ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಕಡತ ವಿಲೇವಾರಿಗೆ ಕಾಲಮಿತಿ ನಿಗದಿ

ಕೆಂಪೇಗೌಡ ಬಡಾವಣೆ: ಭೂಸ್ವಾಧೀನ ಸಮಸ್ಯೆ ಇತ್ಯರ್ಥಕ್ಕೆ ರೈತರ ಜೊತೆ ಬಿಡಿಎ ಸಭೆ
Last Updated 4 ಆಗಸ್ಟ್ 2021, 5:23 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಮಿ ನೀಡಿರುವ ರೈತರಿಗೆ ಸಂಬಂಧಿಸಿದ ಕಡತ ವಿಲೇವಾರಿಯಲ್ಲಿ ವಿಳಂಬವಾಗದು. ಈ ಕಡತಗಳನ್ನು ‌ಆದ್ಯತೆ ಮೇರೆಗೆ ವಿಲೇವಾರಿ ಮಾಡಲು ಕಾಲಮಿತಿ ನಿಗದಿಪಡಿಸಲಾಗುವುದು’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ರಾಜೇಶ್ ಗೌಡ ಭರವಸೆ ನೀಡಿದರು.

ಈ ಬಡಾವಣೆಯ ಭೂಸ್ವಾಧೀನ ಸಮಸ್ಯೆಗಳನ್ನು ಇತ್ಯರ್ಥ ಮಾಡುವ ಸಲುವಾಗಿ ರೈತರ ಮುಖಂಡರ ಜೊತೆ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

‘ಭೂಸ್ವಾಧೀನಕ್ಕೆ ಸಂಬಂಧಿಸಿದ ಕಡತಗಳ ವಿಲೇವಾರಿಗೆ ಬಿಡಿಎ ಅಧಿಕಾರಿಗಳು ಸುಮ್ಮನೆ ವಿಳಂಬ ಮಾಡುತ್ತಿದ್ದಾರೆ. ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿಅನಗತ್ಯವಾಗಿ ಅಲೆದಾಡಿಸುತ್ತಿದ್ದಾರೆ. ಸಣ್ಣ ಪುಟ್ಟ ಕೆಲಸಗಳಿಗೂ ಹತ್ತಾರು ದಿನಗಳವರೆಗೆ ಕಾಯಿಸುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ನೀಗಿಸಿ ನಮಗೆ ನ್ಯಾಯ ಒದಗಿಸಬೇಕು’ ಎಂದು ರೈತರ ಪರವಾಗಿ ಮುಖಂಡ ಚನ್ನಪ್ಪ ಗಮನ ಸೆಳೆದರು.

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ‘ಕಂದಾಯ ನಿವೇಶನಗಳಲ್ಲಿ 2012ಕ್ಕೆ ಮುನ್ನ ನಿರ್ಮಾಣವಾಗಿರುವ ಎಲ್ಲಾ ಮನೆಗಳನ್ನು 38 ಡಿ ಅಡಿಯಲ್ಲಿ ಸಕ್ರಮ ಮಾಡಲಾಗುತ್ತದೆ. ಇದಕ್ಕೆ ಈ ಹಿಂದೆ ನಿಗದಿಪಡಿಸಲಾಗಿದ್ದ ಶುಲ್ಕದಲ್ಲಿ ಕಡಿತಗೊಳಿಸುವ ಚಿಂತನೆ ಇದೆ. ಪ್ರಾಧಿಕಾರದ ಆಡಳಿತ ಮಂಡಳಿಯ ಮುಂದಿನ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಭರವಸೆ ನೀಡಿದರು.

‘ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೇ ಕೆಲವೆಡೆ ತೊಂದರೆ ಎದುರಾಗಿದೆ. ಇಂತಹ ಪ್ರದೇಶಗಳಲ್ಲಿ ಶೀಘ್ರವೇ ಸರ್ವೆ ನಡೆಸಿ, ಅಲ್ಲಿರುವ ಮನೆಗಳು ಮತ್ತು ಖಾಲಿ ಜಾಗಗಳಿಗೆ ಯೋಗ್ಯ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಿದ್ದೇವೆ’ ಎಂದರು.

‘ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್) ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಪರ್ಯಾಯವಾಗಿ ಬದಲಿ ನಿವೇಶನವನ್ನು ನೀಡುವ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಿದ್ದೇವೆ’ ಎಂದು ತಿಳಿಸಿದರು.

ಮುಖಂಡರಾದ ಕೃಷ್ಣಪ್ಪ, ಮೋಹನ್ ಸೇರಿದಂತೆ 50ಕ್ಕೂ ಹೆಚ್ಚು ರೈತರು ಸಭೆಯಲ್ಲಿ ಭಾಗವಹಿಸಿದರು. ಬಿಡಿಎ ಕಾರ್ಯದರ್ಶಿ ವಾಸಂತಿ ಅಮರ್‌, ಉಪಾಯುಕ್ತರಾದ ಸೌಜನ್ಯಾ, ಎಂಜಿನಿಯರಿಂಗ್‌ ಸದಸ್ಯ ಶಾಂತರಾಜಣ್ಣ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT