ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರೀಕರಣ: ಯೋಜನೆ ಮಂಜೂರಾತಿಗೆ ಗ್ರಹಣ

ನಾಡಪ್ರಭು ಕೆಂಪೇಗೌಡ ಬಡಾವಣೆ
Last Updated 4 ಜೂನ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ಐದಾರು ವರ್ಷಗಳ ಹಿಂದೆ ಸಮೃದ್ಧ ಹಸಿರಿನಿಂದ ಕಂಗೊಳಿಸುತ್ತಿದ್ದ ಪ್ರದೇಶವದು. ಇಲ್ಲಿನ ಚಿತ್ರಣವೀಗ ಸಂಪೂರ್ಣ ಬದಲಾಗಿದೆ. ಈಗ ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಬಟಾಬಯಲು. ಎಲ್ಲೆಡೆಯೂ ಹಸಿರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ದೃಶ್ಯವಿದು. ಇಲ್ಲಿ ನಿವೇಶನಗಳ ನಿರ್ಮಾಣ, ರಸ್ತೆ, ಚರಂಡಿ ಮತ್ತಿತರ ಮೂಲಸೌಕರ್ಯ ಅಭಿವೃದ್ಧಿಗಾಗಿ 1 ಲಕ್ಷಕ್ಕೂ ಅಧಿಕ ಗಿಡ– ಮರಗಳನ್ನು ಕಡಿಯಲಾಗಿದೆ. ಆದರೆ, ಇದುವರೆಗೆ ಒಂದು ಗಿಡವನ್ನೂ ನೆಟ್ಟು ಬೆಳೆಸಿಲ್ಲ. ಮೈಸೂರು ಮತ್ತು ಮಾಗಡಿ ರಸ್ತೆಗಳ ನಡುವೆ ಈ ಬಡಾವಣೆ ನಿರ್ಮಾಣವಾಗುತ್ತಿರುವ ಪ್ರದೇಶದ ಉಪಗ್ರಹ ಚಿತ್ರಗಳೂ ಇಲ್ಲಿನ ಬದಲಾದ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.

ಈ ಬಡಾವಣೆಯ ಹಸಿರೀಕರಣಕ್ಕೆ ಬಿಡಿಎ ಅರಣ್ಯ ವಿಭಾಗವು ಯೋಜನೆಯನ್ನೇನೋ ಸಿದ್ಧಪಡಿಸಿದೆ. ಆದರೆ, ಬಿಡಿಎ ಆಡಳಿತ ಮಂಡಳಿ ಮುಂದಿರುವ ಈ ಯೋಜನೆಗೆ ಮೂರು ವರ್ಷಗಳಿಂದ ಮುಕ್ತಿ ಸಿಕ್ಕಿಲ್ಲ. ಬಡಾವಣೆಯಲ್ಲಿ ಒಟ್ಟು 2 ಲಕ್ಷ ಗಿಡಗಳನ್ನು ನೆಡುವ ಹಾಗೂ ದೇಸಿ ಸಸ್ಯಗಳನ್ನು ವ್ಯವಸ್ಥಿತವಾಗಿ ಬೆಳೆಸುವ ಬಗ್ಗೆ ಅರಣ್ಯ ವಿಭಾಗವು ಈ ವರ್ಷದ ಮಾರ್ಚ್‌ನಲ್ಲೂ ₹ 4 ಕೋಟಿ ವೆಚ್ಚದ ಪ್ರಸ್ತಾವವನ್ನು ಆಡಳಿತ ಮಂಡಳಿ ಮುಂದೆ ಮಂಡಿಸಿದೆ.

ವಿದ್ಯುತ್‌ ಸಂಪರ್ಕ, ಕುಡಿಯುವ ನೀರು ಪೂರೈಕೆ, ಕೊಳಚೆ ನೀರು ಶುದ್ಧೀಕರಣ, ಒಳಚರಂಡಿ ವ್ಯವಸ್ಥೆ, ರಸ್ತೆ ಮತ್ತು ಇತರ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡಿಎ ಒಟ್ಟು ₹ 2,340 ಕೋಟಿ ವೆಚ್ಚಮಾಡಲಿದೆ. ಮೊದಲ ಹಂತದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹ 719 ಕೋಟಿ ವೆಚ್ಚದಲ್ಲಿ 14 ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ. ಎರಡನೇ ಹಂತದಲ್ಲಿ ₹ 1619.88 ಕೋಟಿ ವೆಚ್ಚದ ಎರಡು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಹಸಿರೀಕರಣಕ್ಕೆ ₹ 4 ಕೋಟಿ ವೆಚ್ಚದ ಪ್ರಸ್ತಾವಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ.

‘ಮಳೆಗಾಲದಲ್ಲಿ ಗಿಡಗಳನ್ನು ನೆಟ್ಟರೆ ಅವು ಬದುಕುಳಿಯುವ ಸಾಧ್ಯತೆ ಹೆಚ್ಚು. ಬಡಾವಣೆ ನಿರ್ಮಾಣ ಆರಂಭವಾದ ಬಳಿಕ ಮೂರು ಮಳೆಗಾಲಗಳು ಕಳೆದು ಹೋಗಿವೆ. ‌ಈ ಬಾರಿಯಾದರೂ ಮಳೆಯಾಗುವ ಸಂದರ್ಭದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕು’ ಎಂದು ಬಡಾವಣೆಯ ನಿವೇಶನದಾರರ ಮುಕ್ತ ವೇದಿಕೆಯ ಶ್ಯಾಮ್‌ ಒತ್ತಾಯಿಸಿದರು.

‘ಹಸಿರಿನಿಂದ ಕಂಗೊಳಿಸುವ ಸುಂದರ ಬಡಾವಣೆ ಇದಾಗಬೇಕು ಎಂಬುದು ನಮ್ಮ ಆಶಯ. ಹಾಗಾಗಿ ಬಿಡಿಎ ಅರಣ್ಯ ವಿಭಾಗ, ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿರುವ ಎಲ್‌ ಆ್ಯಂಡ್‌ ಟಿ ಕಂಪನಿ ಜೊತೆ ಸೇರಿ ನಾವು ವಿಶ್ವ ಪರಿಸದ ದಿನವಾದ ಬುಧವಾರ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ವೇದಿಕೆಯ ಸೂರ್ಯಕಿರಣ್‌ ತಿಳಿಸಿದರು.

ಅಂಕಿ ಅಂಶ

4,043 ಎಕರೆ 27 ಗುಂಟೆ: ನಾಡಪ್ರಭು ಕೆಂಪೇಗೌಡ ಬಡಾವಣೆಯ ಒಟ್ಟು ವಿಸ್ತೀರ್ಣ

40,539: ಬಡಾವಣೆಯಲ್ಲಿ ಬಿಡಿಎ ನಿರ್ಮಿಸಲಿರುವ ಒಟ್ಟು ನಿವೇಶನಗಳು

20,500: ಇದುವರೆಗೆ ಅಭಿವೃದ್ಧಿಪಡಿಸಿರುವ ಒಟ್ಟು ನಿವೇಶನಗಳು

2 ಲಕ್ಷ ಸಸಿ ಬೆಳೆಸುವ ಯೋಜನೆ

ಬಡಾವಣೆಯಲ್ಲಿ ಒಟ್ಟು 2 ಲಕ್ಷಕ್ಕೂ ಅಧಿಕ ಗಿಡಗಳನ್ನು ಬೆಳೆಸಲು ಅರಣ್ಯ ವಿಭಾಗ ಯೋಜನೆ ಸಿದ್ಧಪಡಿಸಿದೆ.

‘ಮೊದಲ ಹಂತದಲ್ಲಿ ಕೆರೆ ಮತ್ತು ರಾಜಕಾಲುವೆಗಳ ಮೀಸಲು ಪ್ರದೇಶಗಳು ಹಾಗೂ ಉದ್ಯಾನಗಳಿಗೆ ಕಾಯ್ದಿರಿಸಿರುವ ಜಾಗಗಳಲ್ಲಿ 60 ಸಾವಿರ ಗಿಡಗಳನ್ನು ನೆಡುವ ಉದ್ದೇಶವಿದೆ’ ಎನ್ನುತ್ತಾರೆ ಬಿಡಿಎ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್‌.ಗೋಪಿನಾಥ್‌.

‘ನಾವು ಎಲ್ಲೆಲ್ಲಿ ಯಾವ ತರಹದ ಗಿಡಗಳನ್ನು ಬೆಳೆಸಬಹುದು. ಇದಕ್ಕೆ ಎಚ್ಟು ವೆಚ್ಚವಾಗುತ್ತದೆ ಎಂಬ ಪ್ರಸ್ತಾವವನ್ನ್ನು ಪ್ರಾಧಿಕಾರದ ಆಡಳಿತ ಮಂಡಳಿಗೆ ಸಲ್ಲಿಸಿದ್ದೇವೆ. ಅವರು ಅನುಮೋದನೆ ನೀಡಿದರೆ ತಕ್ಷಣವೇ ಟೆಂಡರ್‌ ಕರೆದು ಗಿಡ ನೆಡುವ ಕೆಲಸ ಆರಂಭಿಸಲಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿನ ನಿವೇಶನಗಳಲ್ಲಿ ಇನ್ನೂ ಮನೆಗಳ ನಿರ್ಮಾಣ ಆರಂಭವಾಗಿಲ್ಲ. ಈ ಬಡಾವಣೆಯ ಆಸುಪಾಸಿನ ಪ್ರದೇಶದಲ್ಲಿ ಈಗಲೂ ದನ–ಕರು, ಕುರಿ–ಮೇಕೆಗಳನ್ನು ಸಾಕುವವರಿದ್ದಾರೆ. ಅವುಗಳಿಂದ ಗಿಡಗಳನ್ನು ರಕ್ಷಿಸಬೇಕಾದರೆ 6 ಅಡಿಯಿಂದ 8 ಅಡಿಗಳಷ್ಟು ಎತ್ತರಕ್ಕೆ ಬೆಳೆ ಸಸ್ಯಗಳನ್ನು ನೆಡಬೇಕಾಗುತ್ತದೆ. ಕೇವಲ ಗಿಡ ನೆಟ್ಟರೆ ಸಾಲದು, ಅವುಗಳಿಗೆ ಟ್ರೀ–ಗಾರ್ಡ್‌ ಅಳವಡಿಸಬೇಕು. ಕನಿಷ್ಠ ಮೂರು ವರ್ಷಗಳ ಕಾಲ ಅವುಗಳ ನಿರ್ವಹಣೆ ಮಾಡಬೇಕು. ಅವುಗಳಿಗೆ ನೀರುಣಿಸಲು ವ್ಯವಸ್ಥೆ ಮಾಡಬೇಕು. ಇದಕ್ಕೆಲ್ಲ ಸೇರಿ ಒಟ್ಟು ₹ 4 ಕೋಟಿ ವೆಚ್ಚವಾಗಲಿದೆ’ ಎಂದು ಅವರು ವಿವರಿಸಿದರು.

‘ಹಣ್ಣಿನ ಗಿಡಗಳಿಗೆ ಆದ್ಯತೆ’

‘ಉದ್ಯಾನಗಳಿರುವ ಕಡೆ ವರ್ಷಪೂರ್ತಿ ಹಣ್ಣು ಬಿಡುವ ಅತ್ತಿ ಗಿಡಗಳನ್ನು ಹೆಚ್ಚಾಗಿ ಬೆಳೆಸುತ್ತೇವೆ. ಪಕ್ಷಿಗಳನ್ನು ಆಕರ್ಷಿಸುವಂತಹ ನೇರಳೆ, ಹಲಸು, ಗೋಳಿ ಮರ, ಕಾಡು ಮಾವು, ಬಿಲ್ವ ಪತ್ರೆಯಂತಹ ಸಸ್ಯಗಳನ್ನು ಹೆಚ್ಚಾಗಿ ಬೆಳೆಸುತ್ತೇವೆ’ ಎಂದು ಗೋಪಿನಾಥ್‌ ಮಾಹಿತಿ ನೀಡಿದರು.

‘ರಸ್ತೆಗಳ ಪಕ್ಕದಲ್ಲಿ ಸಮೃದ್ಧ ನೆರಳು ನೀಡುವ ಹೊಂಗೆ, ರೆಂಜ, ಬೇವಿನ ಗಿಡಗಳನ್ನು ಹಾಗೂ ಬಡಾವಣೆಯ ಸೌಂದರ್ಯ ವರ್ಧಿಸಬಲ್ಲ ತಬೂಬಿಯ ಜಾತಿಯ ಗಿಡಗಳನ್ನು ಬೆಳೆಸುತ್ತೇವೆ. ಮೈತುಂಬಾ ಹೂಗಳನ್ನು ಬಿಡುವ ಈ ಮರಗಳು ಬಡಾವಣೆಯಲ್ಲಿ ಆಹ್ಲಾದಕರ ಪರಿಸರವನ್ನು ನಿರ್ಮಿಸಲಿವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT