ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ದುಸ್ಥಿತಿಗೆ ಕಾಂಗ್ರೆಸ್‌ ಕಾರಣ: ನಿರ್ಮಲಾ

Published 7 ಏಪ್ರಿಲ್ 2024, 0:01 IST
Last Updated 7 ಏಪ್ರಿಲ್ 2024, 0:01 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರಿನಲ್ಲಿ ಜನರು ಬೇರೆ ದಾರಿ ಇಲ್ಲದೆ ಕಲುಷಿತ ನೀರು ಕುಡಿಯುತ್ತಿದ್ದಾರೆ. ಕಾಲರಾ ರೋಗವೂ ಪತ್ತೆಯಾಗಿದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರದ ದುರಾಡಳಿತವೇ ಬೆಂಗಳೂರಿನ ಈ ದುಸ್ಥಿತಿಗೆ ಕಾರಣ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದರು.

ಬಿಜೆಪಿ ರಾಜ್ಯ ಘಟಕದ ಮಾಧ್ಯಮ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಜನರಿಗೆ ಕುಡಿಯಲು ಶುದ್ಧ ನೀರು ದೊರೆಯುತ್ತಿಲ್ಲ. ರಾಜ್ಯ ಸರ್ಕಾರ ಸರಿಯಾಗಿ ಕೆಲಸ ಮಾಡಿದ್ದರೆ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ’ ಎಂದರು.

ನೀರು ಪೂರೈಕೆ ಮತ್ತು ನೀರಾವರಿ ಕಾಮಗಾರಿಗಳ ಕುರಿತು ರಾಜ್ಯ ಸರ್ಕಾರದ ಪ್ರಮುಖರು ಈಗ ಮಾತನಾಡಲು ಆರಂಭಿಸಿದ್ದಾರೆ. 2023ರ ಮೇ ತಿಂಗಳಲ್ಲಿ ₹ 20,000 ಕೋಟಿ ವೆಚ್ಚದ ನೀರಾವರಿ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿತ್ತು. ಎಲ್ಲವೂ ಸ್ಥಗಿತಗೊಂಡಿವೆ. ಜಲ ಜೀವನ್‌ ಮಿಷನ್‌ ಯೋಜನೆಯ ಕೆಲಸವೂ ಕರ್ನಾಟಕದಲ್ಲಿ ಸರಿಯಾಗಿ ನಡೆಯುತ್ತಿಲ್ಲ ಎಂದು ದೂರಿದರು.

ತುಷ್ಟೀಕರಣದಿಂದ ಅಪಾಯ: ‘ಕಾಂಗ್ರೆಸ್‌ ಪಕ್ಷವು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವುದರಿಂದ ಸಮಾಜಕ್ಕೆ ಅಪಾಯ ಎದುರಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟಕ್ಕೆ ಕಾಂಗ್ರೆಸ್‌ ಪಕ್ಷವು ಮಾಡುತ್ತಿರುವ ಅಲ್ಪಸಂಖ್ಯಾತರ ತುಷ್ಟೀಕರಣವೇ ಕಾರಣ’ ಎಂದು ನಿರ್ಮಲಾ ಆಪಾದಿಸಿದರು.

ಬಾಂಬ್‌ ಸ್ಫೋಟದ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸುತ್ತಿದೆ. ಪ್ರಮುಖ ಆರೋಪಿಗಳು ಯಾರು? ಎಂಬ ಮಾಹಿತಿಯನ್ನೂ ಬಹಿರಂಗಪಡಿಸಿದೆ. ಆದರೆ, ಪ್ರಕರಣದ ಸಾಕ್ಷಿಯೊಬ್ಬರನ್ನು ಆರೋಪಿ ಎಂದು ಬಿಂಬಿಸುವ ಕೆಲಸವನ್ನು ಈ ರಾಜ್ಯದ ಆರೋಗ್ಯ ಸಚಿವರು ಮಾಡಿದ್ದಾರೆ. ಪ್ರಕರಣಕ್ಕೆ ಸಾಕ್ಷಿಯಾದ ವ್ಯಕ್ತಿಯ ಗುರುತು ಅವರಿಂದಾಗಿ ಬಹಿರಂಗವಾಗಿದ್ದು, ಅವರ ಜೀವಕ್ಕೆ ಅಪಾಯ ಎದುರಾಗಿದೆ ಎಂದರು.

‘ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವುದಕ್ಕಾಗಿ ‘ಹಿಂದೂ ಭಯೋತ್ಪಾದನೆ’ ಎಂಬುದನ್ನು ಕಾಂಗ್ರೆಸ್‌ನ ಕೆಲವು ನಾಯಕರು ಸೃಷ್ಟಿಸಿದ್ದರು. ಈಗ ಕೂಡ ಬಾಂಬ್‌ ಸ್ಫೋಟದ ಪ್ರಕರಣದಲ್ಲಿ ಗಮನ ಬೇರೆಡೆ ಸೆಳೆಯಲು ಸಚಿವರೇ ಸುಳ್ಳು ಹಬ್ಬಿಸುತ್ತಿದ್ದಾರೆ’ ಎಂದು ದೂರಿದರು.

ಬೆಂಗಳೂರಿನಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ದಾನಿಯೊಬ್ಬರು ನೀಡಿದ್ದ ಜಮೀನನ್ನು ಈಗ ಅಲ್ಪಸಂಖ್ಯಾತ ಸಮುದಾಯದ ಸಂಸ್ಥೆಯೊಂದಕ್ಕೆ ನೀಡಲಾಗಿದೆ. ಇದು ಕೂಡ ಕಾಂಗ್ರೆಸ್‌ನ ತುಷ್ಟೀಕರಣ ನೀತಿಗೆ ಮತ್ತೊಂದು ಉದಾಹರಣೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT