ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿವೆ 3.10 ಲಕ್ಷ ಬೀದಿನಾಯಿಗಳು

ಎಬಿಸಿಗಾಗಿ ಕೋಟ್ಯಂತರ ಹಣ ವ್ಯಯ: 1.42ಲಕ್ಷ ನಾಯಿಗಳಿಗೆ ಆಗಿಲ್ಲ ಚಿಕಿತ್ಸೆ
Last Updated 25 ಡಿಸೆಂಬರ್ 2019, 3:39 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬೀದಿನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಬಿಬಿಎಂಪಿ ಪ್ರತಿವರ್ಷವೂ ಕೋಟಿಗಟ್ಟಲೆ ಹಣ ವೆಚ್ಚ ಮಾಡುತ್ತಿದೆ. ಆದರೆ, ಅವುಗಳ ಸಂತತಿ ಮಾತ್ರ ಹತೋಟಿಗೆ ಬರುತ್ತಲೇ ಇಲ್ಲ. ನಗರದಲ್ಲಿರುವ ಶೇ 45.76ರಷ್ಟು ಬೀದಿನಾಯಿಗಳಿಗೆ ಇನ್ನೂ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಆಗಿಲ್ಲ.

ಬಿಬಿಎಂಪಿಯು ಗೋವಾದ ವರ್ಲ್ಡ್‌ ವೈಡ್‌ ವೆಟರಿನರಿ ಸರ್ವಿಸ್‌ (ಡಬ್ಲ್ಯುವಿಎಸ್‌) ಸಂಸ್ಥೆಯ ಸಹಯೋಗದಲ್ಲಿ ನಡೆಸಿರುವ ಬೀದಿ ನಾಯಿಗಳ ಗಣತಿಯಲ್ಲಿ ಈ ಅಂಶ ಕಂಡುಬಂದಿದೆ.

ನಗರದಲ್ಲಿ 2012ರಲ್ಲಿ 1.85 ಲಕ್ಷ ನಾಯಿಗಳಿದ್ದವು. ಆ ಬಳಿಕ ನಾಯಿಗಳ ಗಣತಿ ನಡೆದಿರಲಿಲ್ಲ. ಬೀದಿನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಅವುಗಳ ಸಂಖ್ಯೆ ಕುರಿತ ದಾಖಲೆಗಳು ಬಹುಮುಖ್ಯ. ಹಾಗಾಗಿ, ಬಿಬಿಎಂಪಿ ಬೀದಿನಾಯಿಗಳ ಗಣತಿ ಕೈಗೊಂಡಿತ್ತು. ಪ್ರತಿ ವಾರ್ಡ್‌ನಲ್ಲಿ ಅಂದಾಜು ಎಷ್ಟು ನಾಯಿಗಳಿವೆ, ಅವುಗಳಲ್ಲಿ ಗಂಡೆಷ್ಟು, ಹೆಣ್ಣೆಷ್ಟು, ಅವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಆಗಿದೆಯೇ ಎಂಬಿತ್ಯಾದಿ ಮಾಹಿತಿಗಳನ್ನು ಗಣತಿ ವೇಳೆ ಕಲೆ ಹಾಕಲಾಗಿತ್ತು.

ಗಣತಿಯ ಅಂಕಿ–ಅಂಶಗಳ ಪ್ರಕಾರ ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಈಗ 3.10 ಲಕ್ಷಕ್ಕೆ ಏರಿಕೆಯಾಗಿದೆ. ಈ ಪೈಕಿ 1.42 ಲಕ್ಷ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಆಗಿಯೇ ಇಲ್ಲ.

ಬೆಂಗಳೂರು ದಕ್ಷಿಣ ವಲಯದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡದ ಬೀದಿ ನಾಯಿಗಳ ಪ್ರಮಾಣ (ಶೇ 67.15) ಜಾಸ್ತಿ ಇದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೀದಿನಾಯಿಗಳು ಕಂಡುಬಂದಿರುವ ಆರ್‌.ಆರ್‌.ನಗರ ವಲಯದಲ್ಲಿ ಶೇ 56.47ರಷ್ಟು ನಾಯಿಗಳಿಗೆ ಇನ್ನಷ್ಟೇ ಶಸ್ತ್ರಚಿಕಿತ್ಸೆ ನಡೆಯಬೇಕಿದೆ. ದಾಸರಹಳ್ಳಿ ವಲಯದಲ್ಲಿ ಬೀದಿನಾಯಿಗಳು ಕಡಿಮೆ ಸಂಖ್ಯೆಯಲ್ಲಿವೆ.

ಬಿಬಿಎಂಪಿಯ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಪ್ರಕಾರ, ಬಿಬಿಎಂಪಿ ಪ್ರತಿವರ್ಷವೂ ಬಜೆಟ್‌ನಲ್ಲಿ ಸರಿಸುಮಾರು ₹ 3 ಕೋಟಿಯನ್ನು ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಹಾಗೂ ರೇಬೀಸ್‌ ನಿಯಂತ್ರಣ ಕಾರ್ಯಕ್ರಮಗಳಿಗಾಗಿ ವ್ಯಯಿಸಿದೆ. ಆದರೂ ನಾಯಿಗಳ ಸಂತಾನ ನಿರೀಕ್ಷಿತ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ.

‘ಹುಟ್ಟಿ 10 ತಿಂಗಳು ಕಳೆಯುವಷ್ಟರಲ್ಲಿ ನಾಯಿಗಳು ಸಂತಾನೋತ್ಪಾದನೆಯ ಸಾಮರ್ಥ್ಯ ಪಡೆಯುತ್ತವೆ.ಅವುಗಳು ವರ್ಷದಲ್ಲಿ ಎರಡು ಬಾರಿ ಬೆದೆಗೆ ಬರುತ್ತವೆ. ಅವುಗಳಲ್ಲಿ ಗರ್ಭಧಾರಣೆಯಾಗಿ ಮರಿ ಹಾಕುವ ನಡುವಿನ ಅವಧಿ ಕೇವಲ 64 ದಿನಗಳು. ಬೀದಿನಾಯಿಗಳ ಒಂದು ಜೋಡಿಯಿಂದ ಕೇವಲ ಆರೇ ವರ್ಷಗಳಲ್ಲಿ 60 ಸಾವಿರ ನಾಯಿಗಳು ಹುಟ್ಟಬಲ್ಲವು. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ನಾಯಿಗಳನ್ನು ಹಿಡಿಯುವಾಗ ಒಂದು ಜೋಡಿ ತಪ್ಪಿಸಿಕೊಂಡರೂ ವರ್ಷದಲ್ಲಿ ಅವುಗಳಿಂದ ಹತ್ತಕ್ಕೂ ಹೆಚ್ಚು ಮರಿಗಳು ಜನಿಸುವ ಸಾಧ್ಯತೆ ಇರುತ್ತದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT