ಗುರುವಾರ , ಅಕ್ಟೋಬರ್ 21, 2021
21 °C
ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆ * ಮೊದಲ ಸುರಂಗ ಕೊರೆಯುವ ಕಾಮಗಾರಿ ಪೂರ್ಣ

ಸುರಂಗದಿಂದ ಸೆ 22ರಂದು ಹೊರ ಬರಲಿದೆ ಊರ್ಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಣೆಯಲ್ಲಿ ಕಂಟೋನ್ಮೆಂಟ್‌- ಶಿವಾಜಿನಗರ ಮಧ್ಯೆ ಸುರಂಗ ನಿರ್ಮಿಸುತ್ತಿರುವ ಊರ್ಜಾ ಯಂತ್ರವು ಬುಧವಾರ (ಸೆ 21) ಕಾಮಗಾರಿ ಪೂರ್ಣಗೊಳಿಸಿ ಸುರಂಗದಿಂದ ಹೊರಬರಲಿದೆ. ಯಂತ್ರವು ಸುರಂಗದಿಂದ ಹೊರಬರುವ ಕ್ಷಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಕ್ಷಿಯಾಗಲಿದ್ದಾರೆ.

ಊರ್ಜಾ ಯಂತ್ರವು ರೀಚ್‌– 6 ಮಾರ್ಗದಲ್ಲಿ 2020ರ ಜುಲೈ 30ರಂದು ಸುರಂಗ ಕೊರೆಯುವ ಕಾಮಗಾರಿಯನ್ನು ಆರಂಭಿಸಿತ್ತು. ಚೀನಾದಿಂದ ಆಮದು ಮಾಡಿಕೊಂಡ ಈ ಯಂತ್ರವು ನಿತ್ಯ ಸರಾಸರಿ 2.5 ಮೀ ಉದ್ದದ ಸುರಂಗ ಕೊರೆಯುತ್ತಿತ್ತು. ಇದುವರೆಗೆ ಒಟ್ಟು 855 ಮೀಟರ್‌ ಉದ್ದದ ಸುರಂಗವನ್ನು ಕೊರೆದಿದೆ. ಈ ಸುರಂಗ ಮಾರ್ಗವು ಒಟ್ಟು 864 ಮೀ. ಉದ್ದವಿದೆ. ಎರಡನೇ ಹಂತದ ವಿಸ್ತರಣೆ ಕಾಮಗಾರಿಯಲ್ಲಿ ಪೂರ್ಣಗೊಳ್ಳುತ್ತಿರುವ ಮೊದಲ ಸುರಂಗ ಮಾರ್ಗವಿದು. 

ಗೊಟ್ಟಿಗೆರೆ– ನಾಗವಾರ ನಡುವೆ ನಿರ್ಮಾಣವಾಗುತ್ತಿರುವ ರೀಚ್–6 ಮಾರ್ಗದಲ್ಲಿ (ಒಟ್ಟು ಉದ್ದ 21.25 ಕಿ.ಮೀ) ಡೇರಿ ವೃತ್ತದಿಂದ ನಾಗವಾರ ನಡುವೆ 13.9 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಡೇರಿ ವೃತ್ತದಿಂದ ಟ್ಯಾನರಿ ರಸ್ತೆ ನಡುವಿನ 9.28 ಕಿ.ಮೀ. ಮಾರ್ಗದಲ್ಲಿ ಸುರಂಗ ಕಾಮಗಾರಿ ವಿವಿಧ ಹಂತಗಳಲ್ಲಿ ನಡೆಯುತ್ತಿದೆ. ಒಟ್ಟು ಎಂಟು ಒಂಬತ್ತು ಯಂತ್ರಗಳು ಸುರಂಗ ಕೊರೆಯುವ ಕಾರ್ಯದಲ್ಲಿ ತೊಡಗಿವೆ. ಊರ್ಜಾ ತನ್ನ ಹೊಣೆಯನ್ನು ಮುಗಿಸುವ ಹಂತದಲ್ಲಿದ್ದರೆ, ಇದೇ ಮಾರ್ಗದಲ್ಲಿ ಕಾರ್ಯಾಚರಣೆಗಿಳಿದಿರುವ ವಿಂಧ್ಯ ಯಂತ್ರವು ಊರ್ಜಾ ಯಂತ್ರಕ್ಕಿಂತ ಸುಮಾರು 50 ಮೀಟರ್‌ಗಳಷ್ಟು ಹಿಂದಿದೆ. ವಿಂಧ್ಯ ಯಂತ್ರವು ಮುಂದಿನ ತಿಂಗಳು ಕಾರ್ಯಾಚರಣೆ ಮುಗಿಸುವ ನಿರೀಕ್ಷೆ ಇದೆ.

ಅವನಿ ಹಾಗೂ ‘ಲವಿ’ ಯಂತ್ರಗಳು ಶಿವಾಜಿನಗರದಿಂದ ಎಂ.ಜಿ. ರಸ್ತೆ ಕಡೆಗೆ ಸುರಂಗ ನಿರ್ಮಿಸುತ್ತಿವೆ. ಆರ್‌ಟಿ01 ಯಂತ್ರವು ವೆಲ್ಲಾರ ಜಂಕ್ಷನ್‌ನಿಂದ ಲ್ಯಾಂಗ್‌ಫೋರ್ಡ್‌ ರಸ್ತೆ ಮಧ್ಯೆ ಮಾರ್ಚ್‌ನಿಂದ ಸುರಂಗ ಕೊರೆಯುತ್ತಿದೆ. ಎಂಟನೇಯ ‘ಭದ್ರಾ’ ಯಂತ್ರವನ್ನು ಇತ್ತೀಚೆಗಷ್ಟೇ ನೆಲದಡಿಗೆ ಇಳಿಸಲಾಗಿದೆ. ಟ್ಯಾನರಿ ರಸ್ತೆಯಿಂದ ನಾಗವಾರ ನಡುವಿನ ವೆಂಕಟೇಶಪುರದ ನೆಲದಡಿಯ ನಿಲ್ದಾಣದಲ್ಲಿ ಈ ಟಿಬಿಎಂ ಕಾರ್ಯಾರಂಭ ಮಾಡಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹೇಳಿದೆ.

ಪರಿಷ್ಕೃತ ಗಡುವಿನ ಪ್ರಕಾರ ರೀಚ್‌–6 ಮಾರ್ಗದ ಕಾಮಗಾರಿಯು 2024ರ ಜೂನ್‌ ಒಳಗೆ ಪೂರ್ಣಗೊಳ್ಳಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು