ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಟಿಪ್ಲೆಕ್ಸ್ ಆಗಲಿದೆ ‘ನವರಂಗ್’

Last Updated 30 ಆಗಸ್ಟ್ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ಸದ್ಯ ಬಾಗಿಲು ಮುಚ್ಚಿರುವ ನವರಂಗ ಚಿತ್ರಮಂದಿರ, ಶೀಘ್ರದಲ್ಲೇ ಮಲ್ಟಿಪ್ಲೆಕ್ಸ್‌ ರೂಪದಲ್ಲಿ ತೆರೆದುಕೊಳ್ಳಲಿದೆ.

‘ಚಿತ್ರ ಮಂದಿರ ಬೀಳಿಸಿ ಶಾಪಿಂಗ್ ಮಾಲ್ ನಿರ್ಮಾಣ ಮಾಡುವಂತೆ ಹಲವರು ಸಲಹೆ ನೀಡಿದರು. ಚಿತ್ರ ಮಂದಿರ ನಮ್ಮ ತಂದೆಯ ಕನಸಾಗಿದ್ದ ಕಾರಣ ಅದನ್ನು ಹಾಳು ಮಾಡಲು ನನಗೆ ಇಷ್ಟ ಇಲ್ಲ. ಹಾಗಾಗಿಯೇ, ಮಲ್ಟಿಪ್ಲೆಕ್ಸ್‌ ಮಾಡುತ್ತಿದ್ದೇವೆ’ ಎಂದು ಚಿತ್ರಮಂದಿರದ ಮಾಲೀಕ ಕೆ.ಸಿ.ಎನ್ ಮೋಹನ್ ತಿಳಿಸಿದರು.

₹85 ಸಾವಿರಕ್ಕೆ ಖರೀದಿ: ರಾಜಾಜಿ ನಗರದಲ್ಲಿ 26 ಸಾವಿರ ಚದರ ಅಡಿ ನಾಗರಿಕ ಸೌಲಭ್ಯ(ಸಿಎ) ನಿವೇಶನವನ್ನು ಅಂದಿನ ನಗರಾಭಿವೃದ್ಧಿ ಟ್ರಸ್ಟ್‌ ಮಂಡಳಿ ಹರಾಜು ಹಾಕಿತ್ತು. ದೊಡ್ಡಬಳ್ಳಾಪುರ ಮೂಲದ ಜವಳಿ ಉದ್ಯಮಿ ಕೆಸಿಎನ್‌ ಗೌಡ ಅವರು ₹85 ಸಾವಿರಕ್ಕೆ ಖರೀದಿ ಮಾಡಿದ್ದರು.

1961ರ ಜೂನ್‌ 30ರಂದು ಮೈಸೂರು ರಾಜ್ಯದ ಅಂದಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ ಅವರು ಚಿತ್ರ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 1963ರ ಆಗಸ್ಟ್‌ 22ರಂದು ಎಸ್. ನಿಜಲಿಂಗಪ್ಪ ಉದ್ಘಾಟಿಸಿದ್ದರು.

ಆಸ್ಟ್ರೇಲಿಯಾದ ವಾಸ್ತುಶಿಲ್ಪಿ ಐಸಾಕ್ ವಿನ್ಸೆಂಟ್‌ ಎಂಬುವರು ವಿನ್ಯಾಸ ರೂಪಿಸಿದ್ದರು. ಒಂಬತ್ತು ಬಣ್ಣ ಅಥವಾ ಭಾರತೀಯ ಶಾಸ್ತ್ರೀಯ ಕಲೆಯ ಒಂಬತ್ತು ಭಾವನೆಗಳ ಪ್ರತೀಕವಾಗಿ ‘ನವರಂಗ್’ ಎಂಬ ಹೆಸರನ್ನು ಈ ಚಿತ್ರಮಂದಿರಕ್ಕೆ ಕೆ.ಸಿ.ಎನ್ ಗೌಡ ಇಟ್ಟರು.

ಡಾ.ರಾಜ್‌ಕುಮಾರ್ ಅಭಿನಯದ ‘ವೀರಕೇಸರಿ’ಯೇ ಇಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರ. 2004ರಲ್ಲಿ ಬಾಲ್ಕನಿಯ ಸೀಟುಗಳ ಸಂಖ್ಯೆಯನ್ನು 180ರಿಂದ 360ಕ್ಕೆ ಹೆಚ್ಚಿಸಲಾಯಿತು.

‘ಡಾ. ರಾಜ್‌ಕುಮಾರ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅಭಿನಯದ ಬಹುತೇಕ ಸಿನಿಮಾಗಳು ಇದೇ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿವೆ. ಮಲ್ಟಿಪ್ಲೆಕ್ಸ್‌ಗಳು ಬೆಂಗಳೂರಿನಲ್ಲಿ ಲಗ್ಗೆ ಇಟ್ಟ ಬಳಿಕ ಆದಾಯ ಕಡಿಮೆ ಆಗತೊಡಗಿತು’ ಎಂದು ಮೋಹನ್‌ ತಿಳಿಸಿದರು.

ಆದಾಯದ ‘ಮಳೆ’

2006ರಲ್ಲಿ ತೆರೆಕಂಡ ‘ಮುಂಗಾರು ಮಳೆ’ ಚಲನಚಿತ್ರ 25 ವಾರಗಳ ಕಾಲ ಪ್ರದರ್ಶನಗೊಂಡಿತ್ತು. ಈ ಚಿತ್ರ ಮಂದಿರದಲ್ಲಿ ಹೆಚ್ಚು ದಿನ ಪ್ರದರ್ಶನಗೊಂಡ ಚಿತ್ರ ಇದಾಗಿದೆ. ಚಿತ್ರಮಂದಿರದ ಆದಾಯ ಬಿಟ್ಟು, ನಿರ್ಮಾಪಕರಿಗೆ ₹50 ಲಕ್ಷ ಲಾಭ ತಂದುಕೊಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT