ಬುಧವಾರ, ಜನವರಿ 22, 2020
26 °C

ಈರುಳ್ಳಿ ಬೆಲೆ ಕುಸಿತ ಗ್ರಾಹಕರಿಗೆ ಸಿಗದ ಲಾಭ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬುಧವಾರದಿಂದ ಈರುಳ್ಳಿ ಧಾರಣೆ ಇಳಿಕೆ ಕಂಡಿದ್ದರೂ ಅದರ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ. ಕಳೆದ ವಾರ ಕೆ.ಜಿ ₹ 200ಕ್ಕೆ ಮುಟ್ಟಿದ್ದ ಅತ್ಯುತ್ತಮ ಗುಣಮಟ್ಟದ ಈರುಳ್ಳಿ ಇಂದು ₹ 80ರಿಂದ 100ರವರೆಗೆ ಮಾರಾಟ ಆಗಿದೆ.

ಚಿಕ್ಕ ಮಾರುಕಟ್ಟೆಗಳಲ್ಲಿ ಸಾಧಾರಣ ಗುಣಮಟ್ಟದ ಈರುಳ್ಳಿಗೆ ಗ್ರಾಹಕರು ಕೆ.ಜಿಗೆ ₹ 120ರಿಂದ 140ರವರೆಗೆ ಪಾವತಿಸಬೇಕಿದೆ. ಅತ್ಯಂತ ಕಳಪೆ ಗುಣಮಟ್ಟದ ಈರುಳ್ಳಿಗೂ ₹ 60ರಿಂದ 80ರವರೆಗೆ ಕೊಡಬೇಕಾಗಿದೆ. ಸಗಟು ಮತ್ತು ಚಿಕ್ಕ ಮಾರುಕಟ್ಟೆ ನಡುವೆ ಧಾರಣೆ ವಿಷಯದಲ್ಲಿ ಅಜಗಜಾಂತರ ವ್ಯತ್ಯಾಸವಿದೆ.

ಕೃಷಿ ಉತ್ಪನ್ನ ಮಾರುಕಟ್ಟೆಗೆ ಈಜಿಪ್ಟ್‌, ಟರ್ಕಿ, ಮಹಾರಾಷ್ಟ್ರ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಗುರುವಾರ 150 ಲಾರಿ ಅಂದರೆ, ಸುಮಾರು 60 ಸಾವಿರ ಚೀಲ ಈರುಳ್ಳಿ ಆವಕವಾಗಿದೆ.

ಮಹಾರಾಷ್ಟ್ರದ ಹಳೇ ಈರುಳ್ಳಿ ಕೆ.ಜಿ ₹90ರಿಂದ 100ವರೆಗೆ ಹರಾಜಾಗಿದೆ. ಚಿತ್ರದುರ್ಗ ಹೊಸ ಈರುಳ್ಳಿಯೂ ₹ 60ರಿಂದ 100ವರೆಗೆ ಧಾರಣೆ ಇತ್ತು. ಸಣ್ಣದಾದ ಗೊಲ್ಟಾ ಗೊಲ್ಟಿಗೂ ₹ 40ರಿಂದ 50ರವರೆಗೆ ಬಿಕರಿಯಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆಯ ಈರುಳ್ಳಿ ಆಲೂಗಡ್ಡೆ ವರ್ತಕರ ಸಂಘದ ಸಿ. ಉದಯಶಂಕರ್‌ ಹಾಗೂ ರವಿಶಂಕರ್ ತಿಳಿಸಿದರು.

ಈ ವಾರ ಹೆಚ್ಚು ಕಡಿಮೆ ಇದೇ ಸ್ಥಿತಿ ಮುಂದುವರಿಯಲಿದೆ ಎಂದೂ ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು