ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೆ ಕಾರಣಕ್ಕೆ ನೀರಿನ ಸಮಸ್ಯೆಗೆ ಹೆಚ್ಚಿನ ಪ್ರಚಾರ: ಡಿ.ಕೆ. ಶಿವಕುಮಾರ್‌ ಟೀಕೆ

Published 15 ಮಾರ್ಚ್ 2024, 0:12 IST
Last Updated 15 ಮಾರ್ಚ್ 2024, 0:12 IST
ಅಕ್ಷರ ಗಾತ್ರ

ಬೆಂಗಳೂರು: ‘ಚುನಾವಣೆ ನಡೆಯುವ ಕಾರಣಕ್ಕಾಗಿ ನೀರಿನ ಸಮಸ್ಯೆ ಬಗ್ಗೆ ಹೆಚ್ಚಿನ ಪ್ರಚಾರ ಹಾಗೂ ರಾಜಕೀಯ ಮಾಡಲಾಗುತ್ತಿದೆ. ಸರ್ಕಾರ ಟ್ಯಾಂಕರ್‌ ನೀರಿಗೆ ದರ ನಿಗದಿ ಮಾಡಿ, ಟ್ಯಾಂಕರ್‌ ದಂಧೆಗೆ ಕಡಿವಾಣ ಹಾಕಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ‘ನೀರು ಉಳಿಸಿ ಬೆಂಗಳೂರು ಬೆಳಸಿ’ ಅಭಿಯಾನಕ್ಕೆ ಚಾಲನೆ ಹಾಗೂ ಅಂತರ್ಜಲ, ಜಲಸಂರಕ್ಷಕ, ಜಲಮಿತ್ರ, ಜಲಸ್ನೇಹಿ ವೆಬ್‌ ಆ್ಯಪ್‌ಗಳನ್ನು ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಾವು ಬೆಂಗಳೂರಿನ ಕುಡಿಯುವ ನೀರಿಗಾಗಿ ‘ನಮ್ಮ ನೀರು ನಮ್ಮ ಹಕ್ಕು’ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನೀರನ್ನು ಉಳಿಸಿ, ಮುಂದಿನ ಪೀಳಿಗೆಯ ಕಣ್ಣೀರು ತಪ್ಪಿಸಲು ನಾವು ಶ್ರಮಿಸು
ತ್ತಿದ್ದೇವೆ. ಜಲ ರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸಬೇಕು’ ಎಂದರು.

‘ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಅದಕ್ಕೆ ತಲೆಕೆಡಿಸಿಕೊಳ್ಳದೇ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಚುನಾವಣೆ ನೀತಿ ಸಂಹಿತೆ ಏನೇ ಬರಲಿ, ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ. ಎಲ್ಲೆಲ್ಲಿ ನೀರಿನ ಅಭಾವವಿದೆ ಅಲ್ಲಿ ನೀರನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಿ’ ಎಂದು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

‘ಬರ ಪರಿಸ್ಥಿತಿಯಲ್ಲಿ ನಾವೆಲ್ಲರೂ ನೀರನ್ನು ಬಹಳ ಜವಾಬ್ದಾರಿಯಿಂದ ಸಮರ್ಪಕವಾಗಿ ಬಳಸಬೇಕು. ಈ ವಿಚಾರವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ’ ಎಂದು ಹೇಳಿದರು.

ಜಲಮಂಡಳಿ ಅಧ್ಯಕ್ಷ ಡಾ.ವಿ. ರಾಮ್‌ ಪ್ರಸಾತ್‌ ಮನೋಹರ್‌ ಅವರು ಆ್ಯಪ್‌ಗಳ ಬಗ್ಗೆ ಮಾಹಿತಿ ನೀಡಿ, ಮಾರ್ಚ್‌ 15ರಿಂದ ಆ್ಯಪ್‌ಗಳು ಕಾರ್ಯ ಆರಂಭಿಸಲಿವೆ ಎಂದರು.

ಶಾಸಕರಾದ ಅಶೋಕ್ ಮನಗೂಳಿ, ಬಸವರಾಜ್ ಶಿವಗಂಗಾ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರರಾವ್ ಉಪಸ್ಥಿತರಿದ್ದರು.

ಅರಿವಿಗೆ ಇ–ರಿಕ್ಷಾ: ಸಮೃದ್ಧ ಬೆಂಗಳೂರಿಗೆ ನೀರು ಉಳಿಸುವ ಅಗತ್ಯ ಮತ್ತು ಪ್ರಾಮುಖ್ಯ ಸಾರುವ ಸಂದೇಶ, ನೀರು ಉಳಿಸುವ ಎಂಟು ದಾರಿಗಳು ಸೇರಿದಂತೆ ನೀರಿನ ಸಂದೇಶ ಹೊತ್ತ ಇ-ರಿಕ್ಷಾ ವಾಹನಗಳಿಗೆ ಇದೇ ಸಂದರ್ಭದಲ್ಲಿ ಹಸಿರು ನಿಶಾನೆ ತೋರಿಸಲಾಯಿತು. ಈ ಇ-ರಿಕ್ಷಾ ವಾಹನಗಳು ಅಭಿಯಾನದ ಸಂದೇಶ ಹೊತ್ತು ನಗರದಾದ್ಯಂತ ಸಂಚರಿಸಿ, ಅರಿವು ಮೂಡಿಸುವ ಕೆಲಸ ಮಾಡಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT