ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಘಟ್ಟ ಕೆರೆಯಿಂದ ಬೆಂಗಳೂರಿಗೆ ನೀರು ಹರಿಸಲು ವಿರೋಧ

ರೈತ ಮುಖಂಡರೊಂದಿಗೆ ಜಲಮಂಡಳಿ ಸಭೆ ಇಂದು
ಬೈಲಮೂರ್ತಿ. ಜಿ
Published 8 ಮೇ 2024, 0:30 IST
Last Updated 8 ಮೇ 2024, 0:30 IST
ಅಕ್ಷರ ಗಾತ್ರ

ಹೆಸರಘಟ್ಟ: ಹೆಸರಘಟ್ಟ ಕೆರೆಯಿಂದ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ಮೂಲಕ ಬೆಂಗಳೂರಿನ ದಾಸರಹಳ್ಳಿ ಭಾಗಕ್ಕೆ ನೀರು ಪೂರೈಕೆ ಮಾಡಲು ಬೆಂಗಳೂರು ಜಲ ಮಂಡಳಿ ನಿರ್ಧರಿಸಿದ್ದು, ಇದಕ್ಕೆ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಜಲಾಶಯದಲ್ಲಿ ಸದ್ಯ 0.35 ಟಿಎಂಸಿ ಅಡಿ ನೀರು ಲಭ್ಯವಿದೆ. ಇದರಲ್ಲಿ 0.05 ಟಿಎಂಸಿ ಅಡಿ ಪ್ರಮಾಣದ ನೀರನ್ನು ಮೂರ್ನಾಲ್ಕು ತಿಂಗಳು ದಾಸರಹಳ್ಳಿ ಭಾಗಕ್ಕೆ ಪೂರೈಸಬೇಕೆಂದು ಜಲಮಂಡಳಿ ಸಿದ್ಧತೆ ನಡೆಸುತ್ತಿದೆ. ಮಳೆ ಕೊರತೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನ ಈ ಭಾಗಕ್ಕೆ ನೀರು ಪೂರೈಸುವುದು ಜಲಮಂಡಳಿಯ ಉದ್ದೇಶ.

‘ಇದರಿಂದ ಸುತ್ತಲಿನ ಅಂತರ್ಜಲ ಮಟ್ಟ ಕುಸಿದು, ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗುತ್ತದೆ. ಹೆಸರಘಟ್ಟ ಕೆರೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೃಷಿಯನ್ನೇ ಅವಲಂಬಿಸಿರುವ ರೈತರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಈ ಯೋಜನೆ ಕೈಬಿಡಬೇಕು‘ ಎಂಬುದು ರೈತ ಪರ ಸಂಘಟನೆಗಳು ಒತ್ತಾಯ. ಕೈಬಿಡದಿದ್ದರೆ ಹೋರಾಟಕ್ಕೂ ಸಂಘಟನೆಗಳು ಸಜ್ಜಾಗುತ್ತಿವೆ. ಇದೇ ವಿಚಾರವಾಗಿ ರೈತ ಮುಖಂಡರೊಂದಿಗೆ ಚರ್ಚಿಸಲು ಮೇ 8ರಂದು ಜಲಮಂಡಳಿ ಸಭೆ ಕರೆದಿದೆ.

ಒಂದು ಕಾಲದಲ್ಲಿ ಹೆಸರಘಟ್ಟ ಕೆರೆಯಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲಾಗುತ್ತಿತ್ತು. 2022 ರಲ್ಲಿ ಕೆರೆ ತುಂಬಿತ್ತು. ಕೋಡಿ ಹರಿಯಲು ಒಂದು ಅಡಿ ಬಾಕಿ ಇತ್ತು. ಆದರೆ ನಂತರ ಮಳೆ ಬೀಳಲಿಲ್ಲ. ಕೋಡಿ ಹರಿಯಲಿಲ್ಲ. 2023ರಲ್ಲಿ ಮಳೆ ಕೊರತೆಯಿಂದಾಗಿ ಕೆರೆಯಲ್ಲಿ ನೀರು ಸಂಗ್ರಹ ಪ್ರಮಾಣವೂ ಕಡಿಮೆಯಾಗಿದೆ.

ಕಾವೇರಿ 5ನೇ ಹಂತದ ಯೋಜನೆ ಶುರುವಾಗುವವರೆಗೆ 2 ರಿಂದ 3 ತಿಂಗಳು ಮಾತ್ರ ಹೆಸರಘಟ್ಟ ಕೆರೆಯಿಂದ ಬೆಂಗಳೂರಿನ ದಾಸರಹಳ್ಳಿಗೆ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ. 0.05 ಟಿಎಂಸಿ ಅಡಿ ಮಾತ್ರ ನೀರನ್ನು ಸರಬರಾಜು ಮಾಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ರೈತರು ಆತಂಕ ಪಡುವ ಅಗತ್ಯವಿಲ್ಲ.

-ಡಾ.ರಾಮ್‌ಪ್ರಸಾತ್‌ ಮನೋಹರ್ ಅಧ್ಯಕ್ಷ ಬೆಂಗಳೂರು ಜಲ ಮಂಡಳಿ

ಹೆಸರಘಟ್ಟ ಕೆರೆಯ ನೀರನ್ನು ಬೆಂಗಳೂರಿಗೆ ಹರಿಸುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ. ಕೆರೆಯ ಸುತ್ತಲಿನ 150 ಗ್ರಾಮಗಳ ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗುತ್ತದೆ. ರೈತರ ಕುಟುಂಬಗಳು ಬೀದಿಪಾಲಾಗುತ್ತವೆ. ಪ್ರಾಣಿ ಪಕ್ಷಿಗಳಿಗೂ ನೀರಿಲ್ಲದಂತಾಗುತ್ತದೆ. ಆದ್ದರಿಂದ ನೀರು ಪೂರೈಕೆ ಮಾಡಬಾರದು.

-ನಂಜುಂಡಪ್ಪ ಕಡತನಮಲೆ, ರಾಜ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT