ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತಾಗಾರ ಸಮಯ ಕಾಯ್ದಿರಿಸಲು ಆನ್‌ಲೈನ್ ವ್ಯವಸ್ಥೆ

ಮೃತದೇಹ ಸಾಗಿಸುವ ವಾಹನಕ್ಕೆ, ಅಂತ್ಯ ಸಂಸ್ಕಾರಕ್ಕೆ ಶುಲ್ಕ ವಸೂಲಿ ಮಾಡುವಂತಿಲ್ಲ
Last Updated 13 ಮೇ 2021, 14:14 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಹಾಗೂ ಇತರೆ ಕಾರಣಗಳಿಂದ ಕೊನೆಯುಸಿರೆಳೆದವರ ಅಂತ್ಯಕ್ರಿಯೆಗೆ ಪ್ರಸ್ತುತ ಅನುಸರಿಸುತ್ತಿರುವ ಪದ್ಧತಿ ಕೈಬಿಡಬೇಕು. ಅಂತ್ಯಕ್ರಿಯೆ ಸಮಯ ಕಾಯ್ದಿರಿಸಲು ಆನ್‌ಲೈನ್‌ ಹಂಚಿಕೆ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸರ್ಕಾರ ಆದೇಶ ಮಾಡಿದೆ.

ಕೋವಿಡ್‌ನಿಂದ ಸತ್ತವರ ದೇಹಗಳನ್ನು ಸ್ಮಶಾನಗಳಿಗೆ ಸಾಗಿಸುವ ವಾಹನಗಳಿಗಾಗಲಿ, ಅಂತಹವರ ಅಂತ್ಯಕ್ರಿಯೆಗಾಗಲೀ ಯಾವುದೇ ಶುಲ್ಕವನ್ನು ಪಡೆಯುವಂತಿಲ್ಲ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಬಿಬಿಎಂ‍ಪಿ ವ್ಯಾಪ್ತಿಯಲ್ಲಿ ಸಂಭವಿಸುವ ಸಾವುಗಳನ್ನು ದಾಖಲಿಸಲು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಸಹಾಯವಾಣಿಯನ್ನು (8495998495) ಆರಂಭಿಸಲಾಗಿದೆ. ಅಂತ್ಯಕ್ರಿಯೆಗಾಗಿ ದಿನ ಮತ್ತು ಸಮಯವನ್ನು ಗೊತ್ತುಪಡಿಸಲು ಸಾರ್ವಜನಿಕರು ಈ ಸಹಾಯವಾಣಿಗೆ ಕರೆ ಮಾಡಬಹುದು. ಸಹಾಯವಾಣಿ ಸಿಬ್ಬಂದಿಗೆ ನೀಡಿದ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಿ ಅದಕ್ಕೆ ಅನುಗುಣವಾಗಿ ಕೋರಿಕೆದಾರರಿಗೆ ಟೋಕನ್‌ ಸಂಖ್ಯೆ ಮತ್ತು ಯವ ಸ್ಮಶಾನ/ ಚಿತಾಗಾರದಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಕುರಿತ ಮಾಹಿತಿಯನ್ನು ಕರೆ ಮಾಡಿದ ವ್ಯಕ್ತಿಯ ಮೊಬೈಲ್‌ಗೆ ರವಾನಿಸಲಾಗುತ್ತದೆ.

ಈ ವ್ಯವಸ್ಥೆಯನ್ನು ಅತ್ಯಂತ ವೈಜ್ಞಾನಿಕ ಹಾಗೂ ಪಾರದರ್ಶಕವಾಗಿ ರೂಪಿಸಬೇಕು. ಶವಸಂಸ್ಕಾರದ ಕುರಿತ ಗೊಂದಲ ಹಾಗೂ ವಿಳಂಬಗಳಿಗೆ ಆಸ್ಪದ ಇರಬಾರದು. ಶವ ಸಾಗಿಸುವ ವಾಹನಗಳು ಚಿತಾಗಾರದ ಬಳಿ ಸಾಲುಗಟ್ಟಿ ದೀರ್ಘಕಾಲ ಕಾಯುವುದನ್ನು ತಪ್ಪಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ನಿಗದಿಪಡಿಸಿದ ಸಮಯಕ್ಕಿಂತ 30 ನಿಮಿಷ ಮುನ್ನವೇ ಮೃತವ್ಯಕ್ತಿಯ ಬಂಧುಗಳು ಮೃತದೇಹದೊಂದಿಗೆ ಗೊತ್ತುಪಡಿಸಿದ ಚಿತಾಗಾರವನ್ನು ತಲುಪಬೇಕು ಎಂದು ಸೂಚಿಸಲಾಗಿದೆ.

ಕಂದಾಯ ಸಚಿವ ಅರ್‌.ಅಶೋಕ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್‌ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರ ಜೊತೆ ಬುಧವಾರ ನಡೆಸಿದ ಈ ಸಭೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗಾಗಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಬಿಬಿಎಂಪಿ ವ್ಯಾಪ್ತಿಯಲ್ಲಿ 16 ಚಿತಾಗಾರಗಳು ಕಾರ್ಯನಿರ್ವಹಿಸುತ್ತಿವೆ. ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಈ ಚಿತಾಗಾರಗಳ ಮೇಲೆ ಹೆಚ್ಚಿನ ಒತ್ತಡ ನಿರ್ಮಾಣವಾಗುತ್ತಿದೆ. ಈ ಒತ್ತಡ ಕಡಿಮೆ ಮಾಡಲು ಗಿಡ್ಡೇನಹಳ್ಳಿ, ತಾವರೆಕೆರೆ, ಮಾವಳ್ಳಿಪುರ ಮತ್ತು ಟಿ.ಆರ್‌.ಮಿಲ್‌ಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ನಾಲ್ಕು ಹೊಸ ಚಿತಾಗಾರಗಳನ್ನು ಸ್ಥಾಪಿಸಲಾಗಿದೆ. ಈ ನಾಲ್ಕು ಚಿತಾಗಾರಗಳಲ್ಲಿ ನಿತ್ಯ ಸರಾಸರಿ 150 ಮೃತದೇಹಗಳ ಅಂತ್ಯಕ್ರಿಯೆ ನಡೆಯುತ್ತಿದೆ. ಇಲ್ಲಿ ಕಬ್ಬಿಣದ ಕ್ರೇಟ್‌ಗಳನ್ನು ಬಳಸುವುದರಿಂದಅಂತ್ಯಕ್ರಿಯೆಗೆ ಕಡಿಮೆ ಅವಧಿ ಸಾಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT