ಭಾನುವಾರ, ಏಪ್ರಿಲ್ 5, 2020
19 °C
ಬೇಲೆಕೇರಿ ಬಂದರು ಅಭಿವೃದ್ಧಿಗೆ ಸಂಕಲ್ಪ

ನವ ಬೆಂಗಳೂರು ಅಭಿವೃದ್ಧಿ ಚಿಂತನೆ: ಸಚಿವ ಜಗದೀಶ ಶೆಟ್ಟರ್‌ ‌ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನವಿ ಮುಂಬೈ’ ಮಾದರಿಯಲ್ಲಿ ‘ನವ ಬೆಂಗಳೂರು’ ಅಭಿವೃದ್ಧಿ ಚಿಂತನೆ ನಡೆದಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಎನ್‌.ಎ.ಹ್ಯಾರಿಸ್‌ ಪ್ರಶ್ನೆಗೆ ಉತ್ತರಿಸಿದ  ಅವರು, ಬೆಂಗಳೂರು ನಗರದಿಂದ 40 ರಿಂದ 50 ಕಿ.ಮೀ ದೂರದಲ್ಲಿ ನವ ಬೆಂಗಳೂರು ಅಭಿವೃದ್ಧಿ ಮಾಡಬೇಕು ಎಂಬ ಸಲಹೆಗಳಿವೆ. ಇದರಿಂದ ಬೆಂಗಳೂರು ನಗರದ ಮೇಲಿನ ಒತ್ತಡವನ್ನು ತಗ್ಗಿಸಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಬೇಲೆಕೇರಿ ಬಂದರು ಅಭಿವೃದ್ಧಿಪಡಿಸಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿರುವ ಸಕ್ಕರೆ ಕಾರ್ಖಾನೆಗಳು ತಯಾರಿಸುವ ಸಕ್ಕರೆಯನ್ನು ರಫ್ತು ಮಾಡಲು ಮುಂಬೈ ಬಂದರಿಗೆ ಸಾಗಿಸಲಾಗುತ್ತಿದೆ ಎಂದರು.

ಬೇಲೆಕೇರಿ ಬಂದು ಅಭಿವೃದ್ಧಿಪಡಿಸಿದರೆ, ಸಕ್ಕರೆ ಮಾತ್ರವಲ್ಲ, ಉತ್ತರ ಕರ್ನಾಟಕದಲ್ಲಿ ಸ್ಥಾಪಿತಗೊಳ್ಳುವ ಕೈಗಾರಿಕೆಗಳ ಎಲ್ಲ ಉತ್ಪನ್ನಗಳನ್ನೂ ರಫ್ತು ಮಾಡಬಹುದು. ಬೇಲೆಕೇರಿ ಬಂದರು ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಕೇಂದ್ರ ಸರ್ಕಾರವೂ ತಿಳಿಸಿದೆ ಎಂದರು. 

ಕೈಗಾರಿಕೆಗಳು ಕೇವಲ ಬೆಂಗಳೂರಿನಲ್ಲೇ ಕೇಂದ್ರೀಕೃತವಾಗುವುದನ್ನು ತಪ್ಪಿಸಲು ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಉತ್ತೇಜನ ನೀಡಲಾಗಿದೆ. ಹೊಸ ಕೈಗಾರಿಕಾ ನೀತಿ ಕರಡು ಸಿದ್ಧಪಡಿಸಲಾಗಿದೆ. ಹಣಕಾಸು ಇಲಾಖೆಯ ಒಪ್ಪಿಗೆ ಸಿಗಬೇಕಾಗಿದೆ. ಇದರಲ್ಲಿ ತೆರಿಗೆ ವಿನಾಯ್ತಿ ಸೇರಿದಂತೆ ಹಲವು ರೀತಿಯ ರಿಯಾಯ್ತಿಗಳನ್ನೂ ನೀಡಲಾಗುವುದು ಎಂದು ಶೆಟ್ಟರ್‌ ತಿಳಿಸಿದರು.

ರಾಜ್ಯದಲ್ಲಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಗೊಂಡಿದ್ದರೂ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಮಂಗಳೂರಿನಲ್ಲಿ ಎಂಆರ್‌ಪಿಎಲ್‌ ಮತ್ತು ಓಎನ್‌ಜಿಸಿ ಸ್ಥಾಪನೆಗೊಂಡಿವೆ. ಅಲ್ಲಿ ತಮಿಳುನಾಡು ಮತ್ತು ಕೇರಳದವರಿಗೇ ಹೆಚ್ಚಿನಸಂಖ್ಯೆಯಲ್ಲಿ ಉದ್ಯೋಗ ನೀಡಲಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಸಚಿವರು, ಉದ್ಯಮಗಳಲ್ಲಿ ಶೇ 80ರಷ್ಟು ಉದ್ಯೋಗ ಗಳನ್ನು ಕನ್ನಡಿಗರಿಗೆ  ನೀಡಬೇಕು ಎಂಬ ಪ್ರಸ್ತಾವನೆ ಹೊಸ ನೀತಿಯಲ್ಲಿದೆ ಎಂದರು. ಕಳೆದ ಮೂರು ವರ್ಷಗಳಲ್ಲಿ 491 ಮಧ್ಯಮ ಹಂತದ ಕೈಗಾರಿಕೆಗಳು ಸ್ಥಾಪನೆಗೊಂಡಿವೆ. ಒಟ್ಟು 23,409 ಮಂದಿಗೆ ಉದ್ಯೋಗ ಸಿಕ್ಕಿದೆ ಎಂದರು.

ಅಂಕೋಲ– ಹುಬ್ಬಳ್ಳಿ ರೈಲಿಗೆ ಒತ್ತಾಯ
ಉತ್ತರ ಕರ್ನಾಟಕದಲ್ಲಿ ಕೈಗಾರಿಗೆ ಅಭಿವೃದ್ಧಿ ಆಗಬೇಕಿದ್ದರೆ ಹುಬ್ಬಳ್ಳಿ– ಅಂಕೋಲ ರೈಲು ಅಗತ್ಯವಿದೆ. ವನ್ಯಜೀವಿ ಮಂಡಳಿಯಲ್ಲಿ ಆಕ್ಷೇಪ ವ್ಯಕ್ತವಾಗಿದ್ದರಿಂದ ಅದಕ್ಕೆ ತಡೆ ಬಿದ್ದಿದೆ. ಇದಕ್ಕೆ ಚಾಲನೆ ನೀಡಬೇಕು. ಉತ್ತರ ಕರ್ನಾಟಕ ಕೈಗಾರಿಕೆ ಉತ್ಪನ್ನ ಸಾಗಿಸಲು ಈ ರೈಲ್ವೇ ಯೋಜನೆ ಅನುಕೂಲವಾಗಲಿದೆ ಎಂದು ಆನಂದ ನ್ಯಾಮೇಗೌಡ ಮತ್ತಿತರ ಶಾಸಕರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು