ಭಾನುವಾರ, ಸೆಪ್ಟೆಂಬರ್ 26, 2021
21 °C
* ವೈವಾಹಿಕ ಜಾಲತಾಣದಲ್ಲಿ ಮಹಿಳೆಯರ ಪರಿಚಯ * ಚಿನ್ನ, ನಗದು ಪಡೆದು ಪರಾರಿ

ಪೊಲೀಸರ ಬಲೆಗೆ ಬಿದ್ದ ‘ಆನ್‌ಲೈನ್ ವರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಪ್ತಿ ಮಾಡಲಾದ ಚಿನ್ನಾಭರಣ, ನಗದು ಜೊತೆ ಆರೋಪಿ

ಬೆಂಗಳೂರು: ವೈವಾಹಿಕ ಜಾಲತಾಣದಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ಮದುವೆ ನೆಪದಲ್ಲಿ ಚಿನ್ನಾಭರಣ ಹಾಗೂ ನಗದು ಪಡೆದು ವಂಚಿಸುತ್ತಿದ್ದ ಆರೋಪಿ ಜಗನ್ನಾಥ್ (32) ಎಂಬಾತನನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.

‘ವಿಜಯಪುರ ಜಿಲ್ಲೆಯ ಜಗನ್ನಾಥ್, ಬಿ.ಎ ಪದವೀಧರ. ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹಲವರ ಜೊತೆ ದುರ್ವರ್ತನೆ ತೋರುತ್ತಿದ್ದ. ಹೀಗಾಗಿ, ಕುಟುಂಬದವರು ಆತನನ್ನು ಮನೆಯಿಂದ ಹೊರಗೆ ಹಾಕಿದ್ದರು. ಬೆಂಗಳೂರಿಗೆ ಬಂದಿದ್ದ ಆತ, ಮಹಿಳೆಯರನ್ನು ವಂಚಿಸಿ ಹಣ ಸಂಪಾದನೆ ಮಾಡುತ್ತಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆರೋಪಿಯಿಂದ ವಂಚನೆಗೀಡಾಗಿದ್ದ ಬಾಗಲೂರು ಮಹಿಳೆಯೊಬ್ಬರು ಇತ್ತೀಚೆಗೆ ದೂರು ನೀಡಿದ್ದರು. ಅದರ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ 116 ಗ್ರಾಂ ಚಿನ್ನಾಭರಣ, ₹ 1.60 ಲಕ್ಷ ನಗದು, 5 ಮೊಬೈಲ್ ಹಾಗೂ 20 ಸಿಮ್‌ಕಾರ್ಡ್‌ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

‘ಮ್ಯಾಟ್ರಿಮೋನಿಯಲ್ ಡಾಟ್ ಕಾಮ್‌ ಸೇರಿದಂತೆ ಹಲವು ಜಾಲತಾಣಗಳಲ್ಲಿ ಆರೋಪಿ ಖಾತೆ ತೆರೆದಿದ್ದ. ಅಸಲಿ ಹೆಸರು ಬಚ್ಚಿಡುತ್ತಿದ್ದ ಆರೋಪಿ, ತನ್ನ ಹೆಸರು ರಮೇಶ್ ಹಾಗೂ ವಿಜಯ್‌ ಎಂಬುದಾಗಿ ಸುಳ್ಳು ಹೇಳುತ್ತಿದ್ದ. ವರನನ್ನು ಹುಡುಕಲು ಜಾಲತಾಣದಲ್ಲಿ ಖಾತೆ ತೆರೆಯುತ್ತಿದ್ದ 30 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ ವಿಚ್ಛೇದಿತ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಪರಿಚಯ ಮಾಡಿಕೊಳ್ಳುತ್ತಿದ್ದ.’

‘ಮದುವೆ ಮಾಡಿಕೊಳ್ಳುವುದಾಗಿ ಮಹಿಳೆಯರಿಗೆ ಭರವಸೆ ನೀಡುತ್ತಿದ್ದ ಆರೋಪಿ, ಸಲುಗೆ ಬೆಳೆಸಿಕೊಳ್ಳುತ್ತಿದ್ದ. ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದು, ಅದಕ್ಕಾಗಿ ಹಣ ಬೇಕಿರುವುದಾಗಿ ಹೇಳುತ್ತಿದ್ದ. ತಮ್ಮನ್ನು ಮದುವೆಯಾಗುತ್ತಾರೆಂದು ನಂಬುತ್ತಿದ್ದ ಮಹಿಳೆಯರು, ಆರೋಪಿಗೆ ನಗದು ಹಾಗೂ ಚಿನ್ನಾಭರಣ ಕೊಡುತ್ತಿದ್ದರು. ಅದನ್ನು ಪಡೆದು ಆರೋಪಿ ಪರಾರಿಯಾಗುತ್ತಿದ್ದ. ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದ’ ಎಂದೂ ಅಧಿಕಾರಿ ವಿವರಿಸಿದರು.

‘ಆರೋಪಿ ಇದುವರೆಗೂ 8 ಮಹಿಳೆಯರನ್ನು ವಂಚಿಸಿರುವ ಮಾಹಿತಿ ಇದೆ. ಒಬ್ಬ ಮಹಿಳೆ ಮಾತ್ರ ದೂರು ನೀಡಿದ್ದಾರೆ. ಯಾರಾದರೂ ವಂಚನೆಗೀಡಾಗಿದ್ದರೆ, ಠಾಣೆಗೆ ಮಾಹಿತಿ ನೀಡಬೇಕು’ ಎಂದೂ ಅಧಿಕಾರಿ ಕೋರಿದರು.

ಜೈಲಿಗೂ ಹೋಗಿ ಬಂದಿದ್ದ: ‘ಬೈಕ್‌ ಕಳ್ಳತನ ಪ್ರಕರಣದಲ್ಲಿ ಆರೋಪಿ ಜಗನ್ನಾಥ್‌ನನ್ನು ಬನಶಂಕರಿ ಪೊಲೀಸರು ಕಳೆದ ವರ್ಷ ಬಂಧಿಸಿದ್ದರು. ಜೈಲಿಗೂ ಹೋಗಿದ್ದ ಆರೋಪಿ, ಜಾಮೀನು ಮೇಲೆ ಹೊರಬಂದು ಮಹಿಳೆಯರನ್ನು ವಂಚಿಸಲಾರಂಭಿಸಿದ್ದ’ ಎಂದೂ ಅಧಿಕಾರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು