ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಜಲ ಜಂಜಾಟ | ಜನವಸತಿ ಪ್ರದೇಶಗಳಲ್ಲಿ ‘ಜಲ ಕ್ಷಾಮ‘

ಮಾರ್ಚ್‌ ಆರಂಭದಲ್ಲೇ ನೀರಿನ ಕೊರತೆ * ಜನರಿಗೆ ಬೇಸಿಗೆ ಕಳೆಯುವುದು ಹೇಗೆ ಎಂಬ ಚಿಂತೆ
Published 7 ಮಾರ್ಚ್ 2024, 22:09 IST
Last Updated 7 ಮಾರ್ಚ್ 2024, 22:09 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾರ್ಚ್‌ ತಿಂಗಳ ಆರಂಭದಲ್ಲೇ ನೀರಿನ ಸಮಸ್ಯೆ ಉಂಟಾಗಿದೆ. ಇನ್ನು ಏಪ್ರಿಲ್‌, ಮೇ ತಿಂಗಳಲ್ಲಿ ದೇವರೇ ಕಾಪಾಡಬೇಕು...‘ ಎನ್ನುತ್ತಾ ಆಕಾಶದತ್ತ ನೋಟ ಬೀರಿ ಕೈಮುಗಿದರು ನಾಯಂಡಳ್ಳಿಯ ಸೀನಾ.

ನಗರದಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆಯ ಒಂದು ಉದಾಹರಣೆ ಇದು.

ಈ ಸಮಸ್ಯೆ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ, ನಗರದ ಅನೇಕ ಭಾಗಗಳಲ್ಲಿ ಇದಕ್ಕಿಂತ ಇನ್ನೂ ಕಠಿಣ ಪರಿಸ್ಥಿತಿ ಇದೆ. ಅದರಲ್ಲಿಯೂ ನಗರದ ಹೊರವಲಯದಲ್ಲಿ ಸಮಸ್ಯೆ ವಿಪರೀತವಾಗಿದೆ. ದುಡ್ಡಿದ್ದವರು ಟ್ಯಾಂಕರ್‌ ನೀರು ಖರೀದಿಸಿ ತಂದು ತುಂಬಿಸಿಟ್ಟುಕೊಳ್ಳುತ್ತಿದ್ದಾರೆ. ಬಡ ವರ್ಗದವರು ಸಂಘ, ಸಂಸ್ಥೆಗಳು, ಬಿಬಿಎಂಪಿ ಪೂರೈಸುವ ಉಚಿತ ನೀರಿಗಾಗಿ ಕಾಯುತ್ತಿದ್ದಾರೆ.

ಮೈಸೂರು ರಸ್ತೆ ಭಾಗದಲ್ಲಿರುವ ಪಂತರಪಾಳ್ಯ ಅಂಬೇಡ್ಕರ್‌ ನಗರ, ಉಲ್ಲಾಳು ಸಹಿತ ನಗರದ ಹಲವು ಕಡೆಗಳಿಗೆ ಕಾವೇರಿ ನೀರು ಪೂರೈಕೆ ಇಲ್ಲ. ಉಳಿದ ಕಡೆಗಳಲ್ಲಿ ನಾಲ್ಕು ದಿನಕ್ಕೊಮ್ಮೆ, ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದರೂ, ಅರ್ಧ ಅಥವಾ ಮುಕ್ಕಾಲು ಗಂಟೆಗಳಲ್ಲಿ ನೀರು ಬಂದ್‌ ಆಗುತ್ತಿದೆ.

ದಾಸರಹಳ್ಳಿ ಭಾಗದಲ್ಲಿ ಪೀಣ್ಯ, ಗಣಪತಿನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಚೊಕ್ಕಸಂದ್ರ, ಹೆಗ್ಗನಹಳ್ಳಿ, ರಾಜಗೋಪಾಲನಗರ, ಗೆಳೆಯರ ಬಳಗ, ಕಿರ್ಲೋಸ್ಕರ್ ಬಡಾವಣೆ, ಮಂಜುನಾಥ ನಗರ, ಬ್ಯಾಟರಾಯನಪುರ, ಥಣಿಸಂದ್ರ ಸಹಿತ ಅನೇಕ ಪ್ರದೇಶಗಳಲ್ಲಿ ಕೊಳವೆಬಾವಿಗಳೂ ಬತ್ತಿವೆ. ಇಲ್ಲೆಲ್ಲ ನೀರಿನ ಹಾಹಾಕಾರ ಎದ್ದಿದೆ. ಬನ್ನೇರುಘಟ್ಟ, ಎಚ್‌ಎಸ್‌ಆರ್‌ಲೇಔಟ್‌, ಯಲಹಂಕ ಭಾಗದ ಜನವಸತಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. 

’ಅಪಾರ್ಟ್‌ಮೆಂಟ್’ಗಳಿಗೂ ಕಷ್ಟ

ನಗರದ ಹೊರವಲಯದಲ್ಲಿರುವ ವಸತಿ ಸಮುಚ್ಛಯಗಳೂ ನೀರಿನ ಸಮಸ್ಯೆ ಎದುರಿಸುತ್ತಿವೆ. ಕೃಷ್ಣಯ್ಯನಪಾಳ್ಯದಲ್ಲಿರುವ ಕರ್ನಾಟಕ ಹೈಕೋರ್ಟ್‌ ನ್ಯಾಯಾಲಯ ಸಿಬ್ಬಂದಿ ವಸತಿ ಸಮುಚ್ಛಯದ ನಿವಾಸಿಗಳು ಎರಡು ವಾರಗಳಿಂದ ನೀರಿಲ್ಲದೇ ಪರದಾಡುತ್ತಿದ್ದಾರೆ. ಬನ್ನೇರುಘಟ್ಟ, ಕನಕಪುರ ರಸ್ತೆ ಸೇರಿದಂತೆ, ನಗರದ ಹೊರವಲಯದಲ್ಲಿರುವ ಹಲವು ಅಪಾರ್ಟ್‌ಮೆಂಟ್‌ಗಳ ಸಮುಚ್ಛಯದವರು ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಿದ್ದಾರೆ. 

ಮಿತ ಬಳಕೆಗೆ ಮೊರೆ

ನೀರಿನ ಸಮಸ್ಯೆ ಉಲ್ಬಣವಾಗುತ್ತಿದ್ದಂತೆ, ಅಪಾರ್ಟ್‌ಮೆಂಟ್‌ನವರು ನೀರನ್ನು ಮಿತವಾಗಿ ಬಳಸಲು ನಿಯಮಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಪತ್ನಾಲ್ಕು ಗಂಟೆಯೂ ನೀರು ಪೂರೈಸುತ್ತಿದ್ದ ಅಪಾರ್ಟ್‌ಮೆಂಟ್‌ಗಳಲ್ಲಿ ಈಗ ಪಾಳಿ ಮೇಲೆ ನೀರು ಕೊಡಲಾಗುತ್ತಿದೆ. ವಿಶ್ವಪ್ರಿಯನಗರದ ಗುರುಕೃಪಾ ಅಪಾರ್ಟ್‌ಮೆಂಟ್‌, ಕ್ರೆಡೆನ್ಸ್‌ ಅಪಾರ್ಟ್‌ಮೆಂಟ್‌ಗಳಲ್ಲಿ ಬೆಳಿಗ್ಗೆ ಮೂರು ಗಂಟೆ ಮತ್ತು ಸಂಜೆ ಮೂರು ಗಂಟೆ ಮಾತ್ರ ನೀರು ಹರಿಸಿ ಟ್ಯಾಂಕ್‌ ಬಂದ್ ಮಾಡುತ್ತಿದ್ದಾರೆ. ಮನೆಗಳಲ್ಲಿ ಮೂರು ಶೌಚಾಲಯಗಳಿದ್ದರೂ ಒಂದನ್ನು ಮಾತ್ರ ಬಳಕೆ ಮಾಡಬೇಕು. ಕಾರು, ಬೈಕ್‌ಗಳನ್ನು ತೊಳೆಯಬಾರದ ಎಂದು ಸೂಚನೆ ನೀಡುತ್ತಿದ್ದಾರೆ.

ಸಪ್ತಗಿರಿ ಲೇಔಟ್‌ನಲ್ಲಿ ಬಾಡಿಗೆದಾರರಿಗೆ ಮಾಲೀಕರು ’ನೀರನ್ನು ಮಿತವಾಗಿ ಬಳಸಿ’ ಎಂಬ ವಾಟ್ಸ್‌ಆ್ಯಪ್‌ ಸಂದೇಶ ಕಳಿಸುತ್ತಿದ್ದಾರೆ. ‘ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಹಾಗಾಗಿ ಸಾಧ್ಯವಾದಷ್ಟು ಕಡಿಮೆ ಬಳಸಿ. ಈ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುವುದೇ ದೊಡ್ಡ ಸವಾಲು’ ಎಂಬ ಮಾಹಿತಿಯನ್ನು  ಎಸ್‌ಎಂಎಸ್‌ನಲ್ಲಿ ಕಳಿಸುತ್ತಿದ್ದಾರೆ.

’ಟ್ಯಾಂಕರ್‌’ ಅವಲಂಬನೆ

ಆರ್‌ಆರ್‌ ನಗರದ ಮೆಲೋಡಿ ಅಪಾರ್ಟ್‌ಮೆಂಟ್ಸ್‌, ಗೊಟ್ಟಿಗೆರೆಯ ಜೆಪಿಸಿ ಪೆಟಲ್‌ ಅಪಾರ್ಟ್‌ಮೆಂಟ್‌, ರಾಯರ ನೆರಳು ಅಪಾರ್ಟ್‌ಮೆಂಟ್ಸ್‌, ಚನ್ನಸಂದ್ರದ ಹಿಲ್‌ ವ್ಯೂ ರೆಸಿಡೆನ್ಸಿ, ಷಣ್ಮುಖ ರೆಸಿಡೆನ್ಸಿ ಜ್ಞಾನಭಾರತಿ ಪ್ರೆಸ್‌ ಲೇಔಟ್‌ಗಳಲ್ಲಿ ಖಾಸಗಿ ಟ್ಯಾಂಕರ್‌ ಮೂಲಕ ನೀರು ತರಿಸುತ್ತಿದ್ದಾರೆ. ರಾಜರಾಜೇಶ್ವರಿನಗರ ಐಡಿಯಲ್ ಹೋಮ್ಸ್ ಬಡಾವಣೆ, ಬಂಗಾರಪ್ಪ ಗುಡ್ಡ, ಕೆರೆಪಾಳ್ಯ, ಚನ್ನಸಂದ್ರ, ಗಟ್ಟಿಗೆರೆ, ರಾಮ್ಕೊ ಲೇಔಟ್‌ ಇನ್ನಿತರ ಕಡೆಗಳಿಗೆ ಜಲಮಂಡಳಿಯಿಂದಲೇ ಉಚಿತವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ.

‘ತಲಾ 2000 ಲೀಟರ್‌ ಸಾಮರ್ಥ್ಯದ 4 ಸಿಂಟೆಕ್ಸ್‌ ಟ್ಯಾಂಕ್‌ಗಳನ್ನು ಇಟ್ಟುಕೊಂಡು ನೀರು ಸಾಗಿಸುತ್ತಿದ್ದೇವೆ. ಒಂದು ವಾಹನ ದಿನಕ್ಕೆ ಏಳೆಂಟು ಟ್ರಿಪ್‌ ಮಾಡಲು ಸಾಧ್ಯವಾಗುತ್ತಿದೆ. ಬಿಸಿಲೇರುತ್ತಿದ್ದಂತೆ ಕೊಳವೆಬಾವಿಗಳಲ್ಲಿ ನೀರು ಆಳಕ್ಕೆ ಹೋಗುತ್ತದೆ. ಮಧ್ಯಾಹ್ನ ಒಂಟು ಸಿಂಟೆಕ್ಸ್‌ ತುಂಬಿಸಬೇಕಿದ್ದರೆ ಒಂದೂವರೆ ತಾಸು ಬೇಕಾಗುತ್ತದೆ. ಅದಕ್ಕಾಗಿ ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ನೀರು ಪೂರೈಸುತ್ತಿದ್ದೇವೆ ಎಂದು ಚಾಲಕರಾದ ದಿಲೀಪ್‌, ನಾಗರಾಜ್‌ ಮಾಹಿತಿ ನೀಡಿದರು.

ಸುಡುಬಿಸಿಲು ಈಗಷ್ಟೇ ಆರಂಭವಾಗಿದೆ. ಏಪ್ರಿಲ್‌, ಮೇ ಕಳೆಯಬೇಕಿದೆ. ನಗರದಲ್ಲಿ ನೀರು ನಿರ್ವಹಣೆಯಲ್ಲಿ ಅಧಿಕಾರಿಗಳು, ಎಂಜಿನಿಯರ್‌ಗಳು ಜಾಣ್ಮೆ ತೋರದೇ ಇದ್ದರೆ, ಜನರು ಮಿತಬಳಕೆ ಮಾಡದೇ ಇದ್ದರೆ ಜಲಕ್ಷಾಮದ ಹೊಡೆತಕ್ಕೆ ನಗರ ನಲುಗಿ ಹೋಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಅಂಬೇಡ್ಕರ್‌ನಗರದಲ್ಲಿ ಸಂಪಿನ ಆಳದಿಂದ ನೀರೆತ್ತಿ ಕೊಡಗಳಿಗೆ ನೀರು ತುಂಬಿಸುತ್ತಿರುವುದು. –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಅಂಬೇಡ್ಕರ್‌ನಗರದಲ್ಲಿ ಸಂಪಿನ ಆಳದಿಂದ ನೀರೆತ್ತಿ ಕೊಡಗಳಿಗೆ ನೀರು ತುಂಬಿಸುತ್ತಿರುವುದು. –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ನಗರದ ಅಪಾರ್ಟ್‌ಮೆಂಟ್‌ ಸಮುಚ್ಛಯಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿರುವುದು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ನಗರದ ಅಪಾರ್ಟ್‌ಮೆಂಟ್‌ ಸಮುಚ್ಛಯಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿರುವುದು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ನಾಯಂಡಹಳ್ಳಿಯಲ್ಲಿ ನೀರಿಗಾಗಿ ಕೊಡ ಹಿಡಿದು ನಡೆಯುತ್ತಿರುವುದು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ನಾಯಂಡಹಳ್ಳಿಯಲ್ಲಿ ನೀರಿಗಾಗಿ ಕೊಡ ಹಿಡಿದು ನಡೆಯುತ್ತಿರುವುದು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರು ಜಲಮಂಡಳಿಯಿಂದ ವಿವಿಧ ಬಡಾವಣೆಗಳ ಟ್ಯಾಂಕರ್‌ ಮೂಲಕ ಜನವಸತಿ ಪ್ರದೇಶ ಅಪಾರ್ಟ್‌ಮೆಂಟ್‌ ಸಮುಚ್ಛಯಗಳಿಗೆ ನೀರು ಪೂರೈಸುತ್ತಿರುವುದು. ಪ್ರಜಾವಾಣಿ ಚಿತ್ರ/
ಬೆಂಗಳೂರು ಜಲಮಂಡಳಿಯಿಂದ ವಿವಿಧ ಬಡಾವಣೆಗಳ ಟ್ಯಾಂಕರ್‌ ಮೂಲಕ ಜನವಸತಿ ಪ್ರದೇಶ ಅಪಾರ್ಟ್‌ಮೆಂಟ್‌ ಸಮುಚ್ಛಯಗಳಿಗೆ ನೀರು ಪೂರೈಸುತ್ತಿರುವುದು. ಪ್ರಜಾವಾಣಿ ಚಿತ್ರ/
ಬೆಂಗಳೂರಿನ ರಾಜರಾಜೇಶ್ವರಿನಗರದ ಹಲಗೆ ವಡೇರಹಳ್ಳಿ ಕೆರೆಯು ಮಳೆಯ ಕೊರತೆಯಿಂದ ಬತ್ತಿಹೋಗಿದೆ. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ
ಬೆಂಗಳೂರಿನ ರಾಜರಾಜೇಶ್ವರಿನಗರದ ಹಲಗೆ ವಡೇರಹಳ್ಳಿ ಕೆರೆಯು ಮಳೆಯ ಕೊರತೆಯಿಂದ ಬತ್ತಿಹೋಗಿದೆ. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ

ಪ್ರತಿಭಟನೆಯ ಕೂಗು

ನೀರಿನ ಹಾಹಾಕಾರ ಹೆಚ್ಚಾಗುತ್ತಿದ್ದಂತೆ ಜನರು ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ಪರಂಗಿಪಾಳ್ಯ ಕೂಡ್ಲು ಬಂಡೇಪಾಳ್ಯಗಳಲ್ಲಿ ಕುಡಿಯಲು ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಶುಕ್ರವಾರ (ಮಾರ್ಚ್‌ 1) ರಾತ್ರಿ ಎಚ್ಎಸ್ಆರ್ ಲೇಔಟ್‌ನಲ್ಲಿರುವ ಜಲಮಂಡಳಿ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದ್ದರು.  ಹೇರೋಹಳ್ಳಿ ವಾರ್ಡ್ ನಂಬರ್ 72ರ ವ್ಯಾಪ್ತಿಯಲ್ಲಿರುವ ಅಂಜನಾನಗರದ ಗದ್ದೆಕಾನ್‌ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಉಲ್ಭಣಿಸಿರುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಗದ್ದೆಕಾನ್ ನಿವಾಸಿಗಳು ಬಿಬಿಎಂಪಿ ಮುಖ್ಯ ಕಚೇರಿ ಎದುರು ಖಾಲಿ ಕೊಡ ಹಿಡಿದು ಸೋಮವಾರ ಪ್ರತಿಭಟನೆ ನಡೆಸಿದ್ದರು. ಮಹದೇವಪುರ ಕ್ಷೇತ್ರದ ಗುಂಜೂರುಪಾಳ್ಯ ಕಾಲೊನಿಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ನೀರು ಬಿಡುವವರು ಮಾಡುತ್ತಿರುವ ತಾರತಮ್ಯ ಕೂಡ ಇದಕ್ಕೆ ಕಾರಣ. ಎಂಜಿನಿಯರ್‌ಗಳು ಅಧಿಕಾರಿಗಳು ಮೌನ ವಹಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಲೆಮೇಲೆ ಖಾಲಿ ಕೊಡ ಹೊತ್ತು ಪ್ರತಿಭಟನೆ ನಡೆಸಿದ್ದರು. ಕಾಕ್ಸ್ ಟೌನ್‌ನಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಸಮರ್ಪಕವಾಗಿ ನೀರು ಪೂರೈಕೆ ಮಾಡಿ ಎಂದು ಭಾರತೀನಗರ ಒಕ್ಕಲಿಗರ ವೇದಿಕೆಯ ನೇತೃತ್ವದಲ್ಲಿ ಮಹಿಳೆಯರು ಖಾಲಿ ಕೊಡ ಹಿಡಿದು ಗುರುವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಜನ ಏನಂತಾರೆ?

ಅಂಚೆಪಾಳ್ಯದಲ್ಲಿ ನಾಲ್ಕೈದು ದಿನಗಳಿಗೊಮ್ಮೆ ನೀರು ಬರುತ್ತಿದೆ. ಶುದ್ಧಕುಡಿಯುವ ನೀರಿನ ಘಟಕದಲ್ಲಿ ₹ 5ಕೊಟ್ಟು  ಕುಡಿಯುವ ನೀರು ತರುತ್ತಿದ್ದೇವೆ. ಅದರ ಕೊಳವೆಬಾವಿಯಲ್ಲಿ ಸದ್ಯ ನೀರಿದ್ದು ಬತ್ತಿ ಹೋದರೆ ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ. ನೂರುಲ್ಲಾ ಅಂಚೆಪಾಳ್ಯ ನಿವಾಸಿ ಇಲ್ಲಿ 32 ಮನೆಗಳಿವೆ. ಕಾವೇರಿ ನೀರು ಸಂಪರ್ಕ ಇಲ್ಲ. ದೂರದಿಂದ ನೀರು ತರಬೇಕು. ಇಲ್ಲಿ ಕೊಳವೆಬಾವಿ ನೀರು ಪೂರೈಕೆಯಾಗುತ್ತಿದ್ದು 10 ದಿನಗಳಿಂದ ನೀರು ಬಂದಿರಲಿಲ್ಲ. ಇವತ್ತು ನೀರು ಬಂದಿದೆ.  ಹಸೈನ್‌ ಪಂತರಪಾಳ್ಯ ಕೊಳವೆಬಾವಿ ಕೆಟ್ಟು ಹೋಗಿ ಎರಡು ತಿಂಗಳಿನಿಂದ ನೀರಿಗಾಗಿ ಪರದಾಡುತ್ತಿದ್ದೇವೆ. ಈಗ ಸರಿ ಮಾಡಿದ್ದಾರೆ. ಆದರೂ ನಿತ್ಯ ಬರುತ್ತಿಲ್ಲ. ಬಂದಾಗ ತುಂಬಿಸಿಟ್ಟುಕೊಳ್ಳಬೇಕು. ಪದ್ಮಾ ಅಂಬೇಡ್ಕರ್‌ನಗರ ನಾವು ಮೂರನೇ ಮಹಡಿಯಲ್ಲಿ ಇದ್ದೇವೆ. ಸಣ್ಣ ಮಗು ಇದೆ. ಮಗುವಿನ ಬಟ್ಟೆ ತೊಳೆಯಬೇಕು. ನೀರು ಬರುತ್ತಿಲ್ಲ. ನಾವು ನೀರು ಹೊತ್ತುಕೊಂಡು ಬಂದು ಡ್ರಮ್‌ನಲ್ಲಿ ತುಂಬಿಸಿ ಬಳಿಕ ಅದಕ್ಕೆ ಮೋಟಾರ್‌ ಪಂಪು ಇಟ್ಟು ಮೇಲೆ ಟ್ಯಾಂಕ್‌ಗೆ ಹಾಕುತ್ತಿದ್ದೇವೆ. ಒಂದು ವಾರದಿಂದ ಬಟ್ಟೆ ತೊಳೆದಿರಲಿಲ್ಲ. ಇವತ್ತು ಬಟ್ಟೆ ಹಿಡಿದುಕೊಂಡು ಕೆಳಗೆ ಬಂದಿದ್ದೇನೆ.

-ರಾಜೇಶ್ವರಿ ಅಂಬೇಡ್ಕರ್‌ನಗರ

ನೀರಿಲ್ಲದ ಪರಿಣಾಮಗಳು....

* ವಿಜಯನಗರದಲ್ಲಿರುವ ಕೋಚಿಂಗ್ ಸೆಂಟರ್‌ನವರು ವಿದ್ಯಾರ್ಥಿಗಳಿಗೆ ಒಂದು ವಾರದವರೆಗೆ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ಸೂಚಿಸಿದ್ದಾರೆ.

* ಬನ್ನೇರುಘಟ್ಟ ರಸ್ತೆಯಲ್ಲಿರುವ ಶಾಲೆಯೊಂದು ಮುಚ್ಚಿದ್ದು ಆನ್‌ಲೈನ್‌ ತರಗತಿಗಳಿಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.

* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹಕಚೇರಿಗೂ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಯಾಗಿದೆ. * ಸಾಮಾನ್ಯ ದಿನಗಳಲ್ಲಿ ಪ್ರತಿ ಟ್ಯಾಂಕರ್‌ ನೀರಿಗೆ ₹700–₹800 ಇದ್ದಿದ್ದು ಈಗ ₹ 1500ರಿಂದ ₹ 2500ರವರೆಗೆ ಏರಿದೆ.

* ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯುವಕನೊಬ್ಬ ತನ್ನ ಮನೆಯಲ್ಲಿ ಸ್ನಾನ ಮಾಡಲೂ ನೀರಿಲ್ಲದಂತಾದಾಗಿ ಬನಶಂಕರಿಯಲ್ಲಿರುವ ಸ್ನೇಹಿತನ ಮನೆಗೆ ಸ್ನಾನಕ್ಕೆ ಹೋಗಬೇಕಾದ ಪ್ರಸಂಗ ಎದುರಾಗಿದೆ.

* ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲವರು ಕಂಪನಿಗಳಲ್ಲಿರುವ ಜಿಮ್‌ಗೆ ತೆರಳಿ ಸ್ನಾನ ಮಾಡಿಕೊಂಡು ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT