತ್ರ ಸಾಮೂಹಿಕವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಗರ ಪೊಲೀಸ್ ಕಮಿಷನರ್‌ ಕಚೇರಿಯಲ್ಲೂ ಪೊಲೀಸರ ಗಂಟಲಿನ ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ.

ಸೋಂಕಿತರ ಜೊತೆ ಸಂಪರ್ಕವಿಲ್ಲದ ಇತರೆ ಪೊಲೀಸರು ಸಹ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ. ಇಂಥ ಸಿಬ್ಬಂದಿಗೆ ಪರೀಕ್ಷೆಗೆ ಮಾಡಿಸಲು ₹1,500 ಶುಲ್ಕ ನಿಗದಿ ಮಾಡಲಾಗಿದೆ. ನಗರದ ಲ್ಯಾಬೊಂದರ ಸಿಬ್ಬಂದಿ ಪರೀಕ್ಷೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ವಿದ್ಯಾರಣ್ಯಪುರ ಹಾಗೂ ಹಲವು ಠಾಣೆಗಳ ಸಿಬ್ಬಂದಿ ₹1,500 ಕೊಟ್ಟು ಈಗಾಗಲೇ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ಹಲವು ಪೊಲೀಸರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

‘ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ಸೋಂಕಿತರ ಜೊತೆ ಸಂಪರ್ಕವಿಲ್ಲ ಹಾಗೂ ಯಾವುದೇ ಲಕ್ಷಣವಿಲ್ಲವೆಂಬ ಕಾರಣಕ್ಕೆ ಕೊರೊನಾ ಪರೀಕ್ಷೆ ಬೇಡವೆಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಪರೀಕ್ಷೆ ಮಾಡಿಸುವುದಾದರೆ, ಗುರುತಿನ ಚೀಟಿ ತೋರಿಸಿ ನಿಗದಿತ ಲ್ಯಾಬ್‌ ಸಿಬ್ಬಂದಿಗೆ ಶುಲ್ಕ ಪಾವತಿಸುವಂತೆಯೂ ತಿಳಿಸುತ್ತಿದ್ದಾರೆ' ಎಂದು ಪೊಲೀಸ್‌ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮಗೂ ಕುಟುಂಬ ಇದೆ. ನಮ್ಮಿಂದ ಅವರಿಗೆ ತೊಂದರೆ ಆಗಬಾರದು. ಹೀಗಾಗಿ, ಶುಲ್ಕ ಪಾವತಿಸಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ಧೇವೆ’ ಎಂದರು.

ವರದಿ ವಿಳಂಬ: ಪೊಲೀಸರ ಗಂಟಲಿನ ದ್ರವದ ಪರೀಕ್ಷಾ ವರದಿ ಬರುವುದು ವಿಳಂಬವಾಗುತ್ತಿದೆ. ಇದು ಸೋಂಕು ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತಿದೆ.

ಕರ್ತವ್ಯ ನಿರತ ಪೊಲೀಸರನ್ನು ಸಾಮೂಹಿಕವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಗಂಟಲಿನ ದ್ರವ ಸಂಗ್ರಹಿಸಿದ ನಂತರ ಬಹತೇಕ ಪೊಲೀಸರನ್ನು ಪುನಃ ಕರ್ತವ್ಯಕ್ಕೆ ಕಳುಹಿಸಲಾಗುತ್ತಿದೆ. ಅವರು ಮನೆಗೂ ಹೋಗಿ ಬರುತ್ತಿದ್ದಾರೆ. ಮೂರು–ನಾಲ್ಕು ದಿನಗಳ ನಂತರ ಪರೀಕ್ಷಾ ವರದಿ ಪಾಸಿಟಿವ್ ಬರುತ್ತಿದೆ. ಅಷ್ಟರಲ್ಲಿ ಅವರಿಂದ ಹಲವರಿಗೆ ಸೋಂಕು ವ್ಯಾಪಿಸುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಯಾವುದೇ ಶುಲ್ಕವಿಲ್ಲದೇ ಪೊಲೀಸರನ್ನು ಪರೀಕ್ಷೆ ಮಾಡಿಸಲಾಗುತ್ತಿದೆ. ವರದಿಗಳು ತಡವಾಗಿ ಬಂದರೂ ನಿಖರವಾಗಿ ಬರುತ್ತಿವೆ. ಸೋಂಕಿತ ಪೊಲೀಸರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಆಸ್ಪತ್ರೆಗಳ ವ್ಯವಸ್ಥೆಯನ್ನೂ ಸರ್ಕಾರ ಮಾಡಿದೆ. ಮುಂದಿನ ದಿನಗಳಲ್ಲಿ ಪೊಲೀಸರ ಪರೀಕ್ಷೆಗೆ ಪ್ರತ್ಯೇಕ ಲ್ಯಾಬ್ ಬಳಸಿಕೊಳ್ಳಲು ಚಿಂತನೆ ನಡೆದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT