ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸ್ಕೃತಿಯ ರಕ್ಷಕರು ತಾಯಂದಿರು: ಸಂಸದ ಬಸವರಾಜ ಬೊಮ್ಮಾಯಿ

ಸಂಸದ ಬಸವರಾಜ ಬೊಮ್ಮಾಯಿ ಅಭಿಮತ | ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ‘ನಾರಿ ಸಮ್ಮಾನ್’ ಪ್ರಶಸ್ತಿ ಪ್ರದಾನ
Published 15 ಜೂನ್ 2024, 16:13 IST
Last Updated 15 ಜೂನ್ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ‘ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರು, ದೇಶದ ಆರ್ಥಿಕತೆ ಮತ್ತು ಸಂಸ್ಕೃತಿ ಉಳಿಸುತ್ತಿದ್ದಾರೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಮೀಡಿಯಾ ವಿಷನ್‌ ಹಾಗೂ ಬಿ.ಎಂ. ವಿರೂಪಾಕ್ಷಯ್ಯ ಕಲಾ ಟ್ರಸ್ಟ್‌ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡ ‘ನಾರಿ ಸಮ್ಮಾನ್’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಮಾತನಾಡಿದರು. 

‘ನಮ್ಮ ಸಂಸ್ಕೃತಿಯ ರಕ್ಷಕರು ತಾಯಂದಿರು. ಅವರು ಲೆಕ್ಕದಲ್ಲಿ ಮುಂದಿರುತ್ತಾರೆ. ತಾಯಂದಿರು ನಮಗೆ ಉಳಿತಾಯದ ಸಂಸ್ಕೃತಿ ಕಲಿಸಿದ್ದಾರೆ. ಇದರಿಂದ ನಮ್ಮ ಆರ್ಥಿಕತೆ ಮತ್ತು ಸಂಸ್ಕೃತಿ ಉಳಿದಿದೆ. ಸಾಸಿವೆ ಡಬ್ಬಿಯಲ್ಲಿ ಹಣ ಕೂಡಿಡುವ ಮೂಲಕ ನಮ್ಮ ಆರ್ಥಿಕತೆಯನ್ನು ಉಳಿಸುತ್ತಿದ್ದಾರೆ. ನಮ್ಮ ಜನಸಂಖ್ಯೆಯ ಶೇ 50ರಷ್ಟು ಮಹಿಳೆಯರಿದ್ದಾರೆ. ಅವರು ತಮ್ಮನ್ನು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳದಿದ್ದರೆ ದೇಶಕ್ಕೆ ದೊಡ್ಡ ನಷ್ಟವಾಗಲಿದೆ’ ಎಂದು ಹೇಳಿದರು. 

‘ಸೃಷ್ಟಿಯಲ್ಲಿ ತಾಯಿಯ ಸ್ಥಾನ ಅತ್ಯಂತ ಶ್ರೇಷ್ಠವಾದುದ್ದಾಗಿದೆ. ಜನ್ಮ ಪೂರ್ವ ಸಂಬಂಧ ತಾಯಿಗೆ ಮಾತ್ರ ಇದೆ. ತಂದೆ, ಅಣ್ಣ, ತಮ್ಮ ಎಲ್ಲ ಸಂಬಂಧಗಳು ಆ ಮೇಲೆ ಬರುತ್ತವೆ. ಪ್ರತಿಯೊಬ್ಬ ವ್ಯಕ್ತಿ ಈ ಭೂಮಂಡಲದ ಎಲ್ಲ ವ್ಯವಸ್ಥೆಗೆ ಹೊಂದಿಕೊಳ್ಳಲು ತಯಾರಿ ನಡೆಸುವುದೇ ತಾಯಿಯ ಗರ್ಭದಲ್ಲಿ’ ಎಂದರು.

ಸಾಧಕಿಯರಿಗೆ ಪ್ರಶಸ್ತಿ: ನಾಟಿ ವೈದ್ಯೆ ಉಮಾಬಾಯಿ ಖರೆ, ಸಮಾಜ ಸೇವಕಿ ಜ್ಯೋತಿ ಟೋಸೂರ, ಉದ್ಯಮಿ ಪಲ್ಲವಿ ರವಿ, ಸಹ ಪ್ರಾಧ್ಯಾಪಕಿ ರತ್ನಮ್ಮ ಆರ್., ವೈದ್ಯೆ ಮಮತಾ ಎಸ್.ಎಚ್., ನಿರೂಪಕಿ ನವಿತಾ ಜೈನ್, ಬಸವ ತತ್ವ ಪ್ರಚಾರಕಿ ಸುಜಾತಾ ಬಯ್ಯಾಪುರ, ಸಮಾಜ ಸೇವಕಿ ಸುಮಿತ್ರಾ ರೇಣುಕಾಚಾರ್ಯ, ರಕ್ತ ದಾನಿ ಮಧುರ ಅಶೋಕ್ ಕುಮಾರ್, ಶಿಕ್ಷಣ ತಜ್ಞೆ ಸಂದರ್ಶಿನಿ ನರೇಂದ್ರ ಕುಮಾರ್, ಕೃಷಿ ವಿಜ್ಞಾನಿ ಸುಮಾ ಬಿರಾದರ ಹಾಗೂ ಸ್ತ್ರೀರೋಗ ತಜ್ಞೆ ಡಾ. ಮಂಜುಳಾ ಎ. ಪಾಟೀಲ ಅವರಿಗೆ ‘ನಾರಿ ಸಮ್ಮಾನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT