ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಪ್ರತಿ ಕೆರೆಗೆ ನೋಡಲ್‌ ಅಧಿಕಾರಿ

Published 5 ಡಿಸೆಂಬರ್ 2023, 0:03 IST
Last Updated 5 ಡಿಸೆಂಬರ್ 2023, 0:03 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳ ರಕ್ಷಣೆ, ಸಮರ್ಪಕ ನಿರ್ವಹಣೆ, ನಾಗರಿಕರ ದೂರು ವಿಲೇವಾರಿ, ಒತ್ತುವರಿ ತಡೆ, ಭದ್ರತಾ ವ್ಯವಸ್ಥೆ ಬಲಪಡಿಸುವ ಜೊತೆಗೆ ಸಂಪೂರ್ಣ ಮೇಲುಸ್ತುವಾರಿಗೆ 140 ಕೆರೆಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 210 ಕೆರೆಗಳಿದ್ದರೂ ಅಭಿವೃದ್ಧಿ, ಪುನಶ್ಚೇತನಗೊಂಡ ಹಾಗೂ ಮೇಲುಸ್ತುವಾರಿ ಅಗತ್ಯವಿರುವ 140 ಕೆರೆಗಳಿಗೆ ಮಾತ್ರ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ವಾರ್ಡ್‌, ಘನತ್ಯಾಜ್ಯ ನಿರ್ವಹಣೆ, ಬೃಹತ್‌ ನೀರುಗಾಲುವೆ, ಯೋಜನೆ, ಗುಣಮಟ್ಟ ಭರವಸೆ, ನಗರಯೋಜನೆ, ತಾಂತ್ರಿಕ ವೀಕ್ಷಣಾ ಸಮಿತಿ ಕೋಶ (ಟಿವಿಸಿಸಿ), ತಾಂತ್ರಿಕ ಎಂಜಿನಿಯರಿಂಗ್ ಕೋಶ (ಟಿಇಸಿ) ವಿಭಾಗ, ವಲಯ ಎಂಜಿನಿಯರ್‌ಗಳಿಗೆ ನೋಡಲ್‌ ಅಧಿಕಾರಿಯ ಜವಾಬ್ದಾರಿ ವಹಿಸಲಾಗಿದೆ.

ನೋಡಲ್‌ ಅಧಿಕಾರಿಗಳ ಜವಾಬ್ದಾರಿ: ಕೆರೆ ನಿರ್ವಹಣೆಗೆ ನೇಮಿಸಿರುವ ಗುತ್ತಿಗೆದಾರರು ನೀರು ನಿಲುಗಡೆ ಪ್ರದೇಶ, ಏರಿಯ ಇಳಿಜಾರಿನಲ್ಲಿ ಬೆಳೆಯುವ ಜೊಂಡು, ಗಿಡ–ಗಂಟೆಗಳನ್ನು ತೆಗೆಯಬೇಕು. ಕೆರೆಯ ಪಾದಚಾರಿ ಮಾರ್ಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಒಳಹರಿವಿನ ಸಿಲ್ಟ್‌ ಟ್ರ್ಯಾಪ್‌ನಲ್ಲಿ ಹೂಳನ್ನು ತೆಗೆಯಬೇಕು. ಘನತ್ಯಾಜ್ಯವನ್ನು ತೆರವುಗೊಳಿಸಬೇಕು. ಈ ಕಾಮಗಾರಿಗಳನ್ನು ನೋಡಲ್‌ ಅಧಿಕಾರಿ ಮೇಲುಸ್ತುವಾರಿ ವಹಿಸಬೇಕು.

ಕೆರೆಯ ಭದ್ರತೆಗೆ ನೇಮಿಸಿರುವ ಗೃಹ ರಕ್ಷಕ ದಳದ ಸಿಬ್ಬಂದಿ ನಿಗದಿತ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವುದನ್ನು ದೃಢೀಕರಿಸಬೇಕು. ಸಾರ್ವಜನಿಕರ ವಾಯುವಿಹಾರಕ್ಕೆ ನಿಗದಿತ ಸಮಯದಲ್ಲಿ ಕೆರೆಯ ದ್ವಾರಗಳನ್ನು ತೆರೆಯಬೇಕು. ಒತ್ತುವರಿಯನ್ನು ತಡೆಗಟ್ಟಬೇಕು. ಗಡಿಯಲ್ಲಿ ಹಾಕಿರುವ ತಂತಿಬೇಲಿಯನ್ನು ಕಾಪಾಡಬೇಕು. ಅಹಿತಕರ/ ಕಾನೂನುಬಾಹಿತ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕು.

ಕೆರೆ ವಿಭಾಗದ ಸಿಬ್ಬಂದಿ ಕೆರೆಯ ಪರಿವೀಕ್ಷಣೆ ಮಾಡಿ ದೂರುಗಳನ್ನು ವಿಲೇವಾರಿ ಮಾಡುತ್ತಿರುವ ಬಗ್ಗೆ ನೋಡಲ್‌ ಅಧಿಕಾರಿ ಪರಿಶೀಲಿಸಿಕೊಳ್ಳಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.

ಪ್ರತಿ ವಾರ ವರದಿ: ‘ನೋಡಲ್‌ ಅಧಿಕಾರಿಗೆ ವಹಿಸಲಾಗಿರುವ ಜವಾಬ್ಧಾರಿ ಹಾಗೂ ಕೆರೆಗಳ ಸಂಬಂಧಿಸಿದ ಮಾಹಿತಿಗಳನ್ನು ಪ್ರತಿ ವಾರ ವರದಿ ರೂಪದಲ್ಲಿ ಮುಖ್ಯ ಆಯುಕ್ತರಿಗೆ ಸಲ್ಲಿಸಬೇಕು. ಸಾರ್ವಜನಿಕರ ದೂರುಗಳನ್ನು ಪರಿಹರಿಸಿರುವ ವಿವರಗಳೂ ಇರಬೇಕು’ ಎಂದು ಅಧಿಕಾರಿಗಳು ತಿಳಿಸಿದರು.

ಅಧಿಕಾರಿಗಳಿಗೆ ಗೊತ್ತೇ ಇಲ್ಲ!

ಕೆರೆಗಳ ಮೇಲುಸ್ತುವಾರಿಗೆ ನೋಡಲ್‌ ಅಧಿಕಾರಿಯಾಗಿ ನೇಮಕ ಮಾಡಿ ಡಿ.2ರಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆದೇಶ ಹೊರಡಿಸಿದ್ದರೂ ಈ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ. ‘ನಾನು ವಾರ್ಡ್‌ ಎಂಜಿನಿಯರ್‌ ನಾನು ಘನತ್ಯಾಜ್ಯ ನಿರ್ವಹಣೆ ಕಾರ್ಯಪಾಲಕ ಎಂಜಿನಿಯರ್‌ ನಾನು ಅಧೀಕ್ಷಕ ಎಂಜಿನಿಯರ್‌... ಕೆರೆಗೂ ನನಗೂ ಸಂಬಂಧ ಇಲ್ಲ’ ಎಂದು ಹಲವು ಅಧಿಕಾರಿಗಳು ಪ್ರತಿಕ್ರಿಯಿಸಿದರು. ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ...’ ಎಂದಾಗ ‘ಅದು ಗಮನಕ್ಕೆ ಬಂದಿಲ್ಲ ಕೆರೆ ನೋಡಿಕೊಳ್ಳಲು ಬೇರೆಯವರಿದ್ದಾರೆ’ ಎಂದು ಅಧಿಕಾರಿಗಳು ಹೇಳಿದರು.

ತಂತ್ರಾಂಶ ಇನ್ನೂ ಸರಿಯಾಗಿಲ್ಲ!

ಕೆರೆ ಉದ್ಯಾನಗಳ ನಿರ್ವಹಣೆಯನ್ನು ನಾಗರಿಕರಿಗೆ ನೀಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ‌‘ಬ್ರ್ಯಾಂಡ್‌ ಬೆಂಗಳೂರು ಸಮ್ಮೇಳನ’ದಲ್ಲಿ ಭರವಸೆ ನೀಡಿದ್ದರು. ಅದರಂತೆ ‘ಕೆರೆ ಮಿತ್ರ’ ಹಾಗೂ ‘ಹಸಿರು ಮಿತ್ರ’ ಯೋಜನೆಗೆ ವೆಬ್‌ಸೈಟ್‌ನಲ್ಲಿ ನೋಂದಣಿಗೆ ಆಹ್ವಾನಿಸಲಾಗಿತ್ತು. ಆದರೆ ಬಿಬಿಎಂಪಿ ತಂತ್ರಾಂಶದ ವೈಫಲ್ಯ ನಾಗರಿಕರ ನಿರಾಸಕ್ತಿಯಿಂದ ಅಂತಿಮ ದಿನವಾಗಿದ್ದ ಅ.31ರ ಅಂತ್ಯಕ್ಕೆ 1158 ಆಸಕ್ತರು ಮಾತ್ರ ನೋಂದಣಿಯಾಗಿದ್ದರು. ‘ಈ ತಂತ್ರಾಂಶವನ್ನು ಸರಿಪಡಿಸಿ ಮತ್ತೆ ನಾಗರಿಕರಿಗೆ ನೋಂದಣಿಗೆ ಅವಕಾಶ ನೀಡಲಾಗುತ್ತದೆ’ ಎಂದು ಕೆರೆಗಳ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್‌ ಹೇಳಿದ್ದರು. ಆದರೆ ಈವರೆಗೆ ತಂತ್ರಾಂಶ ಸರಿಹೋಗಿಲ್ಲ. ‘ಕೆರೆ ಹಾಗೂ ಉದ್ಯಾನಗಳ ಕಾಮಗಾರಿಗಳ ನಿರ್ವಹಣೆ ದೂರುಗಳ ವಿಲೇವಾರಿಗೆ ಮೊಬೈಲ್‌ ಆ್ಯಪ್‌ ಸಿದ್ಧಪಡಿಸಲು ಬಿಬಿಎಂಪಿ ₹10 ಲಕ್ಷಕ್ಕೂ ಹೆಚ್ಚು ಹಣವನ್ನು ವ್ಯಯ ಮಾಡುತ್ತಿದೆ. ಆದರೆ ಈವರೆಗೆ ಬಿಬಿಎಂಪಿ ಐಟಿ ವಿಭಾಗದಿಂದ ಈ ಕೆಲಸ ಮುಗಿದಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT