ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಾಚರಣೆ: ಡಿಸೆಂಬರ್‌ 31ರ ಸಂಜೆ 6ರಿಂದ ಬೆಂಗಳೂರಿನಲ್ಲಿ ನಿಷೇಧಾಜ್ಞೆ

Last Updated 28 ಡಿಸೆಂಬರ್ 2020, 15:14 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಸರ್ಕಾರ ರೂಪಿಸಿರುವ ಹೊಸ ನಿಯಮಗಳ ಅನ್ವಯ ಡಿ. 31ರ ಸಂಜೆ 6 ಗಂಟೆಯಿಂದ ಜ. 1ರ ಬೆಳಿಗ್ಗೆ 6 ಗಂಟೆಯವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಮಲ್ ಪಂತ್, ‘ಅಂದು ರಾತ್ರಿ ಐದು ಹಾಗೂ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ರಸ್ತೆ, ಉದ್ಯಾನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆ ಮಾಡಲು ಅವಕಾಶವಿಲ್ಲ. ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿಗಳು, ಕ್ಲಬ್‌ನವರು ಹಾಗೂ ಇತರರು, ತಮ್ಮ ನಿಗದಿತ ಜಾಗದಲ್ಲಿ ತಮ್ಮದೇ ಸದಸ್ಯರ ಜೊತೆ ಮಾತ್ರ ವರ್ಷಾಚರಣೆ ಮಾಡಬಹುದು. ಇಂಥ ಕಾರ್ಯಕ್ರಮಗಳಲ್ಲಿ ಹೊರಗಿನವರಿಗೆ ಅವಕಾಶ ನೀಡಬಾರದು. ಈ ಬಗ್ಗೆ ಆಡಳಿತ ಮಂಡಳಿ ಗಮನ ಹರಿಸಬೇಕು’ ಎಂದೂ ಹೇಳಿದರು.

ಕೂಪನ್‌ ಕಾರ್ಯಕ್ರಮಕ್ಕೆ ಅವಕಾಶವಿಲ್ಲ: ‘ಹೊಸ ವರ್ಷಾಚರಣೆ ಕಾರ್ಯಕ್ರಮ ಸಂಘಟಿಸುವುದು ಹಾಗೂ ಅದರ ಕೂಪನ್– ಚೀಟಿಯನ್ನು ಹಂಚಿಕೆ ಮಾಡುವುದಕ್ಕೆ ಅವಕಾಶವಿಲ್ಲ. ಹೋಟೆಲ್‌, ರೆಸ್ಟೋರೆಂಟ್‌ನವರು ನಿತ್ಯದ ರೀತಿಯಲ್ಲೇ ಕೆಲಸ ಮಾಡಬಹುದು. ನೃತ್ಯ ಹಾಗೂ ಇತರೆ ವಿಶೇಷ ಕಾರ್ಯಕ್ರಮ ಆಯೋಜಿಸಬಾರದು’ ಎಂದೂ ಎಚ್ಚರಿಸಿದರು.

ಅನಗತ್ಯವಾಗಿ ಓಡಾಡಿದರೆ ಪ್ರಕರಣ: ‘ವ್ಹೀಲಿಂಗ್, ಜಾಲಿ ರೈಡ್, ರಸ್ತೆ ಮೇಲೆ ನಿಂತು ಹರಟೆ ಹೊಡೆಯಲು ಅವಕಾಶವಿಲ್ಲ. ಅನಗತ್ಯವಾಗಿ ಓಡಾಡುವವರಿಗೆ ನೇರವಾಗಿ ಎಚ್ಚರಿಕೆ ನೀಡುತ್ತಿದ್ದೇನೆ. ಸಿಕ್ಕಿಬಿದ್ದರೆ, ಗಂಭೀರ ಪ್ರಕರಣ ದಾಖಲಿಸಲಾಗುವುದು. ವಾಹನವನ್ನೂ ಜಪ್ತಿ ಮಾಡಲಾಗುವುದು’ ಎಂದು ಕಮಲ್‌ ಪಂತ್ ಹೇಳಿದರು.

‘ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗುವುದು. ನಗರದೆಲ್ಲೆಡೆ ನಾಕಾಬಂದಿ ನಿರ್ಮಿಸಿ, ಬಿಗಿ ಭದ್ರತೆ ಕೈಗೊಳ್ಳಲಾಗುವುದು’ ಎಂದೂ ತಿಳಿಸಿದರು.

'ಟಿಕೆಟ್‌ ಪಡೆದರಷ್ಟೇ ಅವಕಾಶ'

‘ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್, ಇಂದಿರಾನಗರ ಹಾಗೂ ಕೋರಮಂಗಲದಲ್ಲಿ ಡಿ. 31ರಂದು ರಾತ್ರಿ ಯಾರಿಗೂ ಪ್ರವೇಶವಿಲ್ಲ. ಹೋಟೆಲ್, ಪಬ್‌, ರೆಸ್ಟೋರೆಂಟ್‌ ಹಾಗೂ ಇತರರು, ಮುಂಗಡವಾಗಿ ಗ್ರಾಹಕರಿಂದ ಬುಕ್ಕಿಂಗ್ ಪಡೆಯಬೇಕು. ಅದಕ್ಕೆ ಪ್ರತಿಯಾಗಿ, ಟಿಕೆಟ್ ನೀಡಬೇಕು. ಅಂಥ ಟಿಕೆಟ್ ತೋರಿಸಿದರಷ್ಟೇ ಈ ಪ್ರದೇಶಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಈ ಬಗ್ಗೆ ಠಾಣೆ ಸಿಬ್ಬಂದಿಯೇ ಪರಿಶೀಲನೆ ನಡೆಸಲಿದ್ದಾರೆ’ ಎಂದು ಕಮಲ್ ಪಂತ್ ಹೇಳಿದರು.

‘ಹೋಟೆಲ್, ಪಬ್‌ ಹಾಗೂ ಇತರರು, ತಮ್ಮ ಗ್ರಾಹಕರನ್ನು ರಸ್ತೆಯಲ್ಲಿ ನಿಲ್ಲಿಸುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ನಿಯಮ ಪಾಲನೆ ಬಗ್ಗೆ ಹೋಟೆಲ್ ಆಡಳಿತ ಮಂಡಳಿ ಗಮನ ಹರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT