ಬೆಂಗಳೂರು: ಬಿಸಿಲು ಏರಿದಂತೆ, ಬಿಎಂಟಿಸಿಯ ಹವಾನಿಯಂತ್ರಿತ (ಎಸಿ) ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ ಮೂರು ತಿಂಗಳಲ್ಲಿ ಎಸಿ ಬಸ್‌ಗಳಲ್ಲಿ ಸಂಚರಿಸುತ್ತಿರುವವರ ಪ್ರಯಾಣಿಕರ ಸಂಖ್ಯೆ ಶೇ 10ರಷ್ಟು ಹೆಚ್ಚಳವಾಗಿದೆ.
ಈ ವರ್ಷ ಫೆಬ್ರುವರಿ ತಿಂಗಳಿಂದಲೇ ಬಿಸಿಲಿನ ಪ್ರಮಾಣ ಹೆಚ್ಚಾಗಿತ್ತು. ಹೀಗಾಗಿ ಜನರು ಆಗಿನಿಂದಲೇ ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರಯಾಣಿಸಲು ಆರಂಭಿಸಿದ್ದರು.
‘ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಮೂರು ತಿಂಗಳ ಹಿಂದೆಯೇ ಹೆಚ್ಚಾಗತೊಡಗಿತ್ತು. ಮಾರ್ಚ್‌ನಲ್ಲಿ ದಿನಕ್ಕೆ 10 ಸಾವಿರದಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರೆ, ಏಪ್ರಿಲ್‌ನಲ್ಲಿ 30 ಸಾವಿರದಷ್ಟು ಅಧಿಕವಾಗಿದೆ’ ಎಂದು ಬಿಎಂಟಿಸಿ ಅಧಿಕಾರಿಗಳು ಅಂಕಿ ಅಂಶ ನೀಡಿದರು.
‘ನಾನು ಸಿಕ್ಕಿದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಸಾಮಾನ್ಯ ಬಸ್‌ಗಳಲ್ಲಿ ಜನಸಂದಣಿ ಹೆಚ್ಚು. ಬೇರೆ ಸಮಯದಲ್ಲಿ ಇದೇನು ಸಮಸ್ಯೆ ಎಂದನ್ನಿಸಿರಲಿಲ್ಲ. ಬಿಸಿಲು ಹೆಚ್ಚಾದ ಬಳಿಕ ಜನಸಂದಣಿಯೂ ಹೆಚ್ಚಿರುವ ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣಿಸುವುದೇ ಕಷ್ಟವಾಗಿತ್ತು. ಬೆವತು ಹೋಗುತ್ತಿದ್ದೆ. ಅದಕ್ಕಾಗಿ ಎಸಿ ಇರುವ ಓಲ್ವೊ ಬಸ್‌ಗಳನ್ನೇ ಆಯ್ಕೆ ಮಾಡಿಕೊಂಡು ಹೋಗುತ್ತಿದ್ದೇನೆ. ಈ ಬಸ್‌ಗಳಲ್ಲಿ ನೂಕುನುಗ್ಗಲು ಇರುವುದಿಲ್ಲ. ಕೆಲವು ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಎಸಿ ಇರುವುದರಿಂದ ಪ್ರಯಾಣಿಸುವುದೇ ಗೊತ್ತಾಗುವುದಿಲ್ಲ’ ಎಂದು ಖಾಸಗಿ ಕಂಪನಿ ಉದ್ಯೋಗಿ ಮಾರತ್‌ಹಳ್ಳಿಯ ಸೃಜನ್ ಅನುಭವ ಹಂಚಿಕೊಂಡರು.
‘ನಾನು ಸಿಟಿಯಲ್ಲಿ, ಹೊರಜಿಲ್ಲೆ, ಹೊರರಾಜ್ಯಗಳಿಗೆ ಹೋಗುವಾಗಲೂ ಹವಾನಿಯಂತ್ರಿತ ಬಸ್‌ಗಳಲ್ಲಿಯೇ ಹೋಗುವುದು. ಹೊರಗೆ ಸಿಕ್ಕಾಪಟ್ಟೆ ಬಿಸಿಲಿದೆ. ಇಂಥ ಸಂದರ್ಭದಲ್ಲಿ ಎಸಿ ಇಲ್ಲದ ಬಸ್‌ಗಳಲ್ಲಿ ಹೋದರೆ ಮೈಯೆಲ್ಲ ಒದ್ದೆಯಾಗಿ ಬಿಡುತ್ತದೆ. ಎಸಿ ಬಸ್‌ಗಳಲ್ಲಿ ‘ಕಂಫರ್ಟೆಬಲ್’ ಅನಿಸುತ್ತದೆ’ ಎಂದು ಎಂಜಿನಿಯರ್ ವಿನಯ್ ಕುಮಾರ್ ಎಸ್. ತಿಳಿಸಿದರು.
ಎಸಿ ಬಸ್ ಪ್ರಯಾಣಿಕರು: ‘ಬಿಎಂಟಿಸಿ ಬಸ್‌ಗಳಲ್ಲಿ ದಿನಕ್ಕೆ ಸುಮಾರು 25 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಅದರಲ್ಲಿ ಜನವರಿವರೆಗೆ ದಿನಕ್ಕೆ ಸರಾಸರಿ 3 ಲಕ್ಷ ಪ್ರಯಾಣಿಕರು ಹವಾನಿಯಂತ್ರಿತ ಬಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಬಿಸಿಲು ಹೆಚ್ಚಾಗುತ್ತಿದ್ದಂತೆ ಹವಾನಿಯಂತ್ರಿತ ಬಸ್‌ಗಳಾದ ‘ವಾಯು’ ಮತ್ತು ‘ವಜ್ರ’ಗಳಲ್ಲಿ ಸಂಚರಿಸುವವರು ಹೆಚ್ಚಾಗಿದ್ದಾರೆ‘ ಎಂದು ಬಿಎಂಟಿಸಿ ಅಧಿಕಾರಿ ಮಾಹಿತಿ ನೀಡಿದರು.
ಬಿಎಂಟಿಸಿ ಕೇಂದ್ರ ವಲಯದಲ್ಲಿ ಕಳೆದ ವರ್ಷದ ನವೆಂಬರ್‌ನಿಂದ ಈ ವರ್ಷದ ಜನವರಿವರೆಗೆ ದಿನಕ್ಕೆ ಸರಾಸರಿ 1.15 ಲಕ್ಷ ಪ್ರಯಾಣಿಕರು ಹವಾನಿಯಂತ್ರಿತ ಬಸ್‌ಗಳಲ್ಲಿ ಸಂಚರಿಸಿದ್ದರೆ, ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ದಿನಕ್ಕೆ 1.27 ಲಕ್ಷ ಜನ ಸಂಚರಿಸಿದ್ದಾರೆ. ಇದೇ ಪ್ರಮಾಣದಲ್ಲಿ ಉಳಿದ ವಲಯಗಳಲ್ಲಿಯೂ ಹೆಚ್ಚಾಗಿದೆ ಎಂದು ಅವರು ವಿವರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.