ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪಾವತಿಗೆ ಒಟಿಎಸ್ ಜಾರಿ

ಯಾವುದೇ ಕಾರಣಕ್ಕೂ ಈ ಅವಧಿಯನ್ನು ವಿಸ್ತರಿಸುವುದಿಲ್ಲ' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Published 11 ಜೂನ್ 2024, 9:40 IST
Last Updated 11 ಜೂನ್ 2024, 9:40 IST
ಅಕ್ಷರ ಗಾತ್ರ

ಬೆಂಗಳೂರು: 'ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಬಾಕಿ ಪಾವತಿಸಲು ಒಂದು ಬಾರಿ ಪರಿಹಾರ ಯೋಜನೆಯನ್ನು (ಒಟಿಎಸ್) ಜಾರಿಗೆ ತರಲಾಗಿದ್ದು, ಜು.31ರವರೆಗೆ ಈ ಅನುಕೂಲ ಪಡೆಯಬಹುದು. ಯಾವುದೇ ಕಾರಣಕ್ಕೂ ಈ ಅವಧಿಯನ್ನು ವಿಸ್ತರಿಸುವುದಿಲ್ಲ'' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, 'ಬಿಬಿಎಂಪಿ ಕಾಯ್ದೆಯಲ್ಲಿ ಆಸ್ತಿ ತೆರಿಗೆ ಬಾಕಿ ವಸೂಲಾತಿಗೆ ಅವಕಾಶವಿದೆ. ಆದರೂ ನಾಗರಿಕರಿಗೆ ಸಹಾಯ ಮಾಡಲು ಸರ್ಕಾರ ಮತ್ತು ಬಿಬಿಎಂಪಿ ಒಟಿಎಸ್ ವ್ಯವಸ್ಥೆ ಜಾರಿಗೆ ತಂದಿದೆ' ಎಂದರು.

ಈ ಯೋಜನೆಯಡಿ ಆಸ್ತಿ ತೆರಿಗೆಯ ಬಾಕಿ ಮೇಲೆ ಪಾವತಿಸಬೇಕಾದ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ದಂಡವನ್ನು ಅರ್ಧಕ್ಕೆ ಇಳಿಸಲಾಗಿದೆ. ಇದರ ಅನುಕೂಲವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸರ್ಕಾರಕ್ಕೆ ಒಟ್ಟು ₹ 5,230 ಕೋಟಿ ಆಸ್ತಿ ತೆರಿಗೆ ಬರಬೇಕಾಗಿದೆ. ಬೆಂಗಳೂರಲ್ಲಿ 20 ಲಕ್ಷ ಆಸ್ತಿಗಳನ್ನು ಗುರುತಿಸಿದ್ದೇವೆ. ಈಗಾಗಲೇ 8.6 ಲಕ್ಷ ಆಸ್ತಿದಾರರು ತೆರಿಗೆ ಕಟ್ಟಿದ್ದಾರೆ. ಈವರೆಗೆ ₹ 1,300 ಕೋಟಿ. ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಇನ್ನೂ ₹ 3,900 ಕೋಟಿ ಆಸ್ತಿ ತೆರಿಗೆ ಬರಬೇಕಾಗಿದೆ. ಜು. 31ವರೆಗೆ ಒನ್ ಟೈಂ ಸೆಟಲ್ ಮೆಂಟ್ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಸ್ಕೀಂ ಜಾರಿಗೆ ಬಂದ ಬಳಿಕ

ಇಲ್ಲಿಯವರೆಗೆ 4 ಲಕ್ಷ ಸುಸ್ತಿದಾರರ ಪೈಕಿ ಸುಮಾರು 50 ಸಾವಿರ ಜನರು ಮಾತ್ರ ತೆರಿಗೆ ಪಾವತಿ ಮಾಡಿದ್ದಾರೆ ಎಂದರು.

ತೆರಿಗೆ ವ್ಯಾಪ್ತಿಗೆ ಬಾರದೇ ಇರುವವರು ಬಹಳಷ್ಟು ಜನ ಇದ್ದಾರೆ. ಅವರು ಸೂಕ್ತ ದಾಖಲಾತಿ ನೀಡಿದರೆ 90 ದಿನಗಳಲ್ಲಿ ಅದನ್ನು ಪರಿಶೀಲಿಸುತ್ತೇವೆ. ದಾಖಲೆ ಪರಿಶೀಲಿಸಿ ಅದರನ್ವಯ ಎ ಅಥವಾ ಬಿ ಖಾತೆ ಕೊಡಲಾಗುತ್ತದೆ. ಬೆಂಗಳೂರಿನ ಎಲ್ಲಾ 20 ಲಕ್ಷ ಆಸ್ತಿಗಳ ದಾಖಲಾತಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಈಗಾಗಲೇ 8 ಲಕ್ಷ ಆಸ್ತಿಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಮೂರು ತಿಂಗಳಲ್ಲಿ ಪ್ರಕ್ರಿಯೆ ಮುಗಿಸುವಂತೆ ಸೂಚನೆ ನೀಡಲಾಗಿದೆ. ಬಳಿಕ ಅವರ ಮನೆಗಳಿಗೆ ಖಾತೆ ಕಳುಹಿಸಿಕೊಡಲಾಗುವುದು ಎಂದೂ ಅವರು ವಿವರಿಸಿದರು.

ನಾಗರಿಕರು ಆನ್‌ಲೈನ್ ಮೂಲಕ ಆಸ್ತಿತೆರಿಗೆಯನ್ನು ಸುಲಭವಾಗಿ ಪಾವತಿಸಲು ಲಿಂಕ್ https://bbmptax.karnataka.gov.in ಅನ್ನು ಬಳಸಬಹುದು.

ಪಾರ್ಕ್ ಅವಧಿ ವಿಸ್ತರಣೆ

ಬೆಂಗಳೂರಲ್ಲಿ ಪಾರ್ಕ್ ತೆರೆಯುವ ಅವಧಿಯನ್ನು ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಈ ಮುಂಚೆ ಪಾರ್ಕ್ ನ್ನು ನಿಗದಿತ ಅವಧಿಯಲ್ಲಿ ತೆರೆಯಲಾಗುತ್ತಿತ್ತು. ಇನ್ನು ಮುಂದೆ ಉದ್ಯಾನವನಗಳನ್ನು ಸಾರ್ವಜನಿಕರಿಗೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ತೆರೆಯಲಾಗುತ್ತದೆ. ನಾಗರಿಕರ ಒತ್ತಾಯದ ಮೇರೆಗೆ ಪಾರ್ಕಿನ ಅವಧಿಯನ್ನು ವಿಸ್ತರಿಸಲಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದರು.

ಫ್ಲೆಕ್ಸ್ ಅಳವಡಿಸಿದರೆ ಎಆರ್‌ಒಗಳ ಮೇಲೆ ಕೇಸ್

ಅದೆಷ್ಟು ಎಚ್ಚರಿಕೆ ನೀಡಿದರೂ ಬೆಂಗಳೂರಲ್ಲಿ ಫ್ಲೆಕ್ಸ್ ಗಳನ್ನು ಹಾಕಲಾಗುತ್ತಿದೆ. ಬೇಡ ಅಂದರೂ ಫ್ಲೆಕ್ಸ್ ಗಳನ್ನು ಹಾಕುತ್ತಿದ್ದಾರೆ. ನನ್ನ ಫ್ಲೆಕ್ಸ್ ಹಾಕಿದ್ದಕ್ಕೆ ಬಿಬಿಎಂಪಿ ಅಧಿಕಾರಿಗಳು ನನಗೆ ದಂಡ ಹಾಕಿದ್ದರು. ಇನ್ನು ಮುಂದೆ ಫ್ಲೆಕ್ಸ್ ಗಳು ಕಂಡು ಬಂದರೆ ಆ ವ್ಯಾಪ್ತಿಯ ಸಹಾಯಕ ಕಂದಾಯ ಅಧಿಕಾರಿ ವಿರುದ್ಧ ಪ್ರಕರಣ ಹಾಕಲು ಸೂಚನೆ ನೀಡಲಾಗಿದೆ. ಎಂದರು.

'ಫ್ಲೆಕ್ಸ್ ತೆರವು ಮಾಡುವುದು ಆತನ ಜವಾಬ್ದಾರಿ. ಯಾವುದೇ ರಾಜಕೀಯ ಪಕ್ಷಗಳಾಗಲಿ, ಶಾಸಕರಾಗಲಿ, ಮಂತ್ರಿಗಳಾಗಲಿ ಅವರ ಫ್ಲೆಕ್ಸ್ ಗಳನ್ನು ಹಾಕಿದರೆ ಅವರ ವಿರುದ್ಧ ಕೇಸ್ ಹಾಕಬೇಕು ಎಂದು ಸೂಚಿಸಲಾಗಿದೆ' ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT