ಶನಿವಾರ, ಏಪ್ರಿಲ್ 4, 2020
19 °C
ಅಧಿಕಾರಿಗಳ ಅಸಡ್ಡೆ: ಪ್ರವೀಣ್‌ ಸೂದ್‌ ಅಸಮಾಧಾನ

ಪಾಸ್‌ಪೋರ್ಟ್‌: ತ್ವರಿತ ಪರಿಶೀಲನೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸ್‌ ಠಾಣೆಗಳಿಗೆ ಬರುವ ಪಾಸ್‌ಪೋರ್ಟ್‌ ಅರ್ಜಿಗಳ ಪರಿಶೀಲನಾ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸೇವಾ ಕೇಂದ್ರಗಳಿಗೆ ಮರಳಿಸಲು ಪೊಲೀಸ್‌ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕ ಪ್ರವೀಣ್‌ ಸೂದ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪಾಸ್‌‍‍ಪೋರ್ಟ್‌ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವ ಪ್ರಕ್ರಿಯೆ ರಾಜ್ಯದಲ್ಲಿ ವಿಳಂಬವಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ರಾಜ್ಯ 37ನೇ ಸ್ಥಾನದಲ್ಲಿದೆ. ಚೆನ್ನೈ, ಹೈದರಾಬಾದ್‌ನಲ್ಲಿ ನಾಲ್ಕು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ. ಆಂಧ್ರ, ತೆಲಂಗಾಣ ಮತ್ತು ಗುಜರಾತ್‌ ಉಳಿದ ರಾಜ್ಯಗಳಿಗಿಂತಲೂ ಮುಂಚೂಣಿಯಲ್ಲಿವೆ. ನಾವು ಮಾತ್ರ ಏಕೋ ಏನೋ ಪಾಸ್‌ಪೋರ್ಟ್‌ ಅರ್ಜಿಗಳ ಪರಿಶೀಲನೆ ವಿಷಯದಲ್ಲಿ ಅಸಡ್ಡೆ ತೋರುತ್ತಿದ್ದೇವೆ ಎಂದು ಪ್ರವೀಣ್‌ ಸೂದ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಸ್‌ಪೋರ್ಟ್‌ ಅರ್ಜಿಗಳ ವಿಲೇವಾರಿಗಾಗಿ ‘ಸಕಾಲ’ ಯೋಜನೆ ಜಾರಿಗೆ ತಂದಿರುವ ಮೊದಲ ರಾಜ್ಯ ಕರ್ನಾಟಕ. ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಬೆಂಗಳೂರು ಗ್ರಾಮೀಣದಲ್ಲಿ ಶೇ 15, ಕಲಬುರ್ಗಿಯಲ್ಲಿ ಶೇ 19 ಹಾಗೂ ಕೋಲಾರದಲ್ಲಿ ಶೇ 37ರಷ್ಟು ಅರ್ಜಿಗಳು ನಿಗದಿತ ಅವಧಿಯೊಳಗೆ ವಿಲೇವಾರಿ ಆಗುತ್ತಿವೆ. ಈ 21 ದಿನವೂ ಸಾರ್ವಜನಿಕರ ದೃಷ್ಟಿಯಿಂದ ವಿಳಂಬವೇ ಆಗಿದೆ ಎಂದು ಅವರು ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಬೀದರ್‌, ಬೆಂಗಳೂರು ನಗರ, ಶಿವಮೊಗ್ಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮಾತ್ರ ಪಾಸ್‌ಪೋರ್ಟ್‌ ಅರ್ಜಿಗಳ ಪರಿಶೀಲನಾ ಪ್ರಕ್ರಿಯೆ ಕ್ರಮವಾಗಿ 5,10,11 ಹಾಗೂ 12 ದಿನಗಳಲ್ಲಿ ಮುಗಿಯುತ್ತಿದೆ. ಬೆಂಗಳೂರು ಗ್ರಾಮೀಣ, ಕಲಬುರ್ಗಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಕ್ರಮವಾಗಿ 38, 44 ಮತ್ತು 30 ದಿನ ಹಿಡಿಯುತ್ತಿದೆ. ಬೆಂಗಳೂರು ಮತ್ತು ಮಂಗಳೂರು ಹೊರತುಪಡಿಸಿದರೆ ಉಳಿದೆಡೆ ಅಷ್ಟೇನೂ ಹೊರೆ ಇರುವುದಿಲ್ಲ. ಆದಾಗ್ಯೂ ಪಾಸ್‌ಪೋರ್ಟ್‌ ಅರ್ಜಿಗಳ ಪರಿಶೀಲನೆಗೆ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಸೂದ್‌ ಎಚ್ಚರಿಸಿದ್ದಾರೆ.

ಪಾಸ್‌ಪೋರ್ಟ್‌ ಅರ್ಜಿಗಳ ಪರಿಶೀಲನೆ ಮೇಲೆ ಹಿರಿಯ ಅಧಿಕಾರಿಗಳು ನಿಗಾ ವಹಿಸಬೇಕು. ಕಾಲಕಾಲಕ್ಕೆ ಪ್ರಗತಿ ಪರಿಶೀಲಿಸಬೇಕು. ಈ ವಿಷಯದಲ್ಲಿ ಏನಾದರೂ ಅಡೆತಡೆಗಳಿದ್ದರೆ ತಮ್ಮ ಗಮನಕ್ಕೆ ತರಬೇಕು. ತಾವೂ ಮೇಲಿಂದ ಮೇಲೆ ಪ್ರಗತಿ ಪರಿಶೀಲಿಸುವುದಾಗಿ ಡಿಜಿ ಮತ್ತು ಐಜಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು