ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಸಲು ಸಮಸ್ಯೆ

ಟೋಕನ್ ವಿತರಣೆ ವ್ಯವಸ್ಥೆ ಪ್ರಾರಂಭಿಸಲು ಒತ್ತಾಯ
Last Updated 10 ಫೆಬ್ರುವರಿ 2021, 16:37 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಸುವುದಕ್ಕೆ ತೊಂದರೆಯಾಗುತ್ತಿದ್ದು, ಕೂಡಲೇ ಟೋಕನ್ ವಿತರಣೆ ವ್ಯವಸ್ಥೆ ಆರಂಭಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

‘ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಸಬೇಕೆಂದರೆ ನಗದು ತೆಗೆದುಕೊಳ್ಳುತ್ತಿಲ್ಲ. ಡೆಬಿಟ್ ಕಾರ್ಡ್‌ ಮೂಲಕ ಅಥವಾ ಡಿಜಿಟಲ್ ಮಾಧ್ಯಮಗಳ ಮೂಲಕ ಹಣ ಪಾವತಿಸಿ, ರಿಚಾರ್ಜ್ ಮಾಡಿಸಬೇಕು. ಡೆಬಿಟ್‌ ಕಾರ್ಡ್‌ ತೆಗೆದುಕೊಂಡು ಹೋಗಿರದಿದ್ದರೆ ತುಂಬಾ ಸಮಸ್ಯೆಯಾಗುತ್ತದೆ’ ಎಂದು ಪ್ರಯಾಣಿಕ ವಿಜಯ್‌ ಹೇಳಿದರು.

‘ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಸಲು ಹೋಗಿದ್ದೆ. ಎಟಿಎಂ ಕಾರ್ಡ್‌ ನನ್ನ ಬಳಿ ಇರಲಿಲ್ಲ. ಫೋನ್‌ ಪೇ ಅಥವಾ ಗೂಗಲ್‌ ಪೇ ಮಾಡುತ್ತೇನೆ ಎಂದರೂ ಸಿಬ್ಬಂದಿ ಅದನ್ನು ಸ್ವೀಕರಿಸಲಿಲ್ಲ. ಗೂಗಲ್‌ ಪೇ ಮೂಲಕ ಪಾವತಿಸುವ ವೇಳೆ ತಾಂತ್ರಿಕ ಸಮಸ್ಯೆಯಾಗುತ್ತಿದೆ ಎಂದರು. ಕೊನೆಗೆ ಆಟೊದಲ್ಲಿ ಹೋಗಬೇಕಾಯಿತು’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಗೂಗಲ್ ಪೇ ಮಾಡುವಾಗ ಬೇಗ ಮೆಸೇಜ್ ಬರುವುದಿಲ್ಲ. ಇದರಿಂದ ಈ ಮಾಧ್ಯಮಗಳಲ್ಲಿ ಹಣ ಪಾವತಿಸಲು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಆದರೆ, ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ’ ಎಂದು ಮತ್ತೊಬ್ಬ ಪ್ರಯಾಣಿಕ ರಮೇಶ್ ದೂರಿದರು.

‘ಕೋವಿಡ್ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈಗಾಗಲೇ ಲಸಿಕೆಯೂ ಬಂದಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ, ಚಿತ್ರಮಂದಿರಗಳಲ್ಲಿಯೂ ಹೆಚ್ಚು ಜನ ಸೇರುತ್ತಿದ್ದಾರೆ. ಆದರೆ, ಮೆಟ್ರೊ ನಿಲ್ದಾಣಗಳಲ್ಲಿ ಮಾತ್ರ ಟೋಕನ್ ವಿತರಿಸುತ್ತಿಲ್ಲ ಎಂಬುದು ವಿಚಿತ್ರ ಎನಿಸುತ್ತದೆ’ ಎಂದು ಪ್ರಯಾಣಿಕ ಓಂಕಾರ್ ಪ್ರಸಾದ್ ಹೇಳಿದರು.

‘ಸ್ಮಾರ್ಟ್‌ಕಾರ್ಡ್‌ನಲ್ಲಿ ಕನಿಷ್ಠ ₹50 ಬಾಕಿ ಇರಲೇಬೇಕು. ಸ್ಮಾರ್ಟ್‌ಕಾರ್ಡ್‌ಗೆ ₹50 ಶುಲ್ಕ ಇದೆ. ಅಂದರೆ, ಒಮ್ಮೆ ಪ್ರಯಾಣಿಸಲು ಕನಿಷ್ಠ ₹180 ಬೇಕಾಗುತ್ತದೆ. ಬೇರೆ ಊರಿನಿಂದ ಬಂದವರು ಅಥವಾ ಹೋಗುವವರಿಗೆ, ಒಮ್ಮೆ ಮಾತ್ರ ಸಂಚರಿಸುವವರಿಗೆ ತುಂಬಾ ಹೊರೆ ಎನಿಸುತ್ತಿದೆ. ಟೋಕನ್‌ ವಿತರಣೆ ವ್ಯವಸ್ಥೆಯನ್ನು ಕೂಡಲೇ ಆರಂಭಿಸಬೇಕು’ ಎಂದು ಅವರು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಅವರಿಗೆ ಕರೆ ಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT