ಸೋಮವಾರ, ಜನವರಿ 25, 2021
21 °C
ರಾಜ್ಯ ಮಟ್ಟದ ಸಮಾವೇಶದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್

‘ಜಾತಿ ಪದ್ಧತಿ ಜೀವಂತ ಇರಿಸಲು ನಿರಂತರ ಪ್ರಯತ್ನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜಾತಿ ಪದ್ಧತಿಯ ಲಾಭ ಪಡೆದುಕೊಳ್ಳುತ್ತಿರುವ ಮೇಲ್ವರ್ಗದವರು ಈ ಪದ್ಧತಿ ಜೀವಂತವಾಗಿ ಇರಿಸುವ ತಂತ್ರಗಳನ್ನು ನಿರಂತರವಾಗಿ ಮುಂದುವರಿಸುತ್ತಿದ್ದಾರೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯಪಟ್ಟರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ‘ಜಾತಿ ದಮನ ವಿರೋಧಿಸಿ, ದಲಿತರ ಹಕ್ಕಗಳಿಗಾಗಿ’ ನಗರದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಬೆವರು ಸುರಿಸದೆ ಸಂಪತ್ತು ಪಡೆಯುುವುದನ್ನು ಮೇಲ್ಜಾತಿಯವರು ರೂಢಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಈ ಪದ್ಧತಿ ಜೀವಂತ ಇರಬೇಕು ಎಂದು ಬಯಸುತ್ತಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಹಗಲು–ರಾತ್ರಿ ದುಡಿದರೂ ಊಟ ಹೊಂದಿಸಿಕೊಳ್ಳಲು ಆಗದ ಸ್ಥಿತಿಯಲ್ಲಿ ಇದ್ದಾರೆ. ಬಡತನ, ಅನಾರೋಗ್ಯ, ಅನಕ್ಷರತೆ ಇಂದಿಗೂ ಅವರನ್ನು ಕಾಡುತ್ತಿದೆ. ಇದೆಲ್ಲದಕ್ಕೂ ಜಾತಿ ವ್ಯವಸ್ಥೆಯೇ ಕಾರಣ’ ಎಂದರು.

ಜಗತ್ತಿನ ಎಲ್ಲ ಧರ್ಮಗಳೂ ಭಾರತದಲ್ಲಿ ಇವೆ. 4,635 ಜಾತಿ ಮತ್ತು ಉಪಜಾತಿಗಳಿವೆ. ಅಂತರ್ಜಾತಿ ವಿವಾಹ, ಸಹಭೋಜನ ಇಂದಿಗೂ ಸಾಧ್ಯವಾಗುತ್ತಿಲ್ಲ. ಶವಸಂಸ್ಕಾರ ಬೇರೆ ಬೇರೆ ಸ್ಮಶಾನಗಳಲ್ಲಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

‘ಭಾರತದ ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಇತಿಹಾಸದ ಉದ್ದಕ್ಕೂ ಬುದ್ಧ, ಬಸವಣ್ಣ, ಪೆರಿಯಾರ್, ಜ್ಯೋತಿಬಾಯಿ ಫುಲೆ, ಅಂಬೇಡ್ಕರ್ ಸೇರಿ ಹಲವರು ಶ್ರಮಿಸಿದ್ದಾರೆ. ಸ್ವಾತಂತ್ರ್ಯ ನಂತರ ಅಂಬೇಡ್ಕರ್ ತಮ್ಮ ಇತಿಮಿತಿಗಳ ನಡುವೆ ಶೋಷಿತರಿಗೆ, ಹಿಂದುಳಿದವರಿಗೆ ಹಾಗೂ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದರು’ ಎಂದರು.

‘ಇತ್ತೀಚಿನ ದಿನಗಳಲ್ಲಿ ಅಂತಹ ಸೌಲಭ್ಯಗಳಿಗೆ ಕಂಟಕವಾದ ನೀತಿ, ನಿಯಮಗಳನ್ನು ಸರ್ಕಾರಗಳು ಜಾರಿ ಮಾಡುತ್ತಿವೆ. ಆದಿವಾಸಿ, ಅಲೆಮಾರಿ, ಅರೆ ಅಲೆಮಾರಿ, ಕೊಳಚೆ ನಿವಾಸಿಗಳು, ದೇವದಾಸಿ ಮಕ್ಕಳು ಮೀಸಲಾತಿ ಸೌಲಭ್ಯವನ್ನು ಇಂದಿಗೂ ಪಡೆಯಲು ಆಗಿಲ್ಲ. ಅವರಿಗೆ ಪ್ರಾಥಮಿಕ ಶಿಕ್ಷಣವೇ ದೊರೆತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ಕೆಲ ಉದ್ದಿಮೆಗಳನ್ನು ಮುಚ್ಚಲಾಗುತ್ತಿದೆ. ‍ಇದರ ಪರಿಣಾಮ ತಳ ಸಮುದಾಯಗಳ ಮೇಲೆ ಬೀರುತ್ತಿದೆ. ಮೀಸಲಾತಿ ಪರಿಕಲ್ಪನೆಯನ್ನು ಇವು ಬುಡಮೇಲು ಮಾಡುತ್ತಿವೆ. ಈ ರೀತಿಯ ಸಮಸ್ಯೆಗಳನ್ನು ಹುಡುಕಿ ಪರಿಹಾರ ಕಂಡುಕೊಳ್ಳಲು ಯುವಕರು ಮುಂದಾಗಬೇಕು‘ ಎಂದರು.

ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್, ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್, ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಮ್ಮ, ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.