ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ ಸುರಂಗ ಕಾಮಗಾರಿ: ಕಂಪಿಸಿದ ಕಟ್ಟಡಗಳು

ಶಿವಾಜಿ ನಗರದ ಪೊಲೀಸ್‌ ಠಾಣೆ ಬಳಿ ಅಡಿಪಾಯದ ಭಾಗ ಕುಸಿತ
Last Updated 9 ಏಪ್ರಿಲ್ 2021, 21:41 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕಂಟೋನ್ಮೆಂಟ್‌ ನಿಲ್ದಾಣದಿಂದ ಶಿವಾಜಿನಗರದವರೆಗೆ ಸುರಂಗ ಮಾರ್ಗ ಕೊರೆಯುವ ಕಾಮಗಾರಿ ನಡೆಯುತ್ತಿದ್ದು, ಶುಕ್ರವಾರ ಮಧ್ಯಾಹ್ನ ಇಲ್ಲಿನ ಕಟ್ಟಡಗಳು ಕಂಪಿಸಿವೆ.

ಶಿವಾಜಿ ನಗರ ಪೊಲೀಸ್‌ ಠಾಣೆಯಿಂದ ಸುಮಾರು 20 ಅಡಿ ದೂರದಲ್ಲಿರುವ ಬಹುಅಂತಸ್ತಿನ ಕಟ್ಟಡವೊಂದರ ಅಡಿಪಾಯದ ಬಳಿಯ ಸ್ವಲ್ಪ ಭಾಗ ಕುಸಿದಿದೆ. ಯಾವುದೇ ಅವಘಡ ಸಂಭವಿಸಿರದಿದ್ದರೂ ಸ್ಥಳೀಯರು ಆತಂಕಗೊಂಡಿದ್ದಾರೆ.

‘ಮದೀನಾ ನಗರದಿಂದ ಶಿವಾಜಿನಗರ ಬಸ್‌ ನಿಲ್ದಾಣದವರೆಗೆ ಸುರಂಗ ಕೊರೆಯಲಾಗುತ್ತಿದೆ. ಕೇವಲ 1 ಕಿ.ಮೀ. ಅಂತರದಲ್ಲಿ ಇದು ಮೂರನೇ ಬಾರಿ ಈ ರೀತಿ ಕಟ್ಟಡಗಳು ಅಲುಗಾಡುವ ಸಂದರ್ಭ ನೋಡುತ್ತಿದ್ದೇವೆ. ಆತಂಕವಾಗುತ್ತಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.

ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಕಟ್ಟಡದ ಅಡಿಪಾಯದ ಬದಿಯ ಭಾಗ ಕುಸಿದಿದೆ. ಈ ಕಟ್ಟಡದಲ್ಲಿ ವಾಸವಿದ್ದವರು ನಿಗಮದ ಸೂಚನೆ ಮೇರೆಗೆ ನಾಲ್ಕು ದಿನಗಳ ಹಿಂದೆಯೇ ಮನೆ ಖಾಲಿ ಮಾಡಿದ್ದಾರೆ. ಆದರೆ, ಮನೆಯಲ್ಲಿನ ವಸ್ತುಗಳು ಹಾಗೇ ಇದ್ದವು. ಮೆಟ್ರೊ ಕಾರ್ಮಿಕರು ಸಂಜೆ 4ರವರೆಗೂ ವಸ್ತುಗಳನ್ನೆಲ್ಲ ತೆರವುಗೊಳಿಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.

‘ಕಟ್ಟಡದ ಕೆಳಗಡೆಯೇ ವಿದ್ಯುತ್‌ ಕಂಬ ಇದೆ. ಕಟ್ಟಡದ ಸ್ವಲ್ಪ ದೂರದಲ್ಲಿನ ಮನೆಗಳಲ್ಲಿ ಜನ ವಾಸಿಸುತ್ತಿದ್ದಾರೆ. ಎರಡು–ಮೂರು ದಿನಗಳಲ್ಲಿ ರಂಜಾನ್‌ ಕೂಡ ಇದೆ. ಹೆಚ್ಚು ಜನ ಶಿವಾಜಿ ನಗರದಲ್ಲಿ ಓಡಾಡುತ್ತಾರೆ. ಈ ವೇಳೆಯಲ್ಲಿ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ಬಿಎಂಆರ್‌ಸಿಎಲ್ ತೆಗೆದುಕೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ, ಹಿರಿಯ ನಾಗರಿಕ ಮಹಮ್ಮದ್ ಸಿದ್ದಿಕಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಿವಾಜಿನಗರ ನಗರದ ಅತಿ ಹಳೆಯ ಪ್ರದೇಶ. ಹಳೆಯ ಕಟ್ಟಡಗಳು ಇಲ್ಲಿವೆ. ಅಲ್ಲದೆ, ಭೂಮಿಯ ತೀರಾ ಮೇಲ್ಮಟ್ಟದಲ್ಲಿ ನೀರು ಮತ್ತು ದೊಡ್ಡ ಬಂಡೆಗಳು ಇವೆ. ಅದರ ಮೇಲೆ ಈ ಪ್ರದೇಶ ನಿರ್ಮಾಣವಾಗಿದೆ. ಸುರಂಗ ಕೊರೆಯುವಾಗ ಎಷ್ಟು ಜಾಗ್ರತೆ ವಹಿಸಿದರೂ ಕಡಿಮೆಯೇ’ ಎಂದು ಅವರು ಹೇಳಿದರು.

‘ಹಗಲು ಮತ್ತು ರಾತ್ರಿಯ ವೇಳೆ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿರುತ್ತಾರೆ. ನಿಗಮದ ಅಧಿಕಾರಿಯೊಬ್ಬರು ಸ್ಥಳದಲ್ಲಿರಬೇಕು. ಮೇಲ್ವಿಚಾರಕರೊಬ್ಬರನ್ನು ನೇಮಕ ಮಾಡುವ ಅಗತ್ಯವಿದೆ’ ಎಂದು ಅವರು ಸಲಹೆ ನೀಡಿದರು.

‘ಮೊದಲನೇ ಹಂತದ ಅನುಭವದ ಆಧಾರದ ಮೇಲೆ ಈ ಬಾರಿ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಕಾಮಗಾರಿ ವೇಳೆ ಯಾವ ಕಟ್ಟಡಗಳಿಗೆ ಹಾನಿ ಆಗಬಹುದು ಎಂಬ ಸಮೀಕ್ಷೆ ನಡೆಸಿ, ಆ ಕಟ್ಟಡಗಳಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಟ್ಟಡದವರು ವಸ್ತುಗಳನ್ನು ತೆರವುಗೊಳಿಸದಿದ್ದ ಕಾರಣ, ನಮ್ಮ ಕಾರ್ಮಿಕರೇ ಅವುಗಳನ್ನು ತೆರವುಗೊಳಿಸಿದ್ದಾರೆ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಯಾವಾಗಲೂ ಮೇಲ್ವಿಚಾರಕರೊಬ್ಬರು ಇರುತ್ತಾರೆ’ ಎಂದೂ ಹೇಳಿದರು.

ರಾಕೇಶ್‌ ಸಿಂಗ್‌ಗೆ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಹೊಣೆ
ಬೆಂಗಳೂರು:
ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಹಿರಿಯ ಐಎಎಸ್‌ ಅಧಿಕಾರಿಯಾಗಿರುವ ರಾಕೇಶ್‌ ಸಿಂಗ್‌ ಅವರು ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನೂ ನಿಭಾಯಿಸುತ್ತಿದ್ದಾರೆ.

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಜಯ್‌ ಸೇಠ್‌ ಅವರು ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT