ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಮಹಲ್‌ ರಸ್ತೆ, ಬಳ್ಳಾರಿ ರಸ್ತೆ ವಿಸ್ತರಣೆ: ಅರಮನೆ ಮೈದಾನದ ಜಾಗ ಸ್ವಾಧೀನ

ಟಿಡಿಆರ್‌ ನೀಡುವ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ
Last Updated 2 ಮಾರ್ಚ್ 2021, 21:36 IST
ಅಕ್ಷರ ಗಾತ್ರ

ಬೆಂಗಳೂರು: ಜಯಮಹಲ್‌ ರಸ್ತೆ ಹಾಗೂ ಬಳ್ಳಾರಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅರಮನೆ ಮೈದಾನದ ಜಾಗವನ್ನು ಟಿಡಿಆರ್‌ ನೀಡುವುದರ ಮೂಲಕ ಸ್ವಾಧೀನ ಪಡಿಸಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯಲು ಸರ್ಕಾರ ಮುಂದಾಗಿದೆ. ಅರಮನೆ ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವುದರಿಂದ ಭೂಸ್ವಾಧೀನ ಕುರಿತು ಮಧ್ಯಂತರ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರ ಬಿಬಿಎಂಪಿಗೆ ಸೂಚಿಸಿದೆ.

ಜಯಮಹಲ್‌ ರಸ್ತೆಯನ್ನು ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್‌ ರೈಲು ನಿಲ್ದಾಣದವರೆಗೆ ಹಾಗೂ ಬಳ್ಳಾರಿ ರಸ್ತೆಯನ್ನು ಬಿಡಿಎ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ವಿಸ್ತರಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ. ಈ ಕಾಮಗಾರಿಗಳಿಗೆ ಅರಮನೆ ಮೈದಾನದ ಆಸ್ತಿಯಲ್ಲಿ 15 ಎಕರೆ 39 ಗುಂಟೆ ಜಾಗದ ಅವಶ್ಯಕತೆ ಇರುತ್ತದೆ.

ಈ ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಳ್ಳುವ ಜಾಗಕ್ಕೆ ಬದಲಿಯಾಗಿ ಟಿಡಿಆರ್‌ ನೀಡುವ ಪ್ರಸ್ತಾವವನ್ನು ಬಿಬಿಎಂಪಿಯ ಹಿಂದಿನ ಆಯುಕ್ತರೊಬ್ಬರು ಅರಮನೆಯ ಮಾಲೀಕತ್ವದ ಕುರಿತ ಹೈಕೋರ್ಟ್‌ ಆದೇಶದ ವಿರುದ್ಧ ಮೇಳ್ಮನವಿ ಸಲ್ಲಿಸಿದ್ದ ಮೈಸೂರು ರಾಜವಂಶಸ್ಥರ ಮುಂದಿಟ್ಟಿದ್ದರು. ಎರಡೂ ಕಡೆಯವರು ಒಪ್ಪಿದ್ದರಿಂದ ರಸ್ತೆ ವಿಸ್ತರಣೆಗೆ ಬೇಕಾದ ಜಾಗವನ್ನು ಟಿಡಿಆರ್‌ ನೀಡಿ ಸ್ವಾಧೀನ ಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ ಸಮ್ಮತಿ ನೀಡಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟಿಡಿಆರ್‌ ನೀಡಿ ರಸ್ತೆ ವಿಸ್ತರಣೆ ಕಾಮಗಾರಿಗೆ ಅಗತ್ಯವಿರುವ ಜಾಗ ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸಚಿವ ಸಂಪುಟವು 2019ರ ಜು11ರಂದು ಹಸಿರು ನಿಶಾನೆ ತೋರಿತ್ತು.

ಟಿಡಿಆರ್‌ ನೀಡಿ ಜಾಗ ಸ್ವಾಧೀನಪಡಿಸಿಕೊಳ್ಳುವುದು ಸರ್ಕಾರದ ಹಿತಾಸಕ್ತಿಯಿಂದ ಒಳ್ಳೆಯದಲ್ಲ. ಇದು ಅನೇಕ ತಾಂತ್ರಿಕ ಸಮಸ್ಯೆಗಳಳನ್ನು ತಂದೊಡ್ಡಲಿದೆ ಎಂದು ಬಿಬಿಎಂಪಿಯ ಈಗಿನ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ 2021ರ ಫೆ 15ರಂದು ವಿವರವಾದ ಪತ್ರ ಬರೆದಿದ್ದರು. ಫೆ. 18ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಯುಕ್ತರ ಪತ್ರದಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಚರ್ಚಿಸಲಾಗಿತ್ತು. ಟಿಡಿಆರ್‌ ನೀಡಿ ಭೂ ಸ್ವಾಧೀನಪಡಿಸಿಕೊಳ್ಳುವ ಹಿಂದಿನ ನಿರ್ಣಯ ಕೈಬಿಟ್ಟು, ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಮಧ್ಯಂತರ ಅರ್ಜಿ ಸಲ್ಲಿಸುವುದಕ್ಕೆ ಸಚಿವ ಸಂಪುಟವು ಒಪ್ಪಿಗೆ ನೀಡಿತ್ತು.

ಅರಮನೆ ಮೈದಾನ– ಏನಿದು ವ್ಯಾಜ್ಯ?

ರಾಜ್ಯ ಸರ್ಕಾರವು 1996ರಲ್ಲಿ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ಹಸ್ತಾಂತರ) ಕಾಯ್ದೆಯನ್ನು ಅಂಗೀಕರಿಸಿದೆ. ಇದಕ್ಕೆ 1996ರ ನ.15ರಂದು ರಾಷ್ಟ್ರಪತಿಯವರು ಅಂಕಿತವನ್ನೂ ಹಾಕಿದ್ದಾರೆ. ಅರಮನೆಯನ್ನು ಸ್ಮಾರಕವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಜಾರಿಗೆ ತಂದ ಈ ಕಾಯ್ದೆ ಪ್ರಕಾರ ಈ ಅರಮನೆ ಹಾಗೂ ಅದಕ್ಕೆ ಸಂಬಂಧಿಸಿದ ಜಾಗ ರಾಜ್ಯ ಸರ್ಕಾರದ ಸ್ವತ್ತು. ಅರಮನೆ ಸುತ್ತಮುತ್ತಲಿನ ಜಾಗದಲ್ಲಿ ಬೊಟಾನಿಕಲ್‌ ಮ್ಯೂಸಿಯಂ, ತೋಟಗಾರಿಕಾ ಉದ್ಯಾನ ಹಾಗೂ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲು ಸರ್ಕಾರ ಬಯಸಿತ್ತು. ಅರಮನೆಗೆ ಸಂಬಂಧಿಸಿದ 472.16 ಎಕರೆ ಜಾಗಕ್ಕೆ ಸರ್ಕಾರ ₹ 11 ಕೋಟಿ ಪರಿಹಾರ ನಿಗದಿಪಡಿಸಿತ್ತು.

ಈ ಕಾಯ್ದೆಯನ್ನು ಮೈಸೂರು ರಾಜ ವಂಶಸ್ಥ ದಿವಂಗತ ಶೀಕಂಠದತ್ತ ಒಡೆಯರ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ರಾಜ್ಯ ಸರ್ಕಾರ ರೂಪಿಸಿದ್ದ ಕಾಯ್ದೆಯನ್ನು ಹೈಕೋರ್ಟ್‌ ಎತ್ತಿಹಿಡಿದಿತ್ತು. ಈ ಆದೇಶದ ವಿರುದ್ಧ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಇನ್ನೂ ಇತ್ಯರ್ಥವಾಗಿಲ್ಲ.

ಟಿಡಿಆರ್‌ ನೀಡಲು ತಾಂತ್ರಿಕ ಅಡಚಣೆಗಳೇನು?

* ಈ ಹಿಂದೆ ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳನ್ನು ಇತ್ಯರ್ಥಪಡಿಸುವಾಗ ಸುಪ್ರೀಂ ಕೋರ್ಟ್‌ ಈ ಪರಿಸರದ ಯಾವುದೇ ಮರಗಳನ್ನು ಕಡಿಯಬಾರದು ಮತ್ತು ಇಲ್ಲಿನ ಪರಿಸರಕ್ಕೆ ಧಕ್ಕೆ ಉಂಟು ಮಾಡಬಾರದು ಎಂದು ಷರತ್ತು ಹಾಕಿದೆ. ಆದರೆ, ಜಯಮಹಲ್‌ ರಸ್ತೆ ವಿಸ್ತರಣೆಗೆ 192 ಮರಗಳನ್ನು ಸ್ಥಳಾಂತರಿಸಿ, 122 ಮರಗಳನ್ನು ಕಡಿಯಬೇಕಾಗುತ್ತದೆ. ಬಳ್ಳಾರಿ ರಸ್ತೆ ವಿಸ್ತರಣೆಗೆ 73 ಮರಗಳನ್ನು ಸ್ಥಳಾಂತರಿಸಿ, 126 ಮರಗಳನ್ನು ಕಡಿಯಬೇಕಾಗುತ್ತದೆ. ಈ ವಿಚಾರವನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತಾರದೆ ಮುಂದುವರಿಯಲು ಸಾಧ್ಯವಿಲ್ಲ.

* 1996ರ ಅರಮನೆ ಸ್ವಾಧೀನ ಮತ್ತು ಹಸ್ತಾಂತರ ಕಾಯ್ದೆಯನ್ನು ಹೈಕೋರ್ಟ್‌ ಎತ್ತಿಹಿಡಿದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಸದ್ಯಕ್ಕೆ ಇಲ್ಲಿನ 472.16 ಎಕರೆ ಜಾಗ ಸರ್ಕಾರದ ಸ್ವಾಧೀನದಲ್ಲಿದೆ ಎಂದೇ ಅರ್ಥ. ಈ ಕಾಯ್ದೆಯಡಿ ಈ ಜಾಗಕ್ಕೆ ₹ 11 ಕೋಟಿ ಪರಿಹಾರ ನಿಗದಿಪಡಿಸಲಾಗಿದೆ. ಹಾಗಾಗಿ ಭೂಮಿ ಬಳಸಿಕೊಳ್ಳಲು ರಾಜ ವಂಶಸ್ಥರಿಗೆ ಏನೇ ಪರಿಹಾರ ನೀಡುವುದಿದ್ದರೂ ಈ ಪರಿಹಾರದ ಚೌಕಟ್ಟಿನಲ್ಲೇ ಇರಬೇಕಾಗುತ್ತದೆ.

* ಈ ಹಿಂದೆ ವಸಂತ ನಗರದಲ್ಲಿ ರಸ್ತೆ ವಿಸ್ತರಣೆಗೆ ಹಾಗೂ ಮೇಖ್ರಿ ವೃತ್ತದ ಬಳಿ ಕೆಳಸೇತುವೆ ನಿರ್ಮಾಣಕ್ಕೆ ಅರಮನೆ ಮೈದಾನದ ಜಾಗ ಬಳಕೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಆಗಲೂ ಈ ಜಾಗಕ್ಕೆ ಪರಿಹಾರದ ನೀಡಿದರೂ ಅದು ಅಂತಿಮವಾಗಿ ಒಟ್ಟು 471.16 ಎಕರೆ ಜಾಗಕ್ಕೆ ನೀಡುವ ₹ 11 ಕೋಟಿ ಪರಿಹಾರದಲ್ಲಿ ಅಡಕವಾಗುತ್ತದೆ ಎಂದೇ ನಿರ್ಣಯಿಸಲಾಗಿತ್ತು. ಹಾಗಾಗಿ ಭೂಸ್ವಾಧೀನ ಕಾಯ್ದೆ ಪ್ರಕಾರವೇ ಪರಿಹಾರ ನೀಡಬೇಕಾಗುತ್ತದೆ.

* ನಗದು ರೂಪದ ಬದಲು ಟಿಡಿಆರ್‌ ರೂಪದಲ್ಲಿ ಪರಿಹಾರ ನೀಡಿದರೆ ಸರ್ಕಾರ ಚದರ ಮೀಟರ್‌ ಭೂಮಿಗೆ ನಿವೇಶದ ಮೌಲ್ಯದ 0.4 ಪಟ್ಟು ಸಗಟು ಮೌಲ್ಯ ನೀಡಬೇಕಾಗುತ್ತದೆ. ಇಲ್ಲಿನ ಭೂಮಿಗೆ ಪ್ರತಿ ಚದರ ಅಡಿಗೆ ₹ 2.70 ಲಕ್ಷ ಸಗಟು ಮೌಲ್ಯವಿದೆ. ಅದರ ಪ್ರಕಾರ ಲೆಕ್ಕಹಾಕಿದಾಗ ಚದರ ಮೀಟರ್‌ ಭೂಮಿಗೆ ₹ 1.08 ಲಕ್ಷ ನೀಡಬೇಕಾಗುತ್ತದೆ. ಅಂದರೆ, ಒಟ್ಟು 15 ಎಕರೆ 39 ಗುಂಟೆ ಜಾಗಕ್ಕೆ (13,91,742 ಚ.ಮೀ) ಪ್ರತಿಯಾಗಿ ನೀಡುವ ಟಿಡಿಆರ್‌ ಮೌಲ್ಯ ₹ 1,396 ಕೋಟಿ ಆಗಲಿದೆ.

1996ರ ಅರಮನೆ ಸ್ವಾಧೀನ ಕಾಯ್ದೆ ಪ್ರಕಾರ 472 ಎಕರೆ ಜಾಗಕ್ಕೆ ₹ 11 ಕೋಟಿ ಪರಿಹಾರದ ಪ್ರಕಾರ ಲೆಕ್ಕಹಾಕಿದರೆ 15 ಎಕರೆ 19 ಗುಂಟೆ ಜಾಗಕ್ಕೆ ಕೇವಲ ₹ 37.28 ಲಕ್ಷ ಪರಿಹಾರವನ್ನು ಮಾತ್ರ ನೀಡಬೇಕಾಗುತ್ತದೆ.

* ರಾಜವಂಶಸ್ಥರು ಟಿಡಿಆರ್‌ ಪಡೆದು ಅದನ್ನು ಬಿಲ್ಡರ್‌ಗಳಿಗೆ ಮಾರಾಟ ಮಾಡಬಹುದು. ಅವುಗಳನ್ನು ಬಿಲ್ಡರ್‌ಗಳು ತಕ್ಷಣದಿಂದಲೇ ಬಳಸಿಕೊಳ್ಳಬಹುದು. ಅರಮನೆಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ರಾಜ್ಯ ಸರ್ಕಾರದ ಪರವಾಗಿ ಬಂದರೆ, ಆಗ ಟಿಡಿಆರ್‌ಗಳನ್ನು ಮರಳಿ ಪಡೆಯುವುದಕ್ಕೆ ಸಾಧ್ಯವಿಲ್ಲ.

* ಇಷ್ಟೊಂದು ಪ್ರಮಾಣದ ಟಿಡಿಆರ್‌ ನಗರದಲ್ಲಿ ಭಾರಿ ಪ್ರಮಾಣದಲ್ಲಿ ಕಾಂಕ್ರೀಟ್‌ ಕಟ್ಟಡಗಳು ತಲೆಎತ್ತಲು ಕಾರಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT