ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯಲಷ್ಟೇ ನೀರು, ಕೃಷಿಗೆ ಇಲ್ಲ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆ ಸಂಗ್ರಹ

Last Updated 1 ಮಾರ್ಚ್ 2021, 21:35 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆ ಕಾಲಿಡುತ್ತಿರುವುದರಿಂದ ರಾಜ್ಯದ ಎಲ್ಲ ಜಲಾಶಯಗಳಲ್ಲೂ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಮೀಸಲಿಡಬೇಕು; ಕೃಷಿ ಉದ್ದೇಶಕ್ಕೆ ಬಳಸಲು ಅವಕಾಶ ಕೊಡಬಾರದು ಎಂದು ಕಂದಾಯ ಇಲಾಖೆ ಕಟ್ಟಪ್ಪಣೆ ಮಾಡಿದೆ.

ಈ ಬಾರಿ ಬೇಸಿಗೆ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದ್ದು, ಅದಕ್ಕೆ ಪೂರಕವಾಗಿ ಕುಡಿಯುವ ನೀರಿನ ಕೊರತೆ ಆಗಬಾರದು ಎಂಬಕಾರಣಕ್ಕೆ ರಾಜ್ಯ ಹವಾಮಾನ ಕಾವಲು ಸಮಿತಿ (ವೆದರ್‌ ವಾಚ್ ಕಮಿಟಿ) ಈಗಾಗಲೇ ಸಭೆ ನಡೆಸಿ ಎಲ್ಲ ಜಲಾಶಯಗಳ ಪ್ರಾಧಿಕಾರಗಳಿಗೂಪತ್ರವನ್ನು ಬರೆದಿದೆ ಎಂದು ಕಂದಾಯ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪ್ರತಿ ಅಣೆಕಟ್ಟೆಗಳಲ್ಲಿ ಲಭ್ಯವಿರುವ ನೀರನ್ನು ಮೊದಲ ಆದ್ಯತೆಯಾಗಿ ಕುಡಿಯುವ ಉದ್ದೇಶಕ್ಕೆ ಅಗತ್ಯದಷ್ಟು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಮುಂಗಾರು ತಡವಾದರೂ ಪರಿಸ್ಥಿತಿಯನ್ನು ಎದುರಿಸಲು (ಜೂನ್‌ ಕೊನೆಯವರೆಗೆ) ತುರ್ತು ಸಂಗ್ರಹವಾಗಿ (ಬಫರ್) ಇಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ರಾಜ್ಯದ ಎಲ್ಲ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಅಂದಾಜಿಸಿದರೆ ಜೂನ್‌ ಕೊನೆಯವರೆಗೆ ಕುಡಿಯುವ ನೀರು ಪೂರೈಸಲು ಸಾಕಾಗುವಷ್ಟು ಮಾತ್ರ ಲಭ್ಯತೆ ಇದೆ. ನೀರಾವರಿಗೆ ಹರಿಸಿದರೆ ಕುಡಿಯುವುದಕ್ಕೆ ಕಷ್ಟ ಆಗಬಹುದು ಎಂದು ಮೂಲಗಳು ತಿಳಿಸಿವೆ.

ಕೃಷ್ಣರಾಜ ಜಲಾಶಯದಲ್ಲೂ ಅಗತ್ಯಕ್ಕೆ ತಕ್ಕಷ್ಟು ನೀರಿದೆ. ಬೆಂಗಳೂರು ನಗರಕ್ಕೆ ಒಂದು ತಿಂಗಳಿಗೆ 1.5 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಬೆಂಗಳೂರು ಅಲ್ಲದೆ, ಅಚ್ಚುಕಟ್ಟು ಪ್ರದೇಶದಲ್ಲಿಬರುವ 27 ವಿವಿಧ ಪಟ್ಟಣಗಳು, 3 ನಗರಗಳು ಮತ್ತು 625 ಗ್ರಾಮ ಪಂಚಾಯತ್‌ಗಳಿಗೆ ಕಾವೇರಿಯಿಂದ ಸುಮಾರು 3 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಅಷ್ಟು ಪ್ರಮಾಣವನ್ನು ಕಾಪಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಚಳಿಗಾಲ ಮುಗಿಯುವ ಮೊದಲೇ ಬೇಸಿಗೆಯ ವಾತಾವರಣ ಆರಂಭವಾಗಿದೆ. ಬೇಸಿಗೆಯಲ್ಲಿ ಜಲಾಶಯದ ನೀರು ಆವಿಯಾಗಿ ನಷ್ಟವಾಗುವ ಪ್ರಮಾಣ ಹೆಚ್ಚು. ಆ ನಷ್ಟವನ್ನು ಪರಿಗಣಿಸಿ, ನೀರಿನ ಸಂಗ್ರಹವನ್ನು ಇಟ್ಟುಕೊಳ್ಳುವ ಸವಾಲು ಇದೆ. ಹೀಗಾಗಿ ಯಾವುದೇ ತೊಂದರೆ ಆಗದಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಅಭಿವೃದ್ಧಿ ಆಯುಕ್ತರು ಜಿಲ್ಲಾಧಿಕಾರಿಗಳು ಮತ್ತು ವಿಭಾಗಾಧಿಕಾರಿಗಳಿಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಕಳೆದ ವರ್ಷದ ನೀರಿನ ಸಂಗ್ರಹಕ್ಕೆ ಹೋಲಿಸಿದರೆ, ಈ ವರ್ಷ ಸಂಗ್ರಹದ ಮಟ್ಟ ಕೊಂಚ ತಗ್ಗಿರುವುದು ಜಲಾಶಯಗಳ ನೀರಿನ ಮಟ್ಟದ ಅಂಕಿ–ಅಂಶಗಳಿಂದ ಗೊತ್ತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT