ಮಂಗಳವಾರ, ಮೇ 18, 2021
23 °C
ವರ್ತಕರಿಗಿಂತ ರೈತರಿಗೂ ತೊಂದರೆ: ವ್ಯಾಪಾರಿಗಳು ; ಜನ ನಿದ್ರಿಸುವ ಸಮಯದಲ್ಲಿ ಕರ್ಫ್ಯೂ ಹೇರಿ ಏನು ಪ್ರಯೋಜನ– ಸಾರ್ವಜನಿಕರ ಪ್ರಶ್ನೆ

ರಾತ್ರಿ ಕರ್ಫ್ಯೂ: ಪಬ್‌–ರೆಸ್ಟೋರೆಂಟ್‌ಗಳಿಗೆ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂದಿನ ಒಂಬತ್ತು ದಿನಗಳವರೆಗೆ ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ವಿಧಿಸಿರುವ ರಾಜ್ಯ ಸರ್ಕಾರದ ನಿರ್ಧಾರವು ಮತ್ತೆ ನಮಗೆ ಸಂಕಷ್ಟ ತಂದೊಡ್ಡಲಿದೆ ಎಂದು ಪಬ್‌ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮಾರತ್ತಹಳ್ಳಿಯಲ್ಲಿರುವ ಬಿಗ್‌ ಬಾರ್ಬೆಕ್ಯು ರೆಸ್ಟೋರೆಂಟ್‌ನ ಮಾಲೀಕ ಉದಯ ಮೊಗವೀರ, ‘ಈ ಹಿಂದಿನ ಲಾಕ್‌ಡೌನ್‌ಗಳಿಂದಲೇ ನಾವು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಕ್ರಿಸ್‌ಮಸ್‌ ಮತ್ತು ಹೊಸವರ್ಷದ ಸಂದರ್ಭದಲ್ಲಿ ಹೆಚ್ಚು ವ್ಯಾಪಾರ–ವಹಿವಾಟು ನಡೆಯುವ ನಿರೀಕ್ಷೆ ಇತ್ತು. ಈಗ ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದರಿಂದ ಅದಕ್ಕೂ ಕಲ್ಲು ಬೀಳಲಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

‘ಕ್ರಮೇಣ ವ್ಯಾಪಾರ ವೃದ್ಧಿಸಿತ್ತು. ಹೊಸ ಆದೇಶದಿಂದ ನಾವು ಊಟ ಸರಬರಾಜು ಮಾಡುವುದನ್ನು ರಾತ್ರಿ 8ಕ್ಕೇ ಮುಕ್ತಾಯಗೊಳಿಸಬೇಕಾಗುತ್ತದೆ. ಆದರೆ, ನಮ್ಮಲ್ಲಿ ಗ್ರಾಹಕರು ಬರುವುದೇ ರಾತ್ರಿ 8ರ ನಂತರ’ ಎಂದು ಅವರು ಹೇಳಿದರು.

ಕೋರಮಂಗಲದ ಕೆಬಪ್ಸಿ ರೆಸ್ಟೋರೆಂಟ್‌ನ ಮಾಲೀಕ ಆಸಿಮ್‌ ಶಾ, ‘ಅನೇಕ ಮಹಿಳಾ ಉದ್ಯೋಗಿಗಳು ನಮ್ಮಲ್ಲಿ ಕೆಲಸ ಮಾಡುತ್ತಾರೆ. ಈಗ ಉದ್ಯೋಗಿಗಳ ಪಾಳಿಯನ್ನೇ ಬದಲಿಸಬೇಕಾಗಿದೆ. ಕರ್ಫ್ಯೂನಿಂದ ಮಹಿಳೆಯರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಅವರು ಹೇಳಿದರು.

‘ಹಬ್ಬಕ್ಕೆ ಹೊಸ ಮೆನು ಸಿದ್ಧಮಾಡಿಕೊಂಡಿದ್ದೆವು. ಈ ಕರ್ಫ್ಯೂನಿಂದ ಆ ನಿರ್ಧಾರದಿಂದಲೂ ಹಿಂದೆ ಸರಿಯಬೇಕಾಗಿದೆ’ ಎಂದು ಹೇಳಿದರು.

‘ಹೊಸ ವರ್ಷಾಚರಣೆಯನ್ನು ರಾತ್ರಿ 8ರಿಂದ ಆರಂಭಿಸಬೇಕು ಎಂದುಕೊಂಡಿದ್ದೆವು. ಈಗ ಮಧ್ಯಾಹ್ನ 3ರಿಂದಲೇ ಆರಂಭ ಮಾಡುತ್ತೇವೆ. ರಾತ್ರಿ 9.30ಕ್ಕೆ ಮುಕ್ತಾಯ ಮಾಡುತ್ತೇವೆ’ ಎಂದು ಇಂಪ್ರೆಸಾರಿಯೊದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಣವೀರ್‌ ಸಭಾನಿ ಹೇಳುತ್ತಾರೆ.

ಹೋಟೆಲ್‌ ಸಂಘಗಳಿಂದ ಸ್ವಾಗತ
‘ಕೋವಿಡ್‌ನಂತಹ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕಾಗುತ್ತದೆ. ಕರ್ಫ್ಯೂ ಜಾರಿ ಮಾಡುವ ಸರ್ಕಾರದ ನಿರ್ಧಾರವನ್ನು ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ’ ಎಂದು ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಹೆಬ್ಬಾರ್ ಹೇಳಿದ್ದಾರೆ.

ಅನಗತ್ಯ ಸಂಚರಿಸಿದರೆ ಪ್ರಕರಣ
ಕೊರೊನಾ ನಿಯಂತ್ರಣಕ್ಕಾಗಿ ಒಂಬತ್ತು ದಿನಗಳವರೆಗೆ ನಿಷೇಧಾಜ್ಞೆ ಜಾರಿಯಾಗಲಿದೆ. ಹಾಗಾಗಿ, ಸಾರ್ವಜನಿಕರು ಸೂಕ್ತ ಕಾರಣ ಹಾಗೂ ದಾಖಲೆಗಳಿಲ್ಲದೆ ರಾತ್ರಿ ವೇಳೆ ಸಂಚರಿಸಲು ಅನುಮತಿ ನೀಡುವುದಿಲ್ಲ ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.

‘ರಾಜ್ಯ ಸರ್ಕಾರದ ನಿರ್ದೇಶನಗಳ ಅನ್ವಯ ನಿಷೇಧಾಜ್ಞೆ ನಿಯಮಗಳನ್ನು ಜಾರಿ ಮಾಡಲಾಗುವುದು. ಡಿ.25ರ ಬಳಿಕ ಕೆಲವು ಸ್ಥಳಗಳಲ್ಲಿ ಹೆಚ್ಚು ಜನಸಂದಣಿಯಾಗದಂತೆ ತಡೆಯಲು ಇಲಾಖೆಯಿಂದ ಈಗಾಗಲೇ ಸಿದ್ಧತೆಗಳು ನಡೆದಿವೆ. ಗುರುವಾರ ಸಂಜೆ ವೇಳೆಗೆ ಸರ್ಕಾರದ ಮಾರ್ಗಸೂಚಿಗಳ ಅನ್ವಯ ನಿಯಮಗಳನ್ನು ಜಾರಿ ಮಾಡಲಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್‌ ಪಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಡಿಮೆ ಅವಧಿಯ ನಿಷೇಧಾಜ್ಞೆ ಆಗಿರುವುದರಿಂದ ರಾತ್ರಿ ವೇಳೆ ಸಾರ್ವಜನಿಕರ ತುರ್ತು ಸಂಚಾರಕ್ಕೆ ಪಾಸ್‌ ನೀಡುವುದಿಲ್ಲ. ಅವರು ಸೂಕ್ತ ದಾಖಲೆಗಳನ್ನು ತೋರಿಸಬೇಕು. ಇಲ್ಲದಿದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದೂ ಎಚ್ಚರಿಸಿದರು.

‘ನಗರದಾದ್ಯಂತ ನಾಕಾಬಂದಿ ಹಾಕಲಾಗುವುದು. ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುವವರು ಪತ್ತೆಯಾದಲ್ಲಿ, ಅವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು