ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಸ್ಪೋಟಕ್ಕೆ ಸಂಚು: ಸಂಚುಕೋರನ ಬಂಧನಕ್ಕೆ ಎನ್‌ಐಎ ತಯಾರಿ

Published 23 ಜುಲೈ 2023, 21:10 IST
Last Updated 23 ಜುಲೈ 2023, 21:10 IST
ಅಕ್ಷರ ಗಾತ್ರ

ಬೆಂಗಳೂರು: ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಜುನೇದ್ ಅಹಮ್ಮದ್ ಬಂಧನಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಯಾರಿ ಆರಂಭಿಸಿದ್ದು, ಸದ್ಯದಲ್ಲೇ ಲುಕ್ ಔಟ್ ನೋಟಿಸ್ ಹೊರಡಿಸುವ ಸಾಧ್ಯತೆ ಇದೆ.

ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು, ಜುನೇದ್‌ ಸಹಚರರಾದ ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ, ಹಾಗೂ ಮೊಹಮ್ಮದ್ ಉಮರ್‌ನನ್ನು ಈಗಾಗಲೇ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಗೆ ನಿರ್ದೇಶನ ನೀಡುತ್ತಿದ್ದ ಜುನೇದ್, ದುಬೈಗೆ ಹೋಗಿ ತಲೆಮರೆಸಿಕೊಂಡಿದ್ದಾನೆ. ಈತನನ್ನು ಬಂಧಿಸಲು ಕಾನೂನು ಕ್ರಮ ಕೈಗೊಳ್ಳುವಂತೆ ಸಿಸಿಬಿ ಪೊಲೀಸರು, ಎನ್‌ಐಎ ಸಹಾಯ ಕೋರಿದ್ದಾರೆ. ಇದೇ ಕಾರಣಕ್ಕೆ ಎನ್‌ಐಎ ಅಧಿಕಾರಿಗಳು, ಲುಕ್‌ ಔಟ್ ನೋಟಿಸ್ ಹೊರಡಿಸಲಿದ್ದಾರೆ. 

‘ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ ಟಿ. ನಾಸೀರ್‌ಗೆ ಆಪ್ತನಾಗಿದ್ದ ಜುನೇದ್, ತನ್ನ ಸಹಚರರ ಮೂಲಕ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ. ವಿದೇಶದಲ್ಲಿದ್ದುಕೊಂಡು ಸಹಚರರಿಗೆ ಅಗತ್ಯವಿದ್ದ ಹಣ ಹಾಗೂ ಸ್ಫೋಟಕಗಳನ್ನು ಪೂರೈಕೆ ಮಾಡುತ್ತಿದ್ದನೆಂಬ ಸಂಗತಿ ಗೊತ್ತಾಗಿದೆ. ಹೀಗಾಗಿ, ಜುನೇದ್‌ನನ್ನು ಬಂಧಿಸಲು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಲುಕ್ ಔಟ್ ನೋಟಿಸ್‌ ಹೊರಡಿಸಿದ ನಂತರ, ಎಲ್ಲ ವಿಮಾನ ನಿಲ್ದಾಣ ಹಾಗೂ ವಿದೇಶಿ ಪೊಲೀಸರಿಗೆ ಮಾಹಿತಿ ರವಾನೆಯಾಗಲಿದೆ. ನಂತರ, ವಿದೇಶದ ಪೊಲೀಸರ ಮೂಲಕ ಜುನೇದ್‌ನನ್ನು ಕಸ್ಟಡಿಗೆ ಪಡೆಯಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿವೆ.

ವಿಧ್ವಂಸಕ ಕೃತ್ಯಕ್ಕೆ ವಿದೇಶಿಗರ ದೇಣಿಗೆ: ‘ದುಬೈ ಹಾಗೂ ಇತರೆ ದೇಶದಲ್ಲಿರುವ ಕೆಲವರು, ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ದೇಣಿಗೆ ನೀಡುತ್ತಿರುವ ಮಾಹಿತಿ ಇದೆ. ಅದೇ ಹಣವನ್ನು ಜುನೇದ್, ಭಾರತದಲ್ಲಿರುವ ತನ್ನ ಸಹಚರರಿಗೆ ನೀಡುತ್ತಿದ್ದನೆಂಬ ಸಂಗತಿಯೂ ಬಂಧಿತ ಆರೋಪಿಗಳ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದುಬೈನಿಂದಲೇ ಸಹಚರರ ಜೊತೆ ಮಾತನಾಡುತ್ತಿದ್ದ ಜುನೇದ್, ಭಾರತದಲ್ಲಿರುವ ಕೆಲ ಶಂಕಿತರ ಮೂಲಕ ಕಾರು ಹಾಗೂ ರೈಲಿನಲ್ಲಿ ಸಹಚರರಿಗೆ ಸ್ಫೋಟಕಗಳನ್ನು ಕಳುಹಿಸುತ್ತಿದ್ದ. ಅದೇ ಸ್ಫೋಟಕಗಳನ್ನು ಸಹಚರರು, ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

‘ರಾಜ್ಯದಲ್ಲಿ ಮತ್ತಷ್ಟು ಕಡೆ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿರುವ ಅನುಮಾನವಿದೆ. ಜುನೇದ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕವೇ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಜೊತೆಗೆ, ಟಿ. ನಾಸೀರ್ ವಿಚಾರಣೆಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಇದಕ್ಕೆ ನ್ಯಾಯಾಲಯದಿಂದ ಅನುಮತಿ ಪಡೆಯಬೇಕಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT