ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಅವಳಿ ಮಕ್ಕಳು ಸಹಿತ ತಾಯಿ ಆತ್ಮಹತ್ಯೆ

ಸಾಲಬಾಧೆಯಿಂದ ಆತ್ಮಹತ್ಯೆ ಶಂಕೆ, ಜೆ.ಪಿ. ನಗರ ಮೂರನೇ ಹಂತದಲ್ಲಿ ಘಟನೆ
Published 20 ಮಾರ್ಚ್ 2024, 23:30 IST
Last Updated 20 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಪಿ.ನಗರ 3ನೇ ಹಂತದ ಮನೆಯೊಂದರಲ್ಲಿ ಅವಳಿ ಮಕ್ಕಳು ಹಾಗೂ ತಾಯಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ತಾಯಿ ಸುಕನ್ಯಾ (48), ಅವಳಿ ಮಕ್ಕಳಾದ ನಿಖಿತ್ ಹಾಗೂ ನಿಶ್ಚಿತ್ (28) ಆತ್ಮಹತ್ಯೆ ಮಾಡಿಕೊಂಡವರು.

ಸುಕನ್ಯಾ ಅವರ ಪತಿ ಜಯಾನಂದ್ ಅವರು ದೂರು ನೀಡಿದ್ದು, ಜೆ.ಪಿ. ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಾಥಮಿಕ ತನಿಖೆಯಿಂದ ಸಾಲಬಾಧೆ ಹಾಗೂ ಆರೋಗ್ಯ ಸಮಸ್ಯೆಯಿಂದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಮತ್ತಷ್ಟು ಮಾಹಿತಿ ಸಂಗ್ರಹದ ನಂತರ ಘಟನೆಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದರು.

‘ಉಡುಪಿಯ ‌ಅಂಬಲಪಾಡಿ ಮೂಲದ ಕುಟುಂಬ ನಗರದ ಜೆ.ಪಿ.ನಗರದ ಮೂರನೇ ಹಂತದ ಮನೆಯಲ್ಲಿ ನೆಲೆಸಿತ್ತು. ಸುಕನ್ಯಾ ಅವರ ಪತಿ ಜಯಾನಂದ್‌ ಅವರು ಜೆ.ಪಿ. ನಗರದಲ್ಲಿ ವುಡನ್ ಡೈ ಮೇಕಿಂಗ್ ಉದ್ಯಮ ನಡೆಸುತ್ತಿದ್ದರು. ಇತ್ತೀಚೆಗೆ ಅದನ್ನು ಮುಚ್ಚಿದ್ದರು. ಪುತ್ರ ನಿಖಿತ್ ಎಂಸಿಎ ವ್ಯಾಸಂಗ ಮಾಡಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಿಶ್ಚಿತ್ ಕೂಡ ಅನಿಮೇಷನ್ ಸಂಬಂಧಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸುಕನ್ಯಾ ಅವರು ಮನೆಯಲ್ಲೇ ಮಕ್ಕಳಿಗೆ ಮನೆಪಾಠ ಹೇಳಿಕೊಡುತ್ತಿದ್ದರು. ಇದರಿಂದ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಆರಂಭದಲ್ಲಿ ಉದ್ಯಮವು ಚೆನ್ನಾಗಿಯೇ ನಡೆಯುತ್ತಿತ್ತು. ಕೋವಿಡ್‌ ಲಾಕ್‌ಡೌನ್‌ ವೇಳೆ ಭಾರಿ ನಷ್ಟವುಂಟಾಗಿತ್ತು. ಜತೆಗೆ, ಕುಟುಂಬದಲ್ಲಿ ಕೆಲವರಿಗೆ ಆರೋಗ್ಯ ಸಮಸ್ಯೆ ಇತ್ತು. ಇದು ಮತ್ತಷ್ಟು ಸಂಕಷ್ಟ ತಂದೊಡ್ಡಿತ್ತು. ಹೀಗಾಗಿ, ಅಂದಾಜು ₹15 ಲಕ್ಷ ಸಾಲ ಮಾಡಿಕೊಂಡಿದ್ದರು. ಪ್ರತಿ ತಿಂಗಳು ಬಡ್ಡಿ ಪಾವತಿಸುತ್ತಿದ್ದರು. ಸುಕನ್ಯಾ ಅವರೂ ಕೆಲವರಿಂದ ಕೈಸಾಲ ಪಡೆದುಕೊಂಡಿದ್ದರು. ಸಾಲ ಹೆಚ್ಚಾಗಿ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಹೇಳಲಾಗಿದೆ. 

ಬುಧವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಪತಿಗೆ ಹಾಲು, ದಿನಪತ್ರಿಕೆ ಕೊಟ್ಟು ಸುಕನ್ಯಾ ಅವರು ಕೊಠಡಿಯ ಬಾಗಿಲು ಹಾಕಿಕೊಂಡಿದ್ದರು. ಅದೇ ಕೊಠಡಿಯಲ್ಲಿ ಮಕ್ಕಳು ಇದ್ದರು. ಮೂವರೂ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಬೆಂಕಿ ಸುಟ್ಟಾಗ ಜೋರಾಗಿ ಕೂಗಬಾರದು ಎಂದು ಮೂವರೂ ಬಾಯಿಗೆ ಬಟ್ಟೆ ಕಟ್ಟಿಕೊಂಡಿದ್ದರು ಎಂದು ಹೇಳಲಾಗಿದೆ. ಕೆಲವೇ ಕ್ಷಣಗಳಲ್ಲಿ ಸಜೀವ ದಹನವಾಗಿದ್ದಾರೆ.

ಬೆಡ್‌ರೂಮ್‌ನಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ಅಕ್ಕಪಕ್ಕದ ನಿವಾಸಿಗಳು ಓಡಿಬಂದು ಬಾಗಿಲು ಒಡೆದು ನೋಡುವಷ್ಟರಲ್ಲಿ ಮೂವರೂ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದರು.

ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಹಾಗೂ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬೇರೆ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದರು. ಘಟನಾ ಸ್ಥಳಕ್ಕೆ ದಕ್ಷಿಣ ವಿಭಾಗದ ಪ್ರಭಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ಭೇಟಿ ನೀಡಿ ಪರಿಶೀಲಿಸಿದರು.

ಮನೆಯ ಬಳಿ ಬಂದಿದ್ದ ಸಾಲಗಾರರು: ಕಳೆದ ಒಂದು ವಾರದಿಂದ ಸಾಲಗಾರರು ಮನೆಯ ಬಳಿ ಬಂದು ಅಸಲು ಹಾಗೂ ಬಡ್ಡಿ ಪಾವತಿಸುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ.

ಪ್ರಕರಣದ ಸಂಬಂಧ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಾಲಬಾಧೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ.
ಶಿವಪ್ರಕಾಶ್ ದೇವರಾಜ್, ಡಿಸಿಪಿ ದಕ್ಷಿಣ ವಿಭಾಗ

ಕೈಗೆ ಸುತ್ತಿದ್ದ ಎಲೆಕ್ಟ್ರಿಕ್‌ ಕೇಬಲ್

ಎಲೆಕ್ಟ್ರಿಕ್ ಕೇಬಲ್‌ಗಳು ಸುತ್ತಿರುವ ಸ್ಥಿತಿಯಲ್ಲಿ ಮೂವರ ಶವಗಳು ಪತ್ತೆಯಾಗಿವೆ. ಇದು ಅನುಮಾನಕ್ಕೆ ಕಾರಣವಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದಮೇಲೆ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT