ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಪ್ರಭು ಕೆಂಪೇಗೌಡ ಬಡಾವಣೆ: ಒಂದೇ ನಿವೇಶನ ಇಬ್ಬರಿಗೆ ಹಂಚಿಕೆ

ಆತಂಕದಲ್ಲಿ ನಿವೇಶನದಾರರು
Last Updated 24 ಸೆಪ್ಟೆಂಬರ್ 2020, 23:14 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಒಂದೇ ನಿವೇಶನವನ್ನು ಇಬ್ಬರಿಗೆ ಹಂಚಿಕೆ ಮಾಡುವ ಚಾಳಿಯನ್ನು ಮುಂದುವರಿಸಿದೆ. ನಾಡಪ್ರಭು ‌‌ಕೆಂಪೇಗೌಡ ಬಡಾವಣೆಯಲ್ಲಿ ಇಂತಹ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಅಕ್ರಮ ಬೆಳಕಿಗೆ ಬರುತ್ತಿದ್ದಂತೆಯೇ ಕಳವಳಗೊಂಡಿರುವ ಈ ಬಡಾವಣೆಯ ನಿವೇಶನದಾರರು, ತಮ್ಮ ನಿವೇಶನ ಬೇರೆಯವರ ಹೆಸರಿಗೂ ನೋಂದಣಿಯಾಗಿಲ್ಲ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ಮುಂದಾಗಿದ್ದಾರೆ.

ಮೂರನೇ ಬ್ಲಾಕ್‌ನ ಎ ಸೆಕ್ಟರ್‌ನಲ್ಲಿ ಅಂಗವಿಕಲ ಮಹಿಳೆಯೊಬ್ಬರಿಗೆ 20x30 ಅಡಿ ನಿವೇಶನ ಹಂಚಿಕೆಯಾಗಿತ್ತು. ಅದರ ಪೂರ್ಣ ಶುಲ್ಕ ಪಾವತಿಸಿ, ಗುತ್ತಿಗೆ ಮತ್ತು ಕ್ರಯಪತ್ರವನ್ನೂ ನೋಂದಾಯಿಸಿದ್ದರು. ಆದರೆ, ನಿವೇಶನದ ಖಾತೆಯನ್ನು ಬೇರೆಯವರ ಹೆಸರಿಗೆ ಮಾಡಿಕೊಡಲಾಗಿದೆ.

‘25 ವರ್ಷಗಳ ಸತತ ಪ್ರಯತ್ನದ ಬಳಿಕ ಅಮ್ಮನಿಗೆ ಆರ್ಥಿಕ ದುರ್ಬಲ ವರ್ಗ ಮತ್ತ ಅಂಗವಿಕಲ ಕೋಟಾದಡಿ ನಿವೇಶನ ಹಂಚಿಕೆಯಾಗಿತ್ತು. ಬ್ಯಾಂಕ್‌ನಿಂದ ಸಾಲ ಮಾಡಿ ಶುಲ್ಕ ಪಾವತಿಸಿದ್ದೆವು. ಮಾರ್ಚ್‌ ತಿಂಗಳಲ್ಲಿ ಋಣಭಾರರಹಿತ್ಯ ಪ್ರಮಾಣಪತ್ರ (ಇಸಿ) ತೆಗೆಸಿ ನೋಡಿದಾಗಲೂ, ನಿವೇಶನ ಅಮ್ಮನ ಹೆಸರಿನಲ್ಲೇ ಇತ್ತು. 10 ದಿನಗಳ ಹಿಂದೆ ಖಾತೆ ಮಾಡಿಸಿಕೊಳ್ಳಲು ಅರ್ಜಿ ಹಾಕಲು ಹೋದಾಗ ಈ ನಿವೇಶನಕ್ಕೆ ಬೇರೆಯವರಿಗೆ ಖಾತೆ ಮಾಡಿದ್ದು ತಿಳಿಯಿತು. ಈಗ ಬದಲಿ ನಿವೇಶನ ನೀಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ನಿವೇಶನದಾರ ಮಹಿಳೆಯ ಪುತ್ರ ತಿಳಿಸಿದರು.

ಒಂದನೇ ಬ್ಲಾಕ್‌ನ ಸೆಕ್ಟರ್‌ ಎಲ್‌ನಲ್ಲಿ ಮಹಿಳೆಯೊಬ್ಬರಿಗೆ 40x60 ಅಡಿ ವಿಸ್ತೀರ್ಣದ ನಿವೇಶನ ಹಂಚಿಕೆಯಾಗಿದೆ. ಅವರು ಖಾತಾ ನೋಂದಣಿ ಮಾಡಿಸಲು ಹೋದಾಗ ಆ ನಿವೇಶನ ಬೇರೊಬ್ಬರು ರೈತರ ಹೆಸರಿಗೆ ನೋಂದಣಿಯಾಗಿರುವುದು ಕಂಡು ಬಂದಿದೆ.

‘ಎಲ್ಲ ವ್ಯವಸ್ಥೆ ಕಂಪ್ಯೂಟರೀಕರಣಗೊಂಡ ಬಳಿಕವೂ ಒಂದೇ ನಿವೇಶನವನ್ನು ಒಂದಕ್ಕಿಂತ ಹೆಚ್ಚು ಮಂದಿಗೆ ಹಂಚಿಕೆ ಮಾಡಲು ಹೇಗೆ ಸಾಧ್ಯ. ಹಣ ಕಟ್ಟಿಸಿಕೊಳ್ಳುವಾಗ, ನಿವೇಶನದ ಖಚಿತ ಅಳತೆ (ಸಿಡಿ) ಸಿದ್ಧಪಡಿಸುವಾಗ, ಗುತ್ತಿಗೆ ಕ್ರಯಪತ್ರ ನೀಡುವಾಗ, ಅದನ್ನು ನೋಂದಣಿ ಮಾಡುವಾಗ ಬಿಡಿಎ ಅಧಿಕಾರಿಗಳು ಕಣ್ಣುಮುಚ್ಚಿ ಕೆಲಸ ಮಾಡುತ್ತಾರೆಯೇ’ ಎಂದು ಪ್ರಶ್ನಿಸುತ್ತಾರೆ ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರ ಮುಕ್ತವೇದಿಕೆಯ ಸೂರ್ಯಕಿರಣ್‌.

‘ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಾರೆ. ತಪ್ಪು ಬಿಡಿಎ ಕಡೆಯಿಂದ ತಪ್ಪು ಆದಾಗ ಸರಿಪಡಿಸುವ ಹೊಣೆಯೂ ಅವರದ್ದೇ ಅಲ್ಲವೇ. ಒಂದೇ ನಿವೇಶನವನ್ನು ಇಬ್ಬರಿಗೆ ಹಂಚಿಕೆ ಮಾಡಿದ ಒಂದು ಪ್ರಕರಣ ಆರು ತಿಂಗಳ ಹಿಂದೆಯೇ ಪತ್ತೆಯಾಗಿತ್ತು. ಇನ್ನೂ ಅವರಿಗೆ ಬದಲಿ ನಿವೇಶನ ನೀಡಿಲ್ಲ. ಈ ರೀತಿ ಮಾಡಿ ನಿವೇಶನದಾರರು ಕಚೇರಿಯಿಂದ ಕಚೇರಿಗೆ ಅಲೆಯುವಂತೆ ಮಾಡಿ ಅವರಿಂದ ಸಾಧ್ಯವಾದಷ್ಟು ಹಣ ಪೀಕಿಸುವುದು ಅಧಿಕಾರಿಗಳ ತಂತ್ರ’ ಎಂದು ಮುಕ್ತ ವೇದಿಕೆಯ ಕಾರ್ಯದರ್ಶಿ ಎಂ.ಅಶೋಕ್‌ ಆರೋಪಿಸಿದರು.

ಎರಡನೇ ನಿವೇಶನವೂ ಅವರ ಹೆಸರಿನಲ್ಲಿಲ್ಲ!
ವ್ಯಕ್ತಿಯೊಬ್ಬರಿಗೆ ಬಡಾವಣೆಯ ಐದನೇ ಬ್ಲಾಕ್‌ನ ಒ ಸೆಕ್ಟರ್‌ನಲ್ಲಿ 20x30 ಅಡಿ ನಿವೇಶನ ಮಂಜೂರಾಗಿತ್ತು. ಆ ನಿವೇಶನ ಬೇರೊಬ್ಬರಿಗೆ ಹಂಚಿಕೆ ಆಗಿದೆ ಎಂದು ಸ್ವಲ್ಪದಿನದಲ್ಲಿ ಬಿಡಿಎ ಅಧಿಕಾರಿಗಳೇ ಅವರಿಗೆ ತಿಳಿಸಿದ್ದರು. ಅವರಿಗೆ ಅದೇ ಬ್ಲಾಕ್‌ನ ಜಿ ಸೆಕ್ಟರ್‌ನಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಿದ್ದರು. ಈಗ ಆ ಬದಲಿ ನಿವೇಶನವೂ ಅವರ ಹೆಸರಿನಲ್ಲಿಲ್ಲ!

‘ನನಗೆ ಹಂಚಿಕೆಯಾದ ನಿವೇಶನದ ಗುತ್ತಿಗೆ ಮತ್ತು ಕ್ರಯಪತ್ರವನ್ನು ನೋಂದಣಿ ಮಾಡಿಸಿದ್ದೆ. ಖಾತೆ ಮಾಡಿಸಲು ಹೋದಾಗ ಅದಕ್ಕೆ ಈಗಾಗಲೇ ಬೇರೆಯವರಿಗೆ ಖಾತೆ ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಏನು ಮಾಡಬೇಕು ಎಂದೇ ತೋಚುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ನಿವೇಶನದಾರರು ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

‘ಬಿಡಿಎ ವಿಶ್ವಾಸಾರ್ಹತೆ ಉಳಿಸಿಕೊಳ್ಳಲಿ’
‘ಒಂದೇ ನಿವೇಶನವನ್ನು ಇಬ್ಬರಿಗೆ ಹಂಚಿಕೆ ಮಾಡುವುದಕ್ಕೆ ಕಾರಣರಾದ ಅಧಿಕಾರಿಗಳನ್ನು ಪತ್ತೆ ಹಚ್ಚಿ ಶಿಸ್ತುಕ್ರಮ ಕೈಗೊಳ್ಳುವ ಮೂಲಕ ಬಿಡಿಎ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು. ಒಂದು ನಿವೇಶನದ ಗುತ್ತಿಗೆ ಕರಾರು ಪತ್ರ ನೋಂದಾಯಿಸಿದ ಬಳಿಕ ಅದೇ ನಿವೇಶನಕ್ಕೆ 10 ವರ್ಷ ಕಾಲ ಮತ್ತೆ ನೋಂದಣಿಗೆ ಅವಕಾಶ ನೀಡಬಾರದು. ಇದಕ್ಕೆ ನೋಂದಣಾಧಿಕಾರಿ ಕಚೇರಿಯ ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡು ಮಾಡಬೇಕು’ ಎಂದು ಎಂ.ಅಶೋಕ ಒತ್ತಾಯಿಸಿದರು.

***
ಒಂದೇ ನಿವೇಶನವನ್ನು ಇಬ್ಬರಿಗೆ ಹಂಚಿಕೆ ಮಾಡಿದ ಪ್ರಕರಣಗಳು ನನ್ನ ಗಮನಕ್ಕೂ ಬಂದಿವೆ. ಅಂತಹ ನಿವೇಶನದಾರರಿಗೆ ತಕ್ಷಣವೇ ಬದಲಿ ನಿವೇಶನ ನೀಡುತ್ತೇವೆ. ಈ ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ.
–ಎಚ್‌.ಆರ್‌.ಮಹದೇವ, ಬಿಡಿಎ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT