ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಸಾಗಿಸುತ್ತಿದ್ದ ‘ಸ್ವಿಗ್ಗಿ’ ಡೆಲಿವರಿ ಬಾಯ್ ಬಂಧನ

ಎನ್‌ಸಿಬಿ ಕಾರ್ಯಾಚರಣೆ; 140 ಕೆ.ಜಿ ಗಾಂಜಾ, ಎರಡು ಕಾರು ಜಪ್ತಿ
Last Updated 2 ಅಕ್ಟೋಬರ್ 2021, 15:02 IST
ಅಕ್ಷರ ಗಾತ್ರ

ಬೆಂಗಳೂರು: ಆಹಾರ ಪೊಟ್ಟಣಗಳ ಜೊತೆಯಲ್ಲಿ ‘ಡ್ರಗ್ಸ್’ ಬಚ್ಚಿಟ್ಟು ಗ್ರಾಹಕರಿಗೆ ಪೊರೈಕೆ ಮಾಡುತ್ತಿದ್ದ ಆರೋಪದಡಿ ‘ಸ್ವಿಗ್ಗಿ’ ಡೆಲಿವರಿ ಬಾಯ್ ಸೇರಿ ಏಳು ಮಂದಿಯನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.

‘ನಗರದಲ್ಲಿ ವ್ಯವಸ್ಥಿತವಾಗಿ ಡ್ರಗ್ಸ್ ಮಾರುತ್ತಿದ್ದ ಜಾಲವನ್ನು ಭೇದಿಸಿ, ಏಳು ಮಂದಿಯನ್ನು ಸೆರೆ ಹಿಡಿಯಲಾಗಿದೆ. 140 ಕೆ.ಜಿ ಡ್ರಗ್ಸ್ ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಎನ್‌ಸಿಬಿ ವಲಯ ನಿರ್ದೇಶಕ ಅಮಿತ್ ಘಾವಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಾಂಜಾವನ್ನು ಬಾಕ್ಸ್‌ಗಳಲ್ಲಿ ತುಂಬಿ ಕೋರಿಯರ್ ಮೂಲಕ ನಗರಕ್ಕೆ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿ, ಮಾರುತಿ ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ 8 ಬಾಕ್ಸ್‌ಗಳನ್ನು ಜಪ್ತಿ ಮಾಡಿ, ಇಬ್ಬರನ್ನು ಬಂಧಿಸಲಾಯಿತು. ಆ ಬಾಕ್ಸ್‌ಗಳಲ್ಲಿ 137 ಕೆ.ಜಿ ಗಾಂಜಾ ಇತ್ತು’ ಎಂದೂ ಹೇಳಿದರು.

‘ಬಂಧಿತ ಆರೋಪಿಗಳ ಮನೆ ಮೇಲೂ ದಾಳಿ ಮಾಡಿ, ನಗದು ಜಪ್ತಿ ಮಾಡಲಾಯಿತು. ಬಂಧಿತ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ, ‘ಸ್ವಿಗ್ಗಿ’ ಡೆಲಿವರಿ ಬಾಯ್ ಬಂಧಿಸಲಾಯಿತು. ಈತನ ಬಳಿಯೂ 3 ಕೆ.ಜಿ ಗಾಂಜಾ ಪತ್ತೆಯಾಗಿದೆ’ ಎಂದೂ ತಿಳಿಸಿದರು.

‘10 ಗ್ರಾಂ ಹಾಗೂ 50 ಗ್ರಾಂ ತೂಕದ ಗಾಂಜಾ ಪೊಟ್ಟಣಗಳನ್ನು ಡೆಲಿವರಿ ಬಾಯ್ ಸಿದ್ಧಪಡಿಸಿದ್ದ. ‘ಆ್ಯಪ್‌’ ಮೂಲಕ ಆಹಾರ ಖರೀದಿಸುತ್ತಿದ್ದ ಗ್ರಾಹಕರು, ಗಾಂಜಾವನ್ನೂ ತರುವಂತೆ ‘ಕೋಡ್’ ಮೂಲಕ ತಿಳಿಸುತ್ತಿದ್ದರು. ಆರೋಪಿ, ಆಹಾರದ ಪೊಟ್ಟಣಗಳಲ್ಲಿ ಗಾಂಜಾ ಪೊಟ್ಟಣವನ್ನು ಬಚ್ಚಿಟ್ಟುಕೊಂಡು ಗ್ರಾಹಕರ ಮನೆಗೆ ತಲುಪಿಸುತ್ತಿದ್ದ.’

‘ಗಾಂಜಾ ಸಾಗಣೆ ಹಾಗೂ ಮಾರಾಟಕ್ಕೆ ಇತರೆ ಆರೋಪಿಗಳು ಸಹಕಾರ ನೀಡುತ್ತಿದ್ದರು. ಇದರಿಂದಲೇ ಅಕ್ರಮವಾಗಿ ಹಣ ಗಳಿಸುತ್ತಿದ್ದರು. ಬಂಧಿತ ಡೆಲಿವರಿ ಬಾಯ್‌, ಡ್ರಗ್ಸ್ ಜಾಲದ ಪ್ರಮುಖ ರೂವಾರಿ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಘಾವಟೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT