ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಹಬ್ಬ ದಸರಾ ಉತ್ಸವ | ಭಾರತೀಯ ವಿದ್ಯಾಭವನದಲ್ಲಿ 15 ರಿಂದ ಬೊಂಬೆಗಳ ‘ರಾಮಾಯಣ’

Published 13 ಅಕ್ಟೋಬರ್ 2023, 16:21 IST
Last Updated 13 ಅಕ್ಟೋಬರ್ 2023, 16:21 IST
ಅಕ್ಷರ ಗಾತ್ರ

ಬೆಂಗಳೂರು: ನಾಡಹಬ್ಬ ದಸರಾ ಉತ್ಸವದ ಅಂಗವಾಗಿ ಇಲ್ಲಿನ ಭಾರತೀಯ ವಿದ್ಯಾಭವನದ ಕೆಆರ್‌ಜಿ ಸಭಾಂಗಣದಲ್ಲಿ ಇದೇ 15ರಿಂದ 24ರವರೆಗೆ ಬೊಂಬೆಗಳ ಮೂಲಕ ರಾಮಾಯಣದ ಕತೆ ಪ್ರಸ್ತುತ ಪಡಿಸಲಾಗುತ್ತಿದೆ.

15ರಂದು ಭಾನುವಾರ ಬೆಳಿಗ್ಗೆ 11ಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ‘ಬೊಂಬೆ ಹಬ್ಬ’ವನ್ನು ಉದ್ಘಾಟಿಸುವರು. ಪ್ರತಿ ದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರ ವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5.30ರ ವರೆಗೆ ರಾಮಾಯಣ ಕಥನ ನಿರೂಪಣೆಯ ಬೊಂಬೆಗಳ ಪ್ರದರ್ಶನವಿರುತ್ತದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.

‘ವಿದ್ಯಾಭವನದಲ್ಲಿ ಪ್ರತಿ ವರ್ಷ ನವರಾತ್ರಿ ಅಂಗವಾಗಿ ಪುರಾಣಗಳು, ಐತಿಹಾಸಿಕ ಘಟನೆಗಳು, ಗ್ರಾಮೀಣ ಪರಿಸರ, ಶಿಕ್ಷಣಕ್ರಮ ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ಈ ವರ್ಷ ರಾಮಾಯಣ ಮಹಾಕಾವ್ಯ ಕಥನವನ್ನು ಬೊಂಬೆಗಳ ಮೂಲಕ ನಿರೂಪಿಸುವ ಕೆಲಸವನ್ನು ಮಾಡುತ್ತಿದೆ’ ಎನ್ನುತ್ತಾರೆ ಬೊಂಬೆಹಬ್ಬದ ನೇತೃತ್ವ ವಹಿಸಿಕೊಂಡಿರುವ ಭಾರತೀಯ ವಿದ್ಯಾಭವನದ ಸೀತಾ ರಾಮಚಂದ್ರ. ಮಧುಲಿಕಾ ಶ್ರೀವತ್ಸ ಅವರು ದಕ್ಷಿಣ ಭಾರತದ ಬೊಂಬೆಗಳನ್ನು ಸಂಗ್ರಹಿಸಿ ರಾಮಾಯಣ ಕಥನವನ್ನು ನಿರೂಪಿಸುತ್ತಿದ್ದಾರೆ. 

‘ಸುಮಾರು 500 ವಿವಿಧ ಬಗೆಯ ಆಕೃತಿಗಳ ಬೊಂಬೆಗಳು ಪ್ರದರ್ಶನದಲ್ಲಿದ್ದು, ರಾಮಾಯಣದ ಸೂಕ್ಷ್ಮ ಸಂಗತಿಗಳನ್ನು ತೆರೆದಿಡುತ್ತವೆ. ಜೇಡಿಮಣ್ಣು, ಮರ, ಅರಳೆ, ಬಟ್ಟೆ, ಕಾಗದ ಮುಂತಾದ ಪಾರಂಪರಿಕ ವಸ್ತುಗಳಿಂದ ರೂಪುಗೊಂಡಿರುವ ಈ ಬೊಂಬೆಗಳು, ಗತಕಾಲದ ಐತಿಹಾಸಿಕ ವಿವರಗಳು, ಸಮಕಾಲೀನ ಬದುಕಿಗೆ ಬೇಕಾದ ಮೌಲ್ಯ ಬಿಂಬಿಸಲಿವೆ’ ಎಂದು ಭವನದ ನಿರ್ದೇಶಕ ಎಚ್.ಎನ್. ಸುರೇಶ್ ಮಾಹಿತಿ ನೀಡಿದ್ದಾರೆ.

ಬೊಂಬೆಗಳ ಪ್ರದರ್ಶನದ ಜತೆಗೆ ಭವನದ ಅಧ್ಯಕ್ಷರಾದ ಕೆ.ಜಿ.ರಾಘವನ್ ಅವರು ರಾಮಾಯಣದಲ್ಲಿ ಬರುವ ಋಷಿಗಳ ಕುರಿತು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT