ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂತ್ರಪಿಂಡ ಸಮಸ್ಯೆ: ರೋಗಿಗಳ ಸಂಖ್ಯೆ ಹೆಚ್ಚಳ

ನೆಫ್ರೊ–ಯುರಾಲಾಜಿ ಸಂಸ್ಥೆಯಲ್ಲಿ 5 ವರ್ಷಗಳಲ್ಲಿ 4.21 ಲಕ್ಷ ಮಂದಿಗೆ ಚಿಕಿತ್ಸೆ
Published 14 ಮೇ 2024, 19:54 IST
Last Updated 14 ಮೇ 2024, 19:54 IST
ಅಕ್ಷರ ಗಾತ್ರ

ಬೆಂಗಳೂರು: ಮೂತ್ರಪಿಂಡ ಹಾಗೂ ಮೂತ್ರಕೋಶ ಸಮಸ್ಯೆಗೆ ಚಿಕಿತ್ಸೆ ಸಂಬಂಧ ನಗರದ ನೆಫ್ರೊ–ಯುರಾಲಾಜಿ ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಕಳೆದ ಐದು ವರ್ಷಗಳಲ್ಲಿ 4.21 ಲಕ್ಷ ಮಂದಿ ಚಿಕಿತ್ಸೆ ಪಡೆದಿದ್ದಾರೆ. 

ಮಧುಮೇಹ, ಅಧಿಕ ರಕ್ತದೊತ್ತಡ, ನೋವು ನಿವಾರಕ ಮಾತ್ರೆಗಳ ಸೇವನೆ ಸೇರಿ ವಿವಿಧ ಕಾರಣಗಳಿಂದ ಈ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗಿದೆ. ರಾಜ್ಯದ ವಿವಿಧೆಡೆಯ ಜತೆಗೆ ನೆರೆಯ ರಾಜ್ಯಗಳಿಂದಲೂ ಮೂತ್ರಪಿಂಡ ಮತ್ತು ಮೂತ್ರಕೋಶ ಸಮಸ್ಯೆಗಳ ಚಿಕಿತ್ಸೆ ಸಂಬಂಧ ಸಂಸ್ಥೆಗೆ ರೋಗಿಗಳು ಬರುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಸಂಸ್ಥೆಯು, 2007ರಿಂದ ಕಾರ್ಯನಿರ್ವಹಿಸುತ್ತಿದೆ. ಇದು ಸ್ವಾಯತ್ತ ಸಂಸ್ಥೆಯಾಗಿದ್ದು, 160 ಹಾಸಿಗೆಗಳನ್ನು ಒಳಗೊಂಡಿದೆ. ಪ್ರತಿನಿತ್ಯ 200ಕ್ಕೂ ಹೆಚ್ಚು ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. 

ಕಳೆದ ಐದು ವರ್ಷಗಳಲ್ಲಿ 35 ಸಾವಿರಕ್ಕೂ ಅಧಿಕ ಮಂದಿ ಒಳರೋಗಿಗಳಾಗಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 1.63 ಲಕ್ಷಕ್ಕೂ ಅಧಿಕ ಮಂದಿಗೆ ಡಯಾಲಿಸಿಸ್ ಚಿಕಿತ್ಸೆ ಒದಗಿಸಲಾಗಿದೆ. 42 ಸಾವಿರಕ್ಕೂ ಅಧಿಕ ಮಂದಿ ಶಸ್ತ್ರಚಿಕಿತ್ಸೆ ಹಾಗೂ 125 ಮಂದಿ ಮೂತ್ರಪಿಂಡ ಕಸಿಗೆ ಇಲ್ಲಿ ಒಳಗಾಗಿದ್ದಾರೆ. ಕೋವಿಡ್ ಪೂರ್ವದಲ್ಲಿ 200ರಿಂದ 250ಕ್ಕೆ ತಲುಪುತ್ತಿದ್ದ ದೈನಂದಿನ ಹೊರರೋಗಿಗಳ ಸಂಖ್ಯೆ, ಈಗ 400ಕ್ಕೆ ತಲುಪಿದೆ. 

ಮೂತ್ರಪಿಂಡ ಆರೋಗ್ಯ ಕಡೆಗಣನೆ: ‘ಮೂತ್ರಪಿಂಡದ ಮಹತ್ವದ ಬಗ್ಗೆ ಜನರಿಗೆ ಅಷ್ಟಾಗಿ ಜಾಗೃತಿಯಿಲ್ಲ. ಇದರಿಂದಾಗಿ ಅದರ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸದೇ ಸಮಸ್ಯೆಯನ್ನು ತಂದೊಡ್ಡಿಕೊಳ್ಳುತ್ತಿದ್ದಾರೆ. ಮೂತ್ರಪಿಂಡ ಕೂಡ ಸೂಕ್ಷ್ಮವಾದ ಅಂಗವಾಗಿದ್ದು, ರಕ್ತ ಶುದ್ಧಿ ಕಾರ್ಯದ ನಂತರ ಮೂತ್ರದ ಮೂಲಕ ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕಲು ಈ ಅಂಗ ಸಹಕಾರಿ. ಅದೇ ರೀತಿ, ದೇಹದಲ್ಲಿನ ಲವಣಾಂಶಗಳು, ನೀರಿನಾಂಶಗಳು, ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಸಮತೋಲನದಲ್ಲಿ ಇರಿಸುತ್ತದೆ’ ಎಂದು ಸಂಸ್ಥೆಯ ವೈದ್ಯರು ತಿಳಿಸಿದರು. 

‘ಪೌಷ್ಟಿಕ ಆಹಾರ ಸೇವನೆ, ಉತ್ತಮ ಜೀವನಶೈಲಿ, ವ್ಯಾಯಾಮವನ್ನು ಅಳವಡಿಸಿಕೊಳ್ಳಬೇಕು. ಈಗಾಗಲೇ ಕಿಡ್ನಿ ಸಮಸ್ಯೆ ಎದುರಿಸುತ್ತಿರುವವರು ನಿಯಮಿತವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುವ ಜತೆಗೆ ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಹೇಳಿದರು. 

‘ಮುಧುಮೇಹ ಮತ್ತು ಅಧಿಕ ರಕ್ತದೊತ್ತಡವೇ ಮೂತ್ರಪಿಂಡ ಸಮಸ್ಯೆಗೆ ಮುಖ್ಯ ಕಾರಣ. ಸಂಸ್ಥೆಗೆ ಬರುವ ಬಹುತೇಕ ರೋಗಿಗಳು ಅಂತಿಮ ಹಂತದ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾದವರಾಗಿದ್ದಾರೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಕೇಶವಮೂರ್ತಿ ಆರ್. ತಿಳಿಸಿದರು. 

ಸಂಸ್ಥೆಗೆ ರಾಜ್ಯದ ಜತೆಗೆ ಹೊರರಾಜ್ಯಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಇಲ್ಲಿಗೆ ಬರುವ ಹೊರರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ ।
ಡಾ. ಕೇಶವಮೂರ್ತಿ ಆರ್. ನೆಫ್ರೊ–ಯುರಾಲಾಜಿ ಸಂಸ್ಥೆ ನಿರ್ದೇಶಕ

ಅಂತಿಮ ಹಂತದಲ್ಲಿ ಅನೆಕ್ಸ್ ಕಟ್ಟಡ

ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಳದಿಂದಾಗಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ 150 ಹಾಸಿಗೆಗಳ ಅನೆಕ್ಸ್ ಕಟ್ಟಡ ನಿರ್ಮಾಣಕ್ಕೆ 2016ರಲ್ಲಿಯೇ ಅಡಿಗಲ್ಲು ಹಾಕಲಾಗಿತ್ತು. 2018ರಲ್ಲಿ ಈ ಕಟ್ಟಡದ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿತ್ತು. ಕೋವಿಡ್ ಹಾಗೂ ಅನುದಾನದ ಕೊರತೆಯಿಂದ ಕಾಮಗಾರಿಗೆ ಹಿನ್ನಡೆಯಾಗಿತ್ತು. ಈಗ ಕಟ್ಟಡದ ಕಾಮಗಾರಿ ಅಂತಿಮ ಹಂತ ತಲುಪಿದ್ದು ಜೂನ್ ವೇಳೆಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ.  ನೂತನ ಕಟ್ಟಡವು 30 ಹಾಸಿಗೆಗಳ ಡಯಾಲಿಸಿಸ್ ಘಟಕ 20 ಹಾಸಿಗೆಗಳ ತೀವ್ರ ನಿಗಾ ಘಟಕವನ್ನೂ ಒಳಗೊಂಡಿರಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT