ಭಾನುವಾರ, ಮೇ 29, 2022
29 °C

ಸಂಸ್ಕೃತ ವಿ.ವಿ ಸ್ಥಾಪನೆಗೆ ವಿರೋಧ: ಕರ್ನಾಟಕ ರಕ್ಷಣಾ ವೇದಿಕೆ ಟ್ವೀಟ್‌ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಗಡಿಯಲ್ಲಿ ‘ಸಂಸ್ಕೃತ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಭಾನುವಾರ ಕೈಗೊಂಡಿದ್ದ ‘ಸಂಸ್ಕೃತ ವಿ.ವಿ. ಬೇಡ' ಟ್ವಿಟರ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾವಿರಾರು ಕನ್ನಡಿಗರು ಸಂಸ್ಕೃತ ವಿಶ್ವ ವಿದ್ಯಾಲಯ ಸ್ಥಾಪನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ತನ್ನ ನಿರ್ಧಾರ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಟ್ವೀಟ್‌ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ, ’ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರ ₹359ಕೋಟಿ ನೀಡಿದೆ. ಆದರೆ, ಕನ್ನಡ ವಿಶ್ವವಿದ್ಯಾಲಯಕ್ಕೆ ₹2 ಕೋಟಿ ರುಪಾಯಿ ಸಹ ನೀಡಲು ಹಿಂದೇಟು ಹಾಕುತ್ತಿದೆ‘ ಎಂದು ವಿವರಿಸಿದ್ದಾರೆ.

’ದೇಶದಲ್ಲಿ ಒಟ್ಟು ಹದಿನಾರು ಸಂಸ್ಕೃತ ವಿಶ್ವವಿದ್ಯಾಲಯಗಳಿವೆ. ಸಂಸ್ಕೃತ ಮಾತನಾಡುವವರ ಸಂಖ್ಯೆ ಜಗತ್ತಿನಲ್ಲಿ ಕೇವಲ 24,000. ಇಷ್ಟು ಜನರ ನುಡಿಗೆ ಹದಿನಾರು ವಿಶ್ವವಿದ್ಯಾಲಯಗಳ ಅಗತ್ಯವಾದರೂ ಏನಿತ್ತು. ಆದರೆ, ಏಳು ಕೋಟಿ ಜನರು ಮಾತನಾಡುವ ಕನ್ನಡ ನುಡಿಗೆಂದು ಇರುವುದು ಒಂದೇ ವಿಶ್ವವಿದ್ಯಾಲಯ‘ ಎಂದು  ಟ್ವೀಟ್‌ ಮಾಡಿದ್ದಾರೆ.

’ರಾಮನಗರ ಜಿಲ್ಲೆಯಲ್ಲಿ ನೂರು ಎಕರೆ ಅರಣ್ಯ ಪ್ರದೇಶವನ್ನೇ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಕೊಡಲಾಗಿದೆ. ಈಗಿರುವ ಸಂಸ್ಕೃತ ವಿಶ್ವವಿದ್ಯಾಲಯಗಳಲ್ಲಿ ಓದಲು ವಿದ್ಯಾರ್ಥಿಗಳು ಬರುತ್ತಿಲ್ಲ. ಹೀಗಿರುವಾಗ ಇಷ್ಟು ದೊಡ್ಡ ಜಾಗವನ್ನು ಯಾಕೆ ಕೊಡಲಾಗಿದೆ? ಇದೇ ಜಾಗದಲ್ಲಿ ಇನ್ನೊಂದು ಕನ್ನಡ ವಿಶ್ವವಿದ್ಯಾಲಯ ತೆರೆಯಬಹುದಿತ್ತಲ್ಲವೇ?‘ ಎಂದು ಪ್ರಶ್ನಿಸಿದ್ದಾರೆ.

‘ಕನ್ನಡದ ಬದಲು ಸಂಸ್ಕೃತ ಕಲಿಸುವ ದೊಡ್ಡ ಹುನ್ನಾರ ನಡೆಯುತ್ತಿದೆ. ಸಂಸ್ಕೃತಕ್ಕೆ ಸಂಬಂಧಿಸಿದ ಸಂಸ್ಥೆಗಳು, ಅಧ್ಯಾಪಕರು ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿರುವುದು ಇದಕ್ಕೆ ತಾಜಾ ಉದಾಹರಣೆ. ಇವರ ಸಂಚನ್ನು ವಿಫಲಗೊಳಿಸೋಣ‘ ಎಂದು ನಾರಾಯಣಗೌಡ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಜೆಡಿಎಸ್‌ ಮಾಹಿತಿ ತಂತ್ರಜ್ಞಾನ ಘಟಕದ ಅಧ್ಯಕ್ಷ ಪ್ರತಾಪ್‌ ಕಣಗಾಲ್‌, ’ಸರ್ಕಾರದ ಹಣದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಆರಂಭಿಸುವ ಅಗತ್ಯ ಏನು‘ ಎಂದು ಪ್ರಶ್ನಿಸಿದ್ದಾರೆ.

’2011ರ ಜನಗಣತಿ ಅನ್ವಯ ಕೇವಲ 1,218 ಜನರು ಸಂಸ್ಕೃತ ತಮ್ಮ ಮಾತೃ ಭಾಷೆ ಎಂದು ಹೇಳಿದ್ದಾರೆ. ಜನ
ಸಂಖ್ಯೆಯ ಶೇಕಡ 1ಕ್ಕಿಂತ ಕಡಿಮೆ ಮಾತನಾಡುವ ಜನರಿಗಾಗಿ ₹300ಕೋಟಿಗೂ ಹೆಚ್ಚು ಮೊತ್ತ ಖರ್ಚು ಮಾಡುವ ಅಗತ್ಯವಿದೆಯೇ? ಜನರ ತೆರಿಗೆ ಹಣವನ್ನು ಈ ರೀತಿ ವ್ಯರ್ಥ ಮಾಡುವುದು ಸರಿಯೇ‘ ಎಂದು ಎಂ.ಎಚ್‌. ಗೌತಮ್‌ ಗಣೇಶ್‌ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಈ ಅಭಿಯಾನದಲ್ಲಿ ಇಡೀ ದಿನ 50ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳು ಮತ್ತು ಮರುಟ್ವೀಟ್‌ಗಳನ್ನು ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು