ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ–100 ನಾಗರಿಕ ಜಲಮಾರ್ಗ: ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ

ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌ ಪರಿಶೀಲನೆ
Published 7 ಫೆಬ್ರುವರಿ 2024, 15:57 IST
Last Updated 7 ಫೆಬ್ರುವರಿ 2024, 15:57 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕಾಲುವೆಗಳಲ್ಲಿನ ಒತ್ತುವರಿ ತೆರವು ಮಾಡಬೇಕು, ಕಾಲುವೆಗಳಿಗೆ ಹರಿಯುತ್ತಿರುವ ತ್ಯಾಜ್ಯ ನೀರನ್ನು ಸಂಪೂರ್ಣ ನಿಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌ ಸೂಚಿಸಿದರು.

ಬಿಬಿಎಂಪಿ ಕೈಗೆತ್ತಿಕೊಂಡಿರುವ ಕೆ-100 ನಾಗರಿಕ ಜಲಮಾರ್ಗ ಯೋಜನೆ ಕಾಮಗಾರಿಯನ್ನು ಬುಧವಾರ ಪರಿಶೀಲನೆ ನಡೆಸಿದ ಅವರು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಪ್ರಧಾನ ಎಂಜಿನಿಯರ್‌ ಅವರಿಗೆ ಆದೇಶಿಸಿದರು.

ಕುಂಬಾರಗುಂಡಿ ಬಳಿ ರಾಜಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಲು ನಿರ್ಮಿಸಲಾಗುತ್ತಿರುವ 5 ಎಂಎಲ್‌ಡಿ ಎಸ್‌ಟಿಪಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಕೂಡಲೇ ಕಾರ್ಯಾರಂಭಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಶಾಲಿನಿ ರಜನೀಶ್‌ ಸೂಚನೆ ನೀಡಿದರು.

ವಿಲ್ಸನ್ ಗಾರ್ಡನ್ ಸಮೀಪದ ಮಾರಪ್ಟ ಗಾರ್ಡನ್ ಬಳಿ ರಾಜಕಾಲುವೆ ಪಕ್ಕದ ಪ್ರದೇಶವನ್ನು ಸರ್ವೆ ಮಾಡಿ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್‌ ಅವರಿಗೆ ಆದೇಶಿಸಿದರು.

ಶಾಂತಿನಗರ ಬಸ್ ನಿಲ್ದಾಣದ ಬಳಿ ನಾಗರಿಕ ಜಲಮಾರ್ಗದಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವುದನ್ನು ಗಮನಿಸಿ, ಒಳಚರಂಡಿ ನೀರು ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಜಲಮಂಡಳಿಯು ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.

ಜಲಮಂಡಳಿಯ ಮುಖ್ಯ ಎಂಜಿನಿಯರ್‌ ಗಂಗಾಧರ್‌ ಪ್ರತಿಕ್ರಿಯಿಸಿ, ‘ರಾಜಕಾಲುವೆಗೆ ತ್ಯಾಜ್ಯ ನೀರು ಹರಿಯುವುದನ್ನು ನಿಲ್ಲಿಸುವ ಸಲುವಾಗಿ 15 ಎಂಎಲ್‌ಡಿ ಸಾಮರ್ಥ್ಯದ ಇಂಟರ್ ಮೀಡಿಯೆಟ್ ಸೀವೆಜ್ ಪಂಪಿಂಗ್ ಸ್ಟೇಷನ್ (ಐಎಸ್‌ಪಿಎಸ್‌) ನಿರ್ಮಿಸಬೇಕಿದೆ. ಅದಕ್ಕಾಗಿ ಕೆಎಸ್ಆರ್‌ಟಿಸಿ ಜಾಗ ನೀಡಿದ್ದು, ಹಸ್ತಾಂತರ ಪ್ರಕ್ರಿಯೆ ಬಾಕಿಯಿದೆ’ ಎಂದರು.

‘ಜಾಗ ಪಡೆದುಕೊಂಡು ಕೂಡಲೇ ಕಾಮಗಾರಿ ಆರಂಭಿಸಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಶಾಲಿನಿ ರಜನೀಶ್‌ ಸೂಚಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಯೋಜನಾ ವಿಭಾಗದ ವಿಶೇಷ ಆಯುಕ್ತ ಕೆ. ಹರೀಶ್ ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್ ಉಪಸ್ಥಿತರಿದ್ದರು.

ಕೆ-100 ಯೋಜನೆ ಪ್ರಗತಿ ವಿವರ

ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗಿನ 9.2 ಕಿ.ಮೀ ಉದ್ದದ ‘ಕೋರಮಂಗಲ ರಾಜಕಾಲುವೆ (ಕೆ-100) ಜಲಮಾರ್ಗ ಯೋಜನೆ’ಯ ಕಾಮಗಾರಿ 2021ರ ಮಾರ್ಚ್‌ನಿಂದ ನಡೆಯುತ್ತಿದೆ ರಾಜಕಾಲುವೆಯ ತಳಭಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ನೀರು ಇಂಗುವಂತೆ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ.

ಎರಡೂ ಬದಿಯ ತಡೆಗೋಡೆ ತಳಮಟ್ಟದ ಸೇತುವೆಗಳನ್ನು ವಾಸ್ತುಶಿಲ್ಪದ ಮಾದರಿಯಲ್ಲಿ ವಿನ್ಯಾಸಗೊಳಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಹಸಿರೀಕರಣ ರಾತ್ರಿ ಸಮಯದಲ್ಲಿ ಉದ್ಯಾನದ ರೀತಿಯಲ್ಲಿ ಆಲಂಕಾರಿಕ ದೀಪ ಗ್ರಾನೈಟ್ ಅಳವಡಿಕೆ ತೋಟಗಾರಿಕೆ ಪಾದಚಾರಿ ಮಾರ್ಗ ಗ್ರಿಲ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ರಾಜಕಾಲುವೆ ಮೇಲೆ ಎರಡೂ ಬದಿ ಸಂಚರಿಸಲು ಸೇತುವೆಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ವಿದ್ಯುತ್ ಪೂರೈಕೆಗೆ ಅತ್ಯಾಧುನಿಕ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲಾಗಿದೆ. ರಾಜಕಾಲುವೆಯ ಎರಡೂ ಬದಿಯ ಸರ್ವಿಸ್‌ ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲಾಗಿದೆ. ಸರ್ವಿಸ್‌ ರಸ್ತೆಯಲ್ಲಿ ರಾಜಕಾಲುವೆಗೆ ಮಳೆ ನೀರು ಹರಿದು ಹೋಗದಂತೆ ಪೈಪ್‌ಲೈನ್ ಕೇಬಲ್ ಅಳವಡಿಕೆಗೆ ಚೇಂಬರ್‌ಗಳ ಕಾಮಗಾರಿ ಕೂಡ ಪೂರ್ಣಗೊಂಡಿದೆ ಎಂದು ಅಭಿವೃದ್ಧಿ ಆಯುಕ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT