ಭಾನುವಾರ, ಸೆಪ್ಟೆಂಬರ್ 15, 2019
27 °C
ಬೀದಿಗೆ ಬೀಳುವ ಆತಂಕದಲ್ಲಿ 12 ಲಕ್ಷ ಕಾರ್ಮಿಕರು

ಐಸಿಯುನಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶ; ಶೇ 70ರಷ್ಟು ವಹಿವಾಟು ಕುಸಿತ

Published:
Updated:
Prajavani

ಬೆಂಗಳೂರು: ದೇಶದಲ್ಲಿ ಎದುರಾಗಿರುವ ‌ಆರ್ಥಿಕ ಹಿಂಜರಿತದ ಪರಿಣಾಮ ಕೈಗಾರಿಕೆಗಳ ಮೇಲೆ ಸುನಾಮಿಯಂತೆ ಅಪ್ಪಳಿಸಿದೆ. ದಕ್ಷಿಣ ಏಷ್ಯಾದಲ್ಲೇ ದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಬೆಂಗಳೂರಿನ ಪೀಣ್ಯದಲ್ಲಿರುವ 10 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಅಕ್ಷರಶಃ ಐಸಿಯು (ತೀವ್ರ ನಿಗಾ ಘಟಕ) ತಲುಪಿವೆ.

ಎರಡು ತಿಂಗಳಿಂದ ವಹಿವಾಟಿನಲ್ಲಿ ಭಾರೀ (ಸರಾಸರಿ ಶೇ 70ರಷ್ಟು) ಕುಸಿತವಾಗಿದ್ದು, ಕೈಗಾರಿಕೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದು ನಿಂತಿವೆ. ಸಾವು ಬದುಕಿನ ನಡುವೆ ಸೆಣಸುತ್ತಿದ್ದು, ಮುಂದೆ ಚೇತರಿಕೆ ಕಾಣುವ ನಿರೀಕ್ಷೆಯಲ್ಲಿ ಉಳಿದಿರುವ ಗುಟುಕು ಜೀವವನ್ನೇ ಬಿಗಿ ಹಿಡಿದು ಕಾಯುತ್ತಿವೆ. ಈ ಹಿಂಜರಿತ ಸೆಪ್ಟೆಂಬರ್‌ನಲ್ಲೂ ಮುಂದುವರಿದರೆ ಉಸಿರು ನಿಲ್ಲುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ ಉದ್ಯಮಿಗಳು.

45 ಚದರ ಕಿಲೋ ಮೀಟರ್ ವಿಸ್ತೀರ್ಣದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಗಾರ್ಮೆಂಟ್ಸ್ ಹೊರತುಪಡಿಸಿ ಯಂತ್ರಗಳ ಬಿಡಿಭಾಗ ತಯಾರಿಕೆಯ ಸುಮಾರು 10 ಸಾವಿರ ಕಾರ್ಖಾನೆಗಳಿವೆ. ಆಟೊಮೊಬೈಲ್ ಬಿಡಿಭಾಗ, ಪೌಡರ್ ಕೋಟಿಂಗ್, ಫ್ಯಾಬ್ರಿಕೇಷನ್, ಪ್ಯಾಕೇಜಿಂಗ್ ಇಂಡಸ್ಟ್ರಿ, ಎಲೆಕ್ಟ್ರೊ ಪ್ಲೇಟಿಂಗ್, ಸಿಎನ್‌ಸಿ ಮಷಿನ್ ಜಾಬ್‌ ವರ್ಕ್, ಮಷಿನ್ ಟೂಲ್ ಕಾಂಪೊನೆಂಟ್ ಸಪ್ಲೆಯರ್ಸ್‌, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಿಡಿ ಭಾಗಗಳನ್ನು ತಯಾರಿಸುವ ಕಾರ್ಖಾನೆಗಳು ಇಲ್ಲಿವೆ. ಸುಮಾರು 12 ಲಕ್ಷ ಕಾರ್ಮಿಕರು ಈ ಕೈಗಾರಿಕೆಗಳನ್ನು ನಂಬಿಕೊಂಡಿದ್ದಾರೆ. ಇದರಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ ಮಹಿಳೆಯರಿದ್ದಾರೆ.

ಸದಾ ಚಟುವಟಿಕೆಯಿಂದ ಕೂಡಿರುವ ಕೈಗಾರಿಕಾ ಪ್ರದೇಶದಲ್ಲಿ ಈಗ ನೀರವ ಮೌನ ಆವರಿಸಿದೆ. ಕಾರ್ಖಾನೆಗಳನ್ನು ಹೊಕ್ಕರೆ ಸಾವಿನ ಮನೆಗೆ ಹೋದ ಅನುಭವವಾಗುತ್ತದೆ. ಕಾರ್ಖಾನೆಯ ಗೇಟ್‌ನಲ್ಲಿ ಎದುರಾಗುವ ಭದ್ರತಾ ಸಿಬ್ಬಂದಿಯಿಂದ ಹಿಡಿದು ಮಾಲೀಕರ ತನಕ ಎಲ್ಲರ ಮುಖದಲ್ಲೂ ಸಂಕಟದ ಛಾಯೆ ಎದ್ದು ಕಾಣುತ್ತದೆ.

‘ನಾಲ್ಕು ತಿಂಗಳ ಹಿಂದೆ ದಿನಕ್ಕೆ ₹15 ಲಕ್ಷ ವಹಿವಾಟು ನಡೆಯುತ್ತಿತ್ತು. ಈಗ 3 ಲಕ್ಷಕ್ಕೆ ಇಳಿದಿದೆ. ಎಲ್ಲವೂ ಮುಗಿದಿದ್ದು, ವೆಂಟಿಲೇಟರ್‌ನಲ್ಲಿ ಉಸಿರಾಡುತ್ತಿದ್ದೇವೆ. ಅದು ಇನ್ನೆಷ್ಟು ದಿನ ನಮ್ಮ ಜೀವ ಉಳಿಸಬಲ್ಲದು’ ಎಂದು ಬಿಡಿಭಾಗಗಳ ಮಾರಾಟ
ಗಾರ ಸಂತೋಷ್ ಅವರು ಕಣ್ಣಾಲಿಗಳನ್ನು ತುಂಬಿಕೊಂಡು ಹೇಳಿದರು.

‘ಉತ್ಪಾದನೆ ಜಾಸ್ತಿಯಾಗಿದ್ದು, ಅವುಗಳನ್ನು ಕೇಳುವವರೇ ಇಲ್ಲ. ತಿಂಗಳಿಗೆ ₹2,500 ಕೋಟಿ ವಹಿವಾಟು ನಡೆಯುತ್ತಿತ್ತು. ಈಗ ಅರ್ಧವೂ ಇಲ್ಲ’ ಎನ್ನುತ್ತಾರೆ ಉದ್ಯಮಿ ಜಗದೀಶ್ ಅಳಿಸಂದ್ರ.

‘ಬಿಡಿಭಾಗಗಳ ಮಾರಾಟ ಮಾರ್ಚ್‌ನಿಂದ ಕುಸಿತ ಕಂಡಿತು. ಏಪ್ರಿಲ್‌ನಲ್ಲಿ ಸಾಮಾನ್ಯವಾಗಿ ಬೇಡಿಕೆ ಕಡಿಮೆ ಇರುತ್ತದೆ. ಮೇ ತಿಂಗಳಲ್ಲಿ ಚೇತರಿಸಿಕೊಳ್ಳಬಹುದು ಎಂದುಕೊಂಡಿದ್ದೆವು. ಜೂನ್ ಮತ್ತು ಜುಲೈ ತಿಂಗಳಲ್ಲಿ ಮಾರಾಟ ಪ್ರಮಾಣ ಪಾತಾಳ ಸೇರಿತು. ಆಗಸ್ಟ್‌ನಲ್ಲೂ ಅದೇ ಸ್ಥಿತಿ ಇದೆ’ ಎಂದು ಪೀಣ್ಯ ಕೈಗಾರಿಕಾ ಸಂಘದ ನಿಕಟಪೂರ್ವ ಅಧ್ಯಕ್ಷ ಮಲ್ಯಾದ್ರಿ ರೆಡ್ಡಿ ಹೇಳಿದರು.

‘ಬಿಎಫ್‌ಡಬ್ಲ್ಯೂ, ಎಎಂಎಸ್, ಎಸಿಇ ಡಿಸೈನರ್ಸ್‌ನಂತಹ ದೊಡ್ಡ ಕಂಪನಿಗಳು ತಿಂಗಳಿಗೆ 250 ಯಂತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದವು. ಈಗ ಈ ಕಂಪನಿಗಳ ಗೋದಾಮಿನಲ್ಲಿ ತಲಾ ಒಂದು ಸಾವಿರಕ್ಕೂ ಅಧಿಕ ಯಂತ್ರಗಳು ದೂಳು ಹಿಡಿಯುತ್ತಿವೆ. ತಯಾರಿಕೆ ಮುಂದುವರಿಸಿ ಏನು ಮಾಡುತ್ತಾರೆ’ ಎಂದು ಅವರು ಪ್ರಶ್ನಿಸಿದರು.

‘ಕೆಲ ಕಾರ್ಖಾನೆಗಳಲ್ಲಿ ಶೇ 60ರಷ್ಟು ಮಾರಾಟ ಕುಸಿದಿದ್ದರೆ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ಶೇ 90ರಷ್ಟು ಮಾರಾಟ ತಗ್ಗಿದೆ. ಈ ತಿಂಗಳ ಕೊನೆಗೆ ಚೇತರಿಕೆ ಕಾಣದಿದ್ದರೆ ಬೀಗ ಹಾಕದೆ ಬೇರೆ ದಾರಿಯೇ ಇಲ್ಲ’ ಎಂದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಿಂದ ಪ್ರವಾಹವಾದರೆ, ‌ಆರ್ಥಿಕ ಹಿಂಜರಿತ ನಮಗೆ ಸುನಾಮಿಯಂತೆ ಎರಗಿದೆ. ಕೇಂದ್ರ ಸರ್ಕಾರ ಪ್ರವಾಹ ಪರಿಹಾರ ಮಾದರಿಯಲ್ಲೇ ಕೈಗಾರಿಕೆಗಳನ್ನು ಮೇಲೆತ್ತಲು ಮುಂದಾಗಬೇಕು. ಇಲ್ಲದಿದ್ದರೆ ಇನ್ನಷ್ಟು ದುರಂತದ ದಿನಗಳು ಎದುರಾಗಲಿವೆ’ ಎಂದರು.‌

ವಾರಾಂತ್ಯ ರಜೆ; ಹೆಚ್ಚುವರಿ ಕೆಲಸವಿಲ್ಲ

ದಿನದ 24 ಗಂಟೆ ಮೂರು ಪಾಳಿಗಳಲ್ಲಿ ಕೆಲಸ ನೀಡುತ್ತಿದ್ದ ಕಾರ್ಖಾನೆಗಳು ಈಗ ದಿನಕ್ಕೆ 5ರಿಂದ 6 ಗಂಟೆ ಕೆಲಸ ಮಾಡಿಸುತ್ತಿವೆ.

‘ಒ.ಟಿ ಮಾಡಿದರೆ ಹೆಚ್ಚುವರಿಯಾಗಿ ಹಣ ಸಿಗುತ್ತಿತ್ತು. ಒ.ಟಿ ಎಂದರೇನು ಎಂಬುದೇ ಮರೆತು ಹೋಗಿದೆ. ಶನಿವಾರ ಮತ್ತು ಭಾನುವಾರ ಕಡ್ಡಾಯವಾಗಿ ರಜೆ ಕೊಟ್ಟು ಕಳುಹಿಸುತ್ತಿದ್ದಾರೆ’ ಎಂದು ಕಾರ್ಮಿಕ ರಮೇಶ್ ಅಳಲು ತೋಡಿಕೊಂಡರು.

‘ತಯಾರಿಕೆ ನಿಂತು ಹೋಗಿದೆ. ಸದ್ಯಕ್ಕೆ ಕೆಲಸಗಾರರನ್ನು ಕಳಿಸುವುದು ಬೇಡ ಎಂದು ಕಾರ್ಖಾನೆಗಳ ವ್ಯವಸ್ಥಾಪಕರು ಕರೆ ಮಾಡಿ ಹೇಳುತ್ತಿದ್ದಾರೆ’ ಎಂದು ಭದ್ರತಾ ಸಂಸ್ಥೆಯ ವ್ಯವಸ್ಥಾಪಕ ಜಿ.ಟಿ. ಸೋಮಶೇಖರ ಹೇಳಿದರು.

‘ಭದ್ರತಾ ಕೆಲಸ ನಂಬಿಕೊಂಡು ಕುಟುಂಬ ನಡೆಸುತ್ತಿದ್ದೇನೆ. ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿ ಬಾಗಿಲು ಮುಚ್ಚಿತು. ವಾರದ ಹಿಂದೆ ಸಿದ್ಧ ಉಡು‍ಪು ಕಾರ್ಖಾನೆ ಸೇರಿಕೊಂಡೆ. ಇದು ಎಷ್ಟು ದಿನ ಉಳಿಯುತ್ತದೋ ಗೊತ್ತಿಲ್ಲ. ಕೇಂದ್ರ ಸರ್ಕಾರ ನಮ್ಮ ಜೀವನದ ಮೇಲೆ ದೊಡ್ಡ ಬರೆ ಎಳೆಯಿತು’ ಎಂದು ಮುನಿಸ್ವಾಮಿ ಅಸಹಾಯಕರಾಗಿ ಹೇಳಿದರು.

ಎಲ್ಲರ ಮುಖದಲ್ಲೂ ಭೀತಿ

ಪೀಣ್ಯ ಕೈಗಾರಿಕಾ ಪ್ರದೇಶದ ವಹಿವಾಟು ಸುತ್ತಮುತ್ತಲ ಲಕ್ಷಾಂತರ ಜನರಿಗೆ ಪರೋಕ್ಷವಾಗಿ ಉದ್ಯೋಗ ಕಲ್ಪಿಸಿಕೊಟ್ಟಿದೆ. ರಸ್ತೆ ಬದಿಯಲ್ಲಿ ಗೂಡಂಗಡಿ, ಕ್ಯಾಂಟೀನ್ ನಡೆಸುವವರ ಮುಖದಲ್ಲೂ ಭೀತಿ ಆವರಿಸಿದೆ. ‘ಕ್ಯಾಂಟೀನ್‌ಗೆ ಬರುವ ಎಲ್ಲರೂ ಇದೇ ವಿಷಯ ಮಾತನಾಡುತ್ತಾರೆ. ಮುಂದಿನ ದಿನಗಳು ಅತ್ಯಂತ ಘೋರವಾಗಲಿವೆ ಎಂಬ ಭಯ ಕಾಡುತ್ತಿದೆ’ ಎಂದು ಪೆಟ್ಟಿಗೆ ಅಂಗಡಿಯ ನಾರಾಯಣಸ್ವಾಮಿ ಬೇಸರದಿಂದ ಹೇಳಿದರು.

 

Post Comments (+)