ಶನಿವಾರ, ಆಗಸ್ಟ್ 13, 2022
23 °C

ಬೆಂಗಳೂರು‌: ಖಾಸಗಿ ಆಸ್ಪತ್ರೆಗಳಲ್ಲೇ ಕೋವಿಡ್‌ನಿಂದಾಗಿ ಹೆಚ್ಚು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ನಿಂದ ಸಾಯುವವರ ಸಂಖ್ಯೆ ಖಾಸಗಿ ಆಸ್ಪತ್ರೆಗಳಲ್ಲೇ ಜಾಸ್ತಿ. ಅಧಿಕೃತ ಅಂಕಿ ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಈ ವಿಚಾರ ತಿಳಿದುಬಂದಿದೆ. ನಗರದಲ್ಲಿ 10 ದಿನಗಳಲ್ಲಿ 350 ಮಂದಿ ಕೋವಿಡ್‌ನಿಂದಾಗಿ ಸತ್ತಿದ್ದಾರೆ. ಅದರಲ್ಲಿ ಶೇ 67ರಷ್ಟು ಮಂದಿಯ (235 ಮಂದಿ) ಸಾವು ಖಾಸಗಿ ಆಸ್ಪತ್ರೆಗಳಲ್ಲೇ ಆಗಿದೆ.

‘ಖಾಸಗಿ ಆಸ್ಪತ್ರೆಗಳಲ್ಲಿ ಕಳಪೆ ಸೇವೆಯೇ ಇದಕ್ಕೆ ಕಾರಣ’ ಎಂದು ಕೆಲವು ಸಾಮಾಜಿಕ ಕಾರ್ಯಕರ್ತರು ಹಾಗೂ ಸರ್ಕಾರಿ ಅಧಿಕಾರಿಗಳು ಆರೋಪಿಸಿದ್ದಾರೆ. ‘ಕೋವಿಡ್‌ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅಲ್ಲಿ ಸಾವು ಹೆಚ್ಚು’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳ ಸಂಘವು (ಫಾನ) ಪ್ರತಿಪಾದಿಸಿದೆ. 

ಅಧಿಕೃತ ದಾಖಲೆಗಳ ಪ್ರಕಾರ, ಮಂಗಳವಾರದವರೆಗೆ  8,110 ಕೋವಿಡ್‌ ರೋಗಿಗಳು ಸರ್ಕಾರದ ಶಿಫಾರಸಿನ ಮೇರೆಗೆ ನಗರದ 90 ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. 6,319 ಮಂದಿ ನಗರದ ಎಂಟು ಖಾಸಗಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ನಗರದಲ್ಲಿ ಪ್ರಸ್ತುತ ಇರುವ 37,703 ಕೋವಿಡ್‌ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಅಥವಾ ಖಾಸಗಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಿಗೆ ದಾಖಲಾಗಿರುವ ರೋಗಿಗಳ ಪ್ರಮಾಣ ಶೇ 38ರಷ್ಟು. ಸರ್ಕಾರದ ಶಿಫಾರಸ್ಸಿಲ್ಲದೇ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದ ಕೋವಿಡ್‌ ರೋಗಿಗಳ ಸಂಖ್ಯೆ ಲಭ್ಯವಿಲ್ಲ.

‘ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಸರಿಯಾದ ಚಿಕಿತ್ಸೆ ನೀಡುತ್ತಿದ್ದಾರೆ. 50 ವರ್ಷ ಮೇಲ್ಟಟ್ಟ ವೈದ್ಯರು ಕೋವಿಡ್‌ ರೋಗಿಗಳಿಗೆ ಖುದ್ದಾಗಿ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅವರು ತಮ್ಮ ಬದಲು ವಾರ್ಡ್‌ ಬಾಯ್‌ ಹಾಗೂ ಆಯಾಗಳ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗಲ್ಲ. ಅವರು ಕೆಲವೊಂದು ಮಾದರಿ ನಿಯಮಗಳನ್ನು ಅನುಸರಿಸಬೇಕಾಗುತ್ತದೆ’ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದರು.

‘ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಹೊಂದಿಲ್ಲದ 84 ಆಸ್ಪತ್ರೆಗಳಿಗೆ ಕೋವಿಡ್ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಅವುಗಳಿಗೆ ವಿನಾಯಿತಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಒಬ್ಬ ರೋಗಿಗೆ ಚಿಕಿತ್ಸೆ ನೀಡಲು ಎಷ್ಟು ವೈದ್ಯಕೀಯ ಸಿಬ್ಬಂದಿಯ ಅಗತ್ಯವಿದೆಯೋ ಅಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಯೂ ಲಭ್ಯರಿಲ್ಲ’ ಎಂದು ಫಾನ ಅಧ್ಯಕ್ಷ ಡಾ.ಆರ್‌.ರವೀಂದ್ರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು