ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ದರದಲ್ಲಿ ಮರಳು: ಹೊಸ ಮರಳು ನೀತಿ ಜಾರಿ, ರೈತರಿಗೆ, ಬಡವರಿಗೆ ರಿಯಾಯಿತಿ ದರ

Last Updated 8 ನವೆಂಬರ್ 2021, 19:25 IST
ಅಕ್ಷರ ಗಾತ್ರ

ಬೆಂಗಳೂರು: ನದಿ, ತೊರೆ, ಹಳ್ಳ, ಕೆರೆ, ಜಲಾಶಯಗಳ ಪಾತ್ರಗಳಲ್ಲಿರುವ ಮರಳು ಗಣಿಗಾರಿಕೆ ನಡೆಸಿ, ಅಗ್ಗದ ದರದಲ್ಲಿಗ್ರಾಹಕರಿಗೆ ಮರಳು ಪೂರೈಕೆ ಮಾಡುವ ಹೊಸ ಮರಳು ನೀತಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ,ಗ್ರಾಮೀಣ ವಸತಿ ಯೋಜನೆಗಳಿಗೆ ಮತ್ತು ಗ್ರಾಮೀಣ ಜನರು ಮನೆ ಕಟ್ಟಿಕೊಳ್ಳಲು ರಿಯಾಯ್ತಿ ದರದಲ್ಲಿ ಮರಳು ಪೂರೈಕೆ ಮಾಡಲು ನೀತಿಯಲ್ಲಿ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡದಲ್ಲಿ ಪರಂಪರಾಗತವಾಗಿ ನದಿಯಲ್ಲಿ ಮುಳುಗಿ ಮರಳು ತೆಗೆಯುವುದಕ್ಕೂ ಅವಕಾಶ ನೀಡಲಾಗಿದೆ. ಆದರೆ, ಇದಕ್ಕೆ ಯಾವುದೇ ರೀತಿಯ ಯಂತ್ರಗಳನ್ನು ಬಳಸುವಂತಿಲ್ಲ. ಸ್ಥಳೀಯರು ತಮ್ಮ ಮನೆಗಳನ್ನು ಕಟ್ಟಿಕೊಳ್ಳಲು ಈ ರೀತಿಯಲ್ಲಿ ಮರಳು ತೆಗೆಯಬಹುದಾಗಿದೆ. ಪರಿಸರಕ್ಕೆ ಹಾನಿಯಾಗುವಂತೆ ಮರಳು ತೆಗೆಯುವುದಕ್ಕೆ ಅವಕಾಶವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಇದಕ್ಕಾಗಿ ‘ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ 2021’ ಕ್ಕೆ ಸಂಪುಟ ಅನುಮೋದನೆ ನೀಡಿದೆ.ಮರಳು ಗಣಿಗಾರಿಕೆ ಮಾಡಿ ಅದರ ಸಾಗಣೆಗಾಗಿ ಮೂರು ಹಂತಗಳನ್ನು ರೂಪಿಸಲಾಗಿದೆ. ಗ್ರಾಮ ಮಟ್ಟ, ನದಿ ಪಾತ್ರ ಮತ್ತು ಸಮುದ್ರ ತೀರ ಎಂದು ಮೂರು ಹಂತಗಳನ್ನು ನಿಗದಿಪಡಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಮಾರಲು ಪ್ರತಿ ಟನ್‌ಗೆ ₹300, ನದಿ ಸೇರುವ ಪಾತ್ರಗಳು ಮತ್ತು ಪಟ್ಟಣಗಳಿಗೆ ಟನ್‌ಗೆ ₹700 ನಿಗದಿ ಮಾಡಲಾಗಿದೆ ಎಂದರು.

ಗ್ರಾಮಪಂಚಾಯ್ತಿ ಮಟ್ಟದಲ್ಲಿ ಮರಳು ಶೇಖರಣೆ ಮಾಡಿ ಮಾರಾಟ ಮಾಡಲು ಅವಕಾಶವಿದೆ. ಜತೆಗೆ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಖನಿಜ ಟ್ರಸ್‌ನಿಂದ ಶೇ 2 ರಷ್ಟು ನಿಧಿ ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ. ಸರ್ಕಾರಕ್ಕೆ ಬರುವ ಶೇ 50 ರಷ್ಟು ರಾಯಲ್ಟಿಯಲ್ಲಿ ಶೇ 25 ಆಯಾ ಪಂಚಾಯಿತಿಗಳಿಗೆ ನೀಡಲಾಗುವುದು. ಸರ್ಕಾರದ ವಸತಿ ಯೋಜನೆಯೂ ಸೇರಿದಂತೆ ವಿವಿಧ ಯೋಜನೆಗಳು ಮತ್ತು ಬಡವರಿಗೆ ರಿಯಾಯ್ತಿ ದರದಲ್ಲಿ ಮರಳು ನೀಡುವ ಅಧಿಕಾರವನ್ನು ಆಯಾ ಗ್ರಾಮ ಪಂಚಾಯಿತಿಗಳಿಗೇ ನೀಡಲಾಗಿದೆ ಎಂದು ಹೇಳಿದರು.

* ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ‘ಮರಳು ಸಮಿತಿ’ಗಳ ರಚನೆ.

* ಮರಳು ಗಣಿಗಾರಿಕೆ ಮತ್ತು ಸಾಗಣೆಯ ಉಸ್ತುವಾರಿಯನ್ನು ಈ ಸಮಿತಿಗಳು ಮೇಲುಸ್ತುವಾರಿ ವಹಿಸಲಿವೆ. ಯಾವುದೇ ನಿಯಮಗಳ ಉಲ್ಲಂಘನೆ ಮಾಡಿದಲ್ಲಿ ದಂಡಿಸುವ ಅಧಿಕಾರ ನೀಡಲಾಗಿದೆ.

* ಸ್ವಂತ ಬಳಕೆಗಾಗಿ ಟ್ರ್ಯಾಕ್ಟರ್‌, ಎತ್ತಿನ ಬಂಡಿ, ದ್ವಿಚಕ್ರವಾಹನಗಳಲ್ಲಿ ಮರಳು ಸಾಗಣೆ ಮಾಡಿದರೆ ಪ್ರಕರಣ ದಾಖಲಿಸುವುದಿಲ್ಲ. ಆದರೆ, ಬೇರೆ ಜಿಲ್ಲೆಗಳಿಗೆ ಸಾಗಣೆ ಮಾಡುವಂತಿಲ್ಲ. ಒಂದು ವೇಳೆ ಸಾಗಣಿಕೆ ಮಾಡಿದರೆ ಪ್ರಕರಣ ದಾಖಲಿಸಲಾಗುವುದು.

* ದ್ವಿಚಕ್ರ ವಾಹನ, ಎತ್ತಿನಗಾಡಿ, ಟ್ರ್ಯಾಕ್ಟರ್‌, ಕತ್ತೆ ಮೇಲೆ ಮರಳು ಕೊಂಡೊಯ್ಯವ ರೈತರು ಮತ್ತು ಬಡವರಿಗೆ ರಾಯಧನದ ವಿನಾಯಿತಿ ನೀಡಲಾಗುವುದು.

*ಪಟ್ಟಾ ಭೂಮಿಯಲ್ಲಿ ಮರಳು ಗಣಿಗಾರಿಕೆ ನಿಷೇಧಿಸಲಾಗಿದ್ದರೂ, ಜಿಲ್ಲಾ ಮತ್ತು ತಾಲ್ಲೂಕು ಮರಳು ಸಮಿತಿಗಳಿಂದ ಅನಮತಿ ಪಡೆಯುವುದು ಕಡ್ಡಾಯ. ಇದಕ್ಕೆ ಸಮಿತಿಗಳು ಸಮಜಾಯಿಷಿ ನೀಡಬೇಕು.

* ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಗಣಿಗಾರಿಕೆ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಪಾರದರ್ಶಕ ಟೆಂಡರ್‌ಗೆ ನ್ಯಾಯಮೂರ್ತಿ ಅಧ್ಯಕ್ಷತೆಯ ಸಮಿತಿ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ₹50 ಕೋಟಿಗೂ ಮೇಲ್ಪಟ್ಟ ಟೆಂಡರ್‌ಗಳು ಮತ್ತು ಅವುಗಳ ಅಂದಾಜುಗಳ ಪೂರ್ವ ಪರಿಶೀಲನೆ ನಡೆಸಿ ಒಪ್ಪಿಗೆ ನೀಡಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಸರ್ಕಾರ ನಿರ್ಧರಿಸಿದೆ.

ಟೆಂಡರ್‌ ಪ್ರಕ್ರಿಯೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಮತ್ತು ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿವಿಧ ನಿರ್ಮಾಣ ಕಾಮಗಾರಿಗಳು, ಸರಕು ಮತ್ತು ಸೇವೆಗಳ ಸಂಗ್ರಹಣೆಯ ಟೆಂಡರ್‌ ಹಾಗೂ ಅಂದಾಜುಗಳನ್ನು ನ್ಯಾಯಮೂರ್ತಿ ಅಧ್ಯಕ್ಷತೆಯ ಸಮಿತಿಯೇ ಪರಿಶೀಲಿಸಿ ಅಂತಿಮಗೊಳಿಸುತ್ತದೆ. ಸಮಿತಿಯ ಒಪ್ಪಿಗೆಯ ಬಳಿಕ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

‘ಕೆಲವು ಇಲಾಖೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೆಲವೇ ಮಂದಿ ಮಾತ್ರ ಟೆಂಡರ್‌ಗಳಲ್ಲಿ ಪಾಲ್ಗೊಳ್ಳುತ್ತಾರೆ. ಟೆಂಡರ್‌ ಮೊತ್ತವೂ ಉತ್ಪ್ರೇಕ್ಷಿತವಾಗಿರುತ್ತದೆ. ಇದನ್ನು ಸರಿಪಡಿಸಲು ಹೆಚ್ಚು ಜನ ಟೆಂಡರ್‌ಗಳಲ್ಲಿ ಭಾಗವಹಿಸುವಂತಾಗಬೇಕು. ಪೂರ್ವ ಅನುಭವ, ಸಾಮರ್ಥ್ಯ ಒರೆಗೆ ಹಚ್ಚಲು ಸಮಿತಿಗೆ ಸಾಧ್ಯವಾಗುತ್ತದೆ. ಸಮಿತಿ ಪ್ರತಿಯೊಂದು ಟೆಂಡರ್‌ನ ಪೂರ್ವ ಪರಿಶೀಲನೆಯನ್ನು 15 ದಿನಗಳಲ್ಲಿ ನಡೆಸಿ ವರದಿ ನೀಡಬೇಕು. ಕಾರ್ಯ ಒತ್ತಡ ಹೆಚ್ಚಾದರೆ, ಇನ್ನೊಂದು ತಜ್ಞರ ಸಮಿತಿಯನ್ನು ರಚಿಸಲೂ ಅವಕಾಶವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT