ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾ, ಉಬರ್‌ ಆಟೋರಿಕ್ಷಾ ಸೇವೆ ಸ್ಥಗಿತ: ಸಾರಿಗೆ ಇಲಾಖೆ ತಗಾದೆ ಏನು?

ಎರಡೂ ಕಂಪನಿಗಳಿಗೆ ನೋಟಿಸ್ ನೀಡಿದ ಸಾರಿಗೆ ಇಲಾಖೆ
Last Updated 7 ಅಕ್ಟೋಬರ್ 2022, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ಓಲಾ ಮತ್ತು ಉಬರ್ ಇನ್ಮುಂದೆ ಆಟೋರಿಕ್ಷಾ ಸೇವೆ ನೀಡುವಂತಿಲ್ಲ. ಕೂಡಲೇ ಈ ಸೇವೆ ಸ್ಥಗಿತಗೊಳಿಸಬೇಕು’ ಎಂದು ಈ ಎರಡು ಕಂಪನಿಗಳಿಗೆ ಸಾರಿಗೆ ಇಲಾಖೆ ನೋಟಿಸ್ ನೀಡಿದೆ.

ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪನಿಗಳು ಆಟೋರಿಕ್ಷಾಗಳ ಸೇವೆ ಒದಗಿಸುವುದು ಕಾನೂನುಬಾಹಿರ. ಆದರೂ, ಆಟೋರಿಕ್ಷಾ ಸೇವೆಗಳನ್ನೂ ಈ ಕಂಪನಿಗಳು ಒದಗಿಸುತ್ತಿರುವುದು ಮತ್ತು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಈ ಸೇವೆ ಸ್ಥಗಿತಗೊಳಿಸಬೇಕು. ಈ ಬಗ್ಗೆ ವಿವರಣೆ ಇದ್ದರೆ ಮೂರು ದಿನಗಳಲ್ಲಿ ಸಲ್ಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಆಯುಕ್ತರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಬೇಡಿಕೆ ಆಧರಿತ ಸಾರಿಗೆ ತಂತ್ರಜ್ಞಾನ ನಿಯಮ –2016ರ ಅಡಿಯಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಲು ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ. ಟ್ಯಾಕ್ಸಿ ಚಾಲಕ ಸೇರಿ ಏಳು ಮಂದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವ ವಾಹನ ಆಗಿರಬಾರದು ಎಂದು ಷರತ್ತು ವಿಧಿಸಲಾಗಿದೆ. ಈ ನಿಯಮ ಪಾಲಿಸಬೇಕು, ನಿಗದಿಂತ ಹೆಚ್ಚಿನ ದರ ಪಡೆಯಬಾರದು ಎಂದು ತಾಕೀತು ಮಾಡಿದ್ದಾರೆ.

ಮೊದಲಿಗೆ ಟ್ಯಾಕ್ಸಿ ಸೇವೆಯನ್ನಷ್ಟೇ ನೀಡುತ್ತಿದ್ದ ಈ ಕಂಪನಿಗಳು ಎರಡು ವರ್ಷಗಳಿಂದ ಆಟೋರಿಕ್ಷಾಗಳನ್ನೂ ಈ ಸೇವೆಗೆ ಒಳಪಡಿಸಿಕೊಂಡಿದ್ದವು. ಆರಂಭದಲ್ಲಿ ಕಡಿಮೆ ದರ ಪಡೆಯುತ್ತಿದ್ದ ಕಂಪನಿಗಳು, ಇತ್ತೀಚೆಗೆ ದರ ಹೆಚ್ಚಳ ಮಾಡಿದ್ದವು. 2 ಕಿಲೋ ಮೀಟರ್‌ಗಿಂತ ಕಡಿಮೆ ದೂರವಿದ್ದರೂ ಕನಿಷ್ಠ ₹100 ದರ ನಿಗದಿ ಮಾಡಿದ್ದವು. ಈ ಬಗ್ಗೆ ಪ್ರಯಾಣಿಕರು ಸಾರಿಗೆ ಇಲಾಖೆಗೆ ದೂರನ್ನೂ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಾರಿಗೆ ಇಲಾಖೆಯನ್ನು ಗ್ರಾಹಕರು ತರಾಟೆಗೂ ತೆಗೆದುಕೊಂಡಿದ್ದರು.‌‌ ಸಾರಿಗೆ ಇಲಾಖೆ ನೋಟಿಸ್ ನೀಡಿದರೂ ಶುಕ್ರವಾರ ರಾತ್ರಿಯೂ ಓಲಾ ಮತ್ತು ಉಬರ್ ಆ್ಯಪ್‌ಗಳಲ್ಲಿ ಆಟೋರಿಕ್ಷಾ ಸೇವೆ ಮುಂದುವರಿದಿತ್ತು.

ರ್‍ಯಾಪಿಡೋ ಆ್ಯಪ್‌ಗೂ ನೋಟಿಸ್

ರ್‍ಯಾಪಿಡೋ ಆ್ಯಪ್ ಮೂಲಕ ಟ್ಯಾಕ್ಸಿ, ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳ ಸೇವೆ ಒದಗಿಸುತ್ತಿರುವ ರೊಪೆನ್ ಟ್ರಾನ್ಸ್‌ಪೋರ್ಟೇಷನ್ ಪ್ರೈವೆಟ್ ಲಿಮಿಟೆಡ್‌ ಸಾರಿಗೆ ಇಲಾಖೆ ನೋಟಿಸ್ ನೀಡಿದೆ.

ಕಾನೂನುಬಾಹಿರವಾಗಿ ಆ್ಯಪ್ ಆಧಾರಿತ ಸೇವೆ ಒದಗಿಸಬಾರದು. ಕರ್ನಾಟಕ ರಾಜ್ಯ ಬೇಡಿಕೆ ಆಧರಿತ ಸಾರಿಗೆ ತಂತ್ರಜ್ಞಾನ ನಿಯಮ ಮತ್ತು ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ–2021ರ ಅಡಿಯಲ್ಲಿ ಪರವಾನಗಿ ಪಡೆದು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದೆ.

ಗೊತ್ತಿದ್ದು ಸುಮ್ಮನಿದ್ದ ಸಾರಿಗೆ ಇಲಾಖೆ

ಆ್ಯಪ್ ಆಧಾರಿತ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವಂತೆ ಸಾರಿಗೆ ಇಲಾಖೆ ನೋಟಿಸ್‌ ನೀಡಿರುವುದನ್ನು ಆಟೋರಿಕ್ಷಾ ಮತ್ತು ಕ್ಯಾಬ್‌ ಚಾಲಕರು ಸ್ವಾಗತಿಸಿದ್ದಾರೆ.

‘ಆ್ಯಪ್ ಆಧಾರಿತ ಸೇವೆಯಲ್ಲಿ ಗ್ರಾಹಕರು ಮತ್ತು ಆಟೊ ಚಾಲಕರಿಬ್ಬರಿಗೂ ಮೋಸ ಆಗುತ್ತಿತ್ತು. ಗ್ರಾಹಕರಿಂದ ಪಡೆಯುತ್ತಿದ್ದ ದರಕ್ಕೂ, ಆಟೋ ಚಾಲಕರಿಗೆ ನೀಡುತ್ತಿದ್ದ ದರಕ್ಕೂ ಸಾಕಷ್ಟು ವ್ಯತ್ಯಾಸ ಇತ್ತು. ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದೆವು. ಕಾನೂನುಬಾಹಿರವಾದ ಈ ಸೇವೆ ಸ್ಥಗಿತಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದ್ದೆವು. ಆದರೂ ಸಾರಿಗೆ ಇಲಾಖೆ ಜಾಣಗುರುಡು ವಹಿಸಿತ್ತು’ ಎಂದು ಆಟೋ ಚಾಲಕ ಅಂಬರೀಷ್ ಹೇಳುತ್ತಾರೆ.

‘ಆ್ಯಪ್‌ಗಳಲ್ಲಿ ಪ್ರಯಾಣ ದರ ಹೆಚ್ಚಿಗೆ ನಿಗದಿ ಮಾಡಿದ ನಂತದ ಗ್ರಾಹಕರ ಸಂಖ್ಯೆ ಇಳಿಮುಖವಾಗಿತ್ತು. ಸಾರಿಗೆ ಇಲಾಖೆ ತಡವಾಗಿಯಾದರೂ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ’ ಎಂದರು.

‘ಸರ್ಕಾರವೇ ಆ್ಯಪ್ ನಿರ್ವಹಿಸಲಿ’

ಆ್ಯಪ್ ಆಧರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಕಂಪನಿಗಳಿಂದ ಗ್ರಾಹಕರು ಮತ್ತು ಕ್ಯಾಬ್ ಚಾಲಕರಿಗೆ ಮೋಸವಾಗುತ್ತಿದೆ. ಈಗಲಾದರೂ ಸರ್ಕಾರವೇ ಆ್ಯಪ್ ನಿರ್ವಹಿಸಬೇಕು ಎಂದು ಓಲಾ-ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ ಒತ್ತಾಯಿಸಿದರು.

‘ಓಲಾ ಮತ್ತು ಉಬರ್ ಸೇರಿ ಆ್ಯಪ್ ಆಧರಿತ ಕಂಪನಿಗಳು ಆಟೋರಿಕ್ಷಾಗಳ ಸೇವೆ ನೀಡುವುದು ಕಾನೂನುಬಾಹಿರ. ಆಟೋರಿಕ್ಷಾಗಳ ಪ್ರಯಾಣ ದರ ನಿಗದಿ ಮಾಡುವ ಅಧಿಕಾರ ಆಯಾ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ಮೀಟರ್ ಅಳವಡಿಸಿಕೊಂಡು ಚಾಲನೆ ಮಾಡುವುದು ಸರಿಯಾದ ಕ್ರಮ’ ಎಂದು ಹೇಳಿದರು.

‘ಈ ಬಗ್ಗೆ ಹಲವು ಬಾರಿ ಸಾರಿಗೆ ಇಲಾಖೆ ಗಮನಕ್ಕೆ ತಂದಿದ್ದೆವು. ತಡವಾಗಿ ಇಲಾಖೆ ಎಚ್ಚೆತ್ತುಕೊಂಡಿದೆ.ಚಾಲಕರು ಕೂಡ ಈ ರೀತಿಯ ಕಂಪನಿಗಳ ಬಳಿ ಒಡನಾಟ ಇಟ್ಟುಕೊಳ್ಳಬಾರದು’ ಎಂದು ಮನವಿ ಮಾಡಿದರು.

ಕ್ಯಾಬ್ ಸೇವೆಗಳ ದರಪಟ್ಟಿ(₹ಗಳಲ್ಲಿ)

ವಾಹನಗಳ ಪ್ರಕಾರ; ನಿಗದಿತ ದರ (ಕನಿಷ್ಠ 4 ಕಿ.ಮೀ.ವರೆಗೆ); ಹೆಚ್ಚುವರಿ ಪ್ರತಿ ಕಿ.ಮೀಗೆ ಕನಿಷ್ಠ/ಗರಿಷ್ಠ

₹5 ಲಕ್ಷ ಮೌಲ್ಯದ ವಾಹನ; 75; 18/36

₹5-₹10 ಲಕ್ಷ ಮೌಲ್ಯ; 100; 21/42

₹10-₹16 ಲಕ್ಷ ಮೌಲ್ಯ; 120; 24/48

₹16 ಲಕ್ಷ ಮೇಲ್ಪಟ್ಟ ಮೌಲ್ಯ; 150; 27/54

ಚಾಲ್ತಿಯಲ್ಲಿರುವ ಆಟೋರಿಕ್ಷಾ ಪ್ರಯಾಣ ದರ


2 ಕಿ.ಮೀ.ಗೆ – ₹ 30 (ಮೂರು ಜನ ಪ್ರಯಾಣಿಕರು)

2 ಕಿ.ಮೀ. ನಂತರ ಪ್ರತಿ ಕಿ.ಮೀ.ಗೆ; ₹ 15

ಕಾಯುವಿಕೆ ದರ

ಮೊದಲ ಐದು ನಿಮಿಷ – ಉಚಿತ

ನಂತರ ಪ್ರತಿ ಹದಿನೈದು ನಿಮಿಷಕ್ಕೆ; ₹ 5


ಪ್ರಯಾಣಿಕರ ಲಗೇಜು ದರ

ಮೊದಲ 20 ಕೆ.ಜಿ.ಗೆ– ಉಚಿತ

ನಂತರದ ಪ್ರತಿ 20 ಕೆ.ಜಿ.ಗೆ – ₹ 5

ರಾತ್ರಿ ವೇಳೆ ದರ (ರಾತ್ರಿ 10 ಗಂಟೆಯಿಂದ ನಸುಕಿನ 5 ಗಂಟೆವರೆಗೆ)

ಸಾಮಾನ್ಯ ದರ + ಸಾಮಾನ್ಯ ದರದ ಅರ್ಧಪಟ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT