ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಂತರ ವೈರಸ್‌: ಕ್ವಾರಂಟೈನ್‌ಗೆ ವಿರೋಧ, ಸೋಂಕಿತರ ಅಪಾರ್ಟ್‌ಮೆಂಟ್‌ ಸೀಲ್‌ ಡೌನ್

Last Updated 29 ಡಿಸೆಂಬರ್ 2020, 11:49 IST
ಅಕ್ಷರ ಗಾತ್ರ

ಬೆಂಗಳೂರು: ನಗರದ 34 ವರ್ಷದ ಮಹಿಳೆ ಮತ್ತು ಅವರ ಆರು ವರ್ಷದ ಮಗುವಿಗೆ ಬ್ರಿಟನ್‌ ರೂಪಾಂತರ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇವರು ನೆಲೆಸಿದ್ದ ವಸಂತನಗರ ವಾರ್ಡ್‌ನ ವಿಠ್ಠಲ ನಗರದ ಅಪಾರ್ಟ್‌ಮೆಂಟ್‌ ಅನ್ನು ಬಿಬಿಎಂಪಿ ಸೀಲ್‌ಡೌನ್ ಮಾಡಿದೆ.

ಈ ಅಪಾರ್ಟ್‌ಮೆಂಟ್‌ನಲ್ಲಿದ್ದ 37 ನಿವಾಸಿಗಳ ಕ್ವಾರಂಟೈನ್‌ ಕೇಂದ್ರಗಳಿಗೆ ಹೋಗಲು ನಿರಾಕರಿಸುತ್ತಿದ್ದಂತೆ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ. ಎಲ್ಲ ನಿವಾಸಿಗಳ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದ್ದು, ಆರ್‌–ಪಿಸಿಆರ್‌ ಪರೀಕ್ಷೆಗೆ ಮಾದರಿ ಕಳುಹಿಸಲಾಗಿದೆ.

‘ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಿಗೆ ಅಂದರೆ ಹೋಟೆಲ್‌ಗಳಿಗೆ ಸ್ಥಳಾಂತರಿಸುವಂತೆ ಸರ್ಕಾರ ಸೂಚನೆ ನೀಡಿದೆ. ಇಂಗ್ಲೆಂಡ್‌ನಿಂದ ಬಂದವರ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟ 45 ಮಂದಿಯನ್ನು ಗುರುತಿಸಲಾಗಿದೆ. ಇವರೆಲ್ಲರೂ ಮೊದಲು ಹೋಂ ಕ್ವಾರಂಟೈನ್‌ನಲ್ಲಿದ್ದರು’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಿ.ಕೆ. ವಿಜಯೇಂದ್ರ ಹೇಳಿದರು.

ಈ ವಾರ್ಡ್‌ನ ಮಾಜಿ ಸದಸ್ಯೆ ಶೋಭಾ ಗೌಡ ‘ಅಪಾರ್ಟ್‌ಮೆಂಟ್‌ನ ಎಲ್ಲ 37 ನಿವಾಸಿಗಳನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವಂತೆ ದೆಹಲಿಯಿಂದ ಆದೇಶ ಬಂದಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಹೇಳುತ್ತಾರೆ. ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಟ್ಟರೆ ಸಮಸ್ಯೆಯಾಗುತ್ತದೆ ಎಂದು ನಿವಾಸಿಗಳು ಹೇಳುತ್ತಾರೆ. ಎಲ್ಲರೂ ಆರೋಗ್ಯದಿಂದಿದ್ದು, ಹೋಮ್‌ ಕ್ವಾರಂಟೈನ್‌ಗೆ ಒಳಗಾಗುವುದಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.

ಈಗ ಅಪಾರ್ಟ್‌ಮೆಂಟ್‌ ನಿವಾಸಿಗಳಲ್ಲೆಲ್ಲರೂ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದು, ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿದಿನ ಅಪಾರ್ಟ್‌ಮೆಂಟ್‌ ಆವರಣವನ್ನು ಸ್ಯಾನಿಟೈಸ್‌ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ.

‘ಯಾವುದೇ ನಿವಾಸಿಗಳನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವುದಿಲ್ಲ. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಹೋಮ್‌ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು’ ಎಂದು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಎಂ. ರಾಮಕೃಷ್ಣ ತಿಳಿಸಿದರು.

ಇನ್ನಷ್ಟು ಓದು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT