ಮಂಗಳವಾರ, ಜೂನ್ 28, 2022
24 °C

ಪೀಣ್ಯ ಕೈಗಾರಿಕೆಗಳಿಗೆ ಬೇಕಿದೆ 'ಆಮ್ಲಜನಕ'

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್ ವೇಳೆ ಕೋವಿಡ್ ಸೋಂಕಿತರ ಚಿಕಿತ್ಸೆಗೆಂದು ಆಮ್ಲಜನಕ ಒದಗಿಸಿದ್ದ ಕೈಗಾರಿಕೆಗಳಿಗೇ ಈಗ ಆಮ್ಲಜನಕ ನೀಡಿ ಜೀವಕಳೆ ತುಂಬುವ ಅಗತ್ಯವಿದೆ. ಸರ್ಕಾರ ಲಾಕ್‌ಡೌನ್ ಸಡಿಲಗೊಳಿಸಿದರೂ ಆಮ್ಲಜನಕ ದೊರಕದಿದ್ದರೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಸಾವಿರಾರು ಕೈಗಾರಿಕೆಗಳು ತೆರೆಯಲಾಗದ ಸ್ಥಿತಿಯಲ್ಲಿವೆ.‌

ಲಾಕ್‌ಡೌನ್‌ಗೂ ಮುನ್ನ ಕೋವಿಡ್ ರೋಗಿಗಳಿಗೆ ಆಮ್ಲಜನಕ ಕೊರತೆಯಾದಾಗ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದ್ದ ಆಮ್ಲಜನಕವನ್ನೇ ಆಸ್ಪತ್ರೆಗಳಿಗೆ ಪೂರೈಸಲಾಯಿತು. ಪರಿಸ್ಥಿತಿ ಸುಧಾರಿಸುವ ತನಕ ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಕೆ ಮಾಡದಂತೆಯೂ ಆಮ್ಲಜನಕ ತಯಾರಿಕಾ ಕಂಪನಿಗಳಿಗೆ ಸರ್ಕಾರ ಸೂಚಿಸಿತು. ಪೊಲೀಸ್ ಭದ್ರತೆ ನೀಡಿ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ಪೂರೈಸಲಾಯಿತು.

‘ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿದ್ದರೆ, ಅವುಗಳಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಆಮ್ಲಜನಕ ಆಧಾರಿತ ಚಾಲನೆಯನ್ನು ಹೊಂದಿವೆ. ಆಮ್ಲಜನಕ ಇಲ್ಲದೆ ಈ ಕೈಗಾರಿಕೆಗಳ ಕಾರ್ಯನಿರ್ವಹಣೆ ಸಾಧ್ಯವೇ ಇಲ್ಲ’ ಎನ್ನುತ್ತಾರೆ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಸಿ. ಪ್ರಕಾಶ್.

‘ಜೀವ ಮೊದಲು, ಜೀವನ ಆ ನಂತರ ಎಂಬ ಕಾರಣಕ್ಕೆ ಆಮ್ಲಜನಕದ ವೈದ್ಯಕೀಯ ಬಳಕೆಗೆ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ನಾವೂ ಸಮ್ಮತಿಸಿದೆವು. ಈಗ ವೈದ್ಯಕೀಯ ಬಳಕೆಗೆ ಪೂರೈಕೆಯಾಗಿ ಮಿಗುವಷ್ಟು ಆಮ್ಲಜನಕ ತಯಾರಾಗುತ್ತಿದೆ. ಈ ಹೆಚ್ಚುವರಿ ಆಮ್ಲಜನಕವನ್ನು ಈಗಲಾದರೂ ಕೈಗಾರಿಕೆಗಳಿಗೆ ಪೂರೈಲು ತಯಾರಿಕಾ ಕಂಪನಿಗಳಿಗೆ ಸರ್ಕಾರ ಅನುಮತಿ ನೀಡಬೇಕು’ ಎಂದು ಅವರು ಮನವಿ ಮಾಡಿದರು.

‘ಈ ಅನುಮತಿ ನೀಡದೆ ಲಾಕ್‌ಡೌನ್ ತೆರವುಗೊಳಿಸಿದರೆ ಕೈಗಾರಿಕೆಗಳನ್ನು ಪುನರ್ ಆರಂಭಿಸಲು ಸಾಧ್ಯವಾಗುವುದಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

‘ಕೋವಿಡ್‌ ನಿಯಂತ್ರಣ ಆಗಬೇಕು ಎಂಬ ಕಾರಣಕ್ಕೆ ಒಂದೂವರೆ ತಿಂಗಳಿಂದ ಸರ್ಕಾರದ ನಿರ್ಧಾರಕ್ಕೆ ತಲೆಬಾಗಿ ಬೆಂಬಲಿಸಿದ್ದೇವೆ. ಈಗ ನಮ್ಮ ಮನವಿಗೂ ಸರ್ಕಾರ ಸ್ಪಂದಿಸಬೇಕು. ಕೈಗಾರಿಕೆಗಳಲ್ಲಿ ಶೇ 50ರಷ್ಟು ಕಾರ್ಮಿಕರನ್ನು ನಿಯೋಜಿಸಿಕೊಂಡು ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.

ವಿದ್ಯುತ್ ಶುಲ್ಕ ಮನ್ನಾಕ್ಕೆ ಒತ್ತಾಯ

‘ಲಾಕ್‌ಡೌನ್ ಕಾರಣಕ್ಕೆ ಕೈಗಾರಿಕೆಗಳನ್ನು ತೆರೆಯದೇ ಇದ್ದರೂ, ಬೆಸ್ಕಾಂ ನಿಗದಿತ ಶುಲ್ಕ ವಿಧಿಸುತ್ತದೆ. ಸಂಕಷ್ಟದ ಸಂದರ್ಭದಲ್ಲಿ ಇದನ್ನು ಪಾವತಿಸುವುದು ಕಷ್ಟವಾಗಿರುವ ಕಾರಣ ಶುಲ್ಕ ಮನ್ನಾ ಮಾಡಬೇಕು’ ಎಂದು ಸಿ. ಪ್ರಕಾಶ್ ಒತ್ತಾಯಿಸಿದರು.

ಶೇ 9ರಷ್ಟು ರಾಜ್ಯ ತೆರಿಗೆಯೂ ವಿದ್ಯುತ್ ಶುಲ್ಕದ ಜತೆಗೆ ಸೇರಿಕೊಳ್ಳುತ್ತಿದ್ದು, ಅದನ್ನೂ ಮನ್ನಾ ಮಾಡಬೇಕು. ಸಾಲದ ಕಂತು ಪಾವತಿ (ಇಎಂಐ) ಅವಧಿಯನ್ನು ಮುಂದೂಡಲು ಕೆಎಸ್‌ಎಫ್‌ಸಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

‘ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಈ ಉದ್ಯಮಕ್ಕೆ ಯೋಧರಿದ್ದಂತೆ. ತಯಾರಿಕಾ ಕ್ಷೇತ್ರ ಆಗಿರುವ ಕಾರಣ ಅವರನ್ನು ಮುಂಚೂಣಿ ಕೆಲಸಗಾರರು ಎಂದು ಪರಿಗಣಿಸಿ 18ರಿಂದ 44 ವರ್ಷದವರಿಗೂ ಕೋವಿಡ್ ಲಸಿಕೆ ನೀಡಲು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು