ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಪರಭಾಷಿಕರಿಗೆ ಕನ್ನಡ ನುಡಿ ಕಲಿಸುವ ಸದ್ದಿಲ್ಲದ ಅಭಿಯಾನ

ಅನ್ಯ ಭಾಷಿಕರ ‘ಕನ್ನಡದ ದೀಪ’
Published 1 ನವೆಂಬರ್ 2023, 5:23 IST
Last Updated 1 ನವೆಂಬರ್ 2023, 5:23 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಕನ್ನಡ ಮಾತನಾಡುವುದಿಲ್ಲವಂಬ ಕಾರಣಕ್ಕೆ ಸಂಘರ್ಷಗಳೂ ನಡೆಯುತ್ತಿವೆ.

ಈ ಸಮಸ್ಯೆಗೆ ಸಂಘರ್ಷರಹಿತ ಪರಿಹಾರ ಕಂಡುಕೊಳ್ಳುವತ್ತ ಭಾರತೀಯ ಸಿಟಿ ವಸತಿ ಸಮುಚ್ಛಯದ ನಿವಾಸಿಗಳು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇದಕ್ಕಾಗಿ ಆರಂಭಿಸಲಾದ ಅಭಿಯಾನವು ಸಿಹಿಫಲ ಕೊಡುತ್ತಿದೆ. ಈ ಅಭಿಯಾನದಲ್ಲಿ ಕನ್ನಡ ಕಲಿತವರು ಬುಧವಾರ ಕರ್ನಾಟಕ ರಾಜ್ಯೋತ್ಸವಕ್ಕೆ ‘ದೀಪ’ ಬೆಳಗಲಿದ್ದಾರೆ. ಒಂದು ತಿಂಗಳು ಸತತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಬೆಂಗಳೂರಿನ ಉತ್ತರದಲ್ಲಿರುವ ಈ ಸಮುಚ್ಚಯದಲ್ಲಿ ಎರಡೂವರೆ ಸಾವಿರ ಮನೆಗಳಿವೆ. ಇಲ್ಲಿ ಐಟಿ, ಬಿಟಿ ಸೇರಿದಂತೆ ವಿವಿಧ ಕ್ಷೇತ್ರಗಳ ಉದ್ಯೋಗಿಗಳ ಕುಟುಂಬಗಳು ನೆಲೆಸಿವೆ. ದೂರದ ರಾಜ್ಯಗಳಿಂದ ಬಂದವರ ಸಂಖ್ಯೆಯೇ ಇಲ್ಲಿ ಹೆಚ್ಚಿದೆ.

‘ಉದ್ಯೋಗ, ಶಿಕ್ಷಣಕ್ಕಾಗಿ ಬಂದವರಿಗೆ ತಮ್ಮ ಬದುಕು ಕಟ್ಟಿಕೊಳ್ಳುವುದು ಮುಖ್ಯವಾಗಿರುತ್ತದೆ. ಬೆಂಗಳೂರಿನ ಜನರೂ ಬಂದವರ ಭಾಷೆಯಲ್ಲಿಯೇ ವ್ಯವಹರಿಸುವುದರಿಂದ ಇಲ್ಲಿ ಎಲ್ಲವೂ ಸುಲಭ. ಅದ್ದರಿಂದ ಅವರಿಗೆ ಕನ್ನಡ ಕಲಿಯುವ ಅನಿವಾರ್ಯ ಸೃಷ್ಟಿಯಾಗುವುದಿಲ್ಲ. ನಮ್ಮ ಸಮುಚ್ಚಯದಲ್ಲಿಯೂ ಇದೇ ವಾತಾವರಣ ಸಹಜವಾಗಿತ್ತು. ಆದರೆ ನಾನು ಮತ್ತು ಕೆಲವು ಸಮಾನಮನಸ್ಕರು ಒಂದುಗೂಡಿ ಪರರಾಜ್ಯದಿಂದ ಬಂದವರಿಗೆ ಕನ್ನಡ ಕಲಿಸುವ ಅಭಿಯಾನ ಆರಂಭಿಸಿದೆವು’ ಎಂದು ಇಲ್ಲಿಯ ನಿವಾಸಿ ವೆಂಕಟೇಶ್ ಮರಕಲ್ ವಿವರಿಸಿದರು.

‘ಒಂದು ನವರಾತ್ರಿ ಹಬ್ಬದ ದಿನ ನಮ್ಮ ಮನೆಯಲ್ಲಿ ಪೂಜೆಗೆ, ಸಮುಚ್ಚಯದಲ್ಲಿರುವ ಉತ್ತರ ಭಾರತೀಯ ಸ್ನೇಹಿತರನ್ನು ಆಹ್ವಾನಿಸಿದ್ದೆ. ಆ ಸಂದರ್ಭದಲ್ಲಿ ಅವರೊಂದಿಗೆ ಚರ್ಚಿಸಿ ಕನ್ನಡ ಕಲಿಯಲು ಮನವೊಲಿಸಿದ್ದು ಫಲ ನೀಡಿತು. ಅವರಲ್ಲಿಯೇ ಕನ್ನಡ ಕಲಿಕೆಯ ಅಸಕ್ತಿ ಇರುವವರ ಮೂಲಕ ಪ್ರಚಾರ ಆರಂಭಿಸಿದೆವು. ನಾನು ಸೇರಿದಂತೆ ಇನ್ನಷ್ಟು ಜನ ಕನ್ನಡಿಗರು ಶಿಕ್ಷಕರಾಗಿ ಸೇವೆ ಸಲ್ಲಿಸಲು ಸಿದ್ಧರಾದೆವು. ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ‘ಬಳಕೆ ಕನ್ನಡ’ ಮಾಹಿತಿಗಳನ್ನು ಸಂಗ್ರಹಿಸಿ, ‘ಮಾತನಾಡುವ ಕನ್ನಡ’ ಪುಸ್ತಕವನ್ನು ಮುದ್ರಿಸಲಾಯಿತು. ಹೋದ ವರ್ಷ ಕನ್ನಡ ರಾಜ್ಯೋತ್ಸವದ ದಿನ ಮನೆ ಮನಗಳಿಗೆ ಕನ್ನಡ ಅಭಿಯಾನ ಘೋಷಿಸಲಾಯಿತು. ಪ್ರಥಮ ಪ್ರಯತ್ನದಲ್ಲಿಯೇ 200 ಆಸಕ್ತರು ಕಲಿಕೆಗಾಗಿ ನೋಂದಣಿ ಮಾಡಿಕೊಂಡರು’ ಎಂದು ಸಾಫ್ಟವೇರ್‌ ಉದ್ಯೋಗಿಯೂ ಆಗಿರುವ ವೆಂಕಟೇಶ್
ಹೇಳುತ್ತಾರೆ.

ಕಲಿಯುವವರು ಮತ್ತು ಕಲಿಸುವವರ ಸಮಯ ಹೊಂದಾಣಿಕೆ, ಆನ್‌ಲೈನ್‌ ತರಗತಿಗಳ ನಿಯೋಜನೆ ಇತ್ಯಾದಿ ಸವಾಲುಗಳನ್ನು ಮೀರಿ ನಿಂತರು. ಉಚ್ಚಾರಣೆ, ಸಂಭಾಷಣೆ, ಪದ ಪರಿಚಯ, ಸರಳ ವ್ಯಾಕರಣ, ಸನ್ನಿವೇಶಗಳಾಧಾರಿತ ಪಾಠಗಳು ಇತ್ಯಾದಿ ಅಂಶಗಳನ್ನು ಸೇರಿಸಿ ಪಾಠ ಆರಂಭಿಸಲಾಯಿತು. ವಾರದ ಎಲ್ಲ ದಿನಗಳಲ್ಲಿಯೂ ಕನಿಷ್ಠ ಒಂದು ಗಂಟೆ ಮೀಸಲಿಡಲಾಯಿತು.

‘ಪರರಾಜ್ಯಗಳಿಂದ ಬಂದವರು ಮೂರು ಗುಂಪುಗಳಲ್ಲಿ ಕಲಿಯುತ್ತಿದ್ದಾರೆ. ಎರಡು ತಂಡಗಳಲ್ಲಿ 80 ಮತ್ತು ಮೂರನೇ ಗುಂಪಿನಲ್ಲಿ 30ಕ್ಕಿಂತ ಹೆಚ್ಚು ಜನ ಸಕ್ರಿಯವಾಗಿದ್ದಾರೆ. ಕನ್ನಡ ಕಲಿತಿದ್ದಾರೆ’ ಎಂದು ವೆಂಕಟೇಶ್ ಹೇಳುತ್ತಾರೆ.

ಕನ್ನಡ ಕಲಿತವರಿಗಾಗಿ ಪರೀಕ್ಷೆಗಳನ್ನೂ ಮಾಡಲಾಗಿದೆ. ಅದರಲ್ಲಿ ಉತ್ತೀರ್ಣರಾದವರಿಗೆ ಬುಧವಾರದ ಕಾರ್ಯಕ್ರಮದಲ್ಲಿ ‘ನನಗೆ ಕನ್ನಡ ಗೊತ್ತು’ ಎಂಬ ನುಡಿಯಿರುವ ಪ್ರಮಾಣ ಪತ್ರ ನೀಡಲಾಗುತ್ತಿದೆ.

‘ಕನ್ನಡ ಪ್ರಾಧಿಕಾರ ಮತ್ತಿತರ ಇಲಾಖೆಗಳು ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚು ಖರ್ಚು ಮಾಡಿ ಕಲಿಕಾ ಪಾಠ ತಯಾರಿಸುವ ಯೋಜನೆಗಳನ್ನು ಹಾಕಿಕೊಳ್ಳುತ್ತವೆ. ಆದರೆ ನಮ್ಮ ನಿವಾಸಿಗಳು ಈ ಕಾರ್ಯಗಳನ್ನು ಹೆಚ್ಚು ಖರ್ಚಿಲ್ಲದೇ, ಸದ್ದುಗದ್ದಲವಿಲ್ಲದೇ ಮಾಡಿದ್ದಾರೆ. ಈಗ ನಮ್ಮಲ್ಲಿ ಕನ್ನಡ ಕಲಿತಿರುವ ಉತ್ತರ ಭಾರತೀಯರು ತಮ್ಮ ಕಚೇರಿ, ಕುಟುಂಬ ಮತ್ತು ಸ್ನೇಹಿತರಿಗೂ ಪ್ರೇರಣೆಯಾಗುತ್ತಿದ್ದಾರೆ. ಕನ್ನಡ ಬೆಳೆಯುತ್ತಿದೆ’ ಎಂದು ವೆಂಕಟೇಶ್ ಸಂತಸ
ವ್ಯಕ್ತಪಡಿಸುತ್ತಾರೆ.

ಅನ್ಯ ಭಾಷಿಕರೊಂದಿಗೆ ಕೈಜೋಡಿಸಲು ಆಸಕ್ತಿ ಇರುವವರು ಸಂಪರ್ಕಿಸಿ, ಭಾರತೀಯ ಸಿಟಿ, ನಿಕೂ (1) ದೂರವಾಣಿ: 9845199940

ಬೆಂಗಳೂರಿನ ಭಾರತೀಯ ಸಿಟಿಯಲ್ಲಿ ಕನ್ನಡ ಕಲಿಕೆ ತರಗತಿ

ಬೆಂಗಳೂರಿನ ಭಾರತೀಯ ಸಿಟಿಯಲ್ಲಿ ಕನ್ನಡ ಕಲಿಕೆ ತರಗತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT