ಲಾಕ್‍ಡೌನ್ ಸಡಿಲಿಕೆ | ವಾಯುವಿಹಾರಕ್ಕೆ ಸಾಲುಗಟ್ಟಿ ನಿಂತ ಜನ

ಬೆಂಗಳೂರು: ಲಾಕ್‍ಡೌನ್ ಸಡಿಲಿಸಿ, ಉದ್ಯಾನಗಳಲ್ಲಿ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆ ಲಾಲ್‍ಬಾಗ್ ಹಾಗೂ ಕಬ್ಬನ್ ಉದ್ಯಾನಗಳ ಮುಂದೆ ವಾಯುವಿಹಾರಿಗಳು ಮಂಗಳವಾರ ಮುಂಜಾನೆ ಸಾಲುಗಟ್ಟಿ ನಿಂತಿದ್ದರು.
ಕೊರೊನಾ ಹರಡುವಿಕೆ ತಡೆಯುವ ಉದ್ದೇಶದಿಂದ ಲಾಕ್‍ಡೌನ್‍ಗೂ ಮುನ್ನವೇ ಉದ್ಯಾನಗಳನ್ನು ಮುಚ್ಚಲಾಗಿತ್ತು. ಎರಡು ತಿಂಗಳ ಬಳಿಕ ವಾಯುವಿಹಾರಕ್ಕೆ ಅನುವು ಮಾಡಿಕೊಟ್ಟ ಕಾರಣ, ಲಾಲ್‍ಬಾಗ್ ಉದ್ಯಾನದ ಪಶ್ಚಿಮ ದ್ವಾರ ಹಾಗೂ ಡಬಲ್ ರೋಡ್ ಪ್ರವೇಶ ದ್ವಾರಗಳ ಮುಂದೆ 4 ಸಾವಿರಕ್ಕೂ ಹೆಚ್ಚು ವಾಯುವಿಹಾರಿಗಳು ಸಾಲುಗಟ್ಟಿ ನಿಂತಿದ್ದರು.
‘ಒಳ ಪ್ರವೇಶಕ್ಕೂ ಮುನ್ನ ವಾಯುವಿಹಾರಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ, ಕೈಗಳಿಗೆ ಸ್ಯಾನಿಟೈಸರ್ ಹಾಕಲಾಯಿತು. ವಾಯುವಿಹಾರಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಯಿತು. ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವಂತೆ ಅವರಿಗೆ ಮನವರಿಕೆ ಮಾಡಿದೆವು. ವಾಯುವಿಹಾರ ಮಾಡಲಾರದೆ ಮನೆಯಲ್ಲೇ ಇದ್ದವರು ಉದ್ಯಾನವೆಲ್ಲ ಸಂಚರಿಸಿ, ಪರಿಸರವನ್ನು ಆನಂದಿಸಿದರು’ ಎಂದು ಲಾಲ್‍ಬಾಗ್ ನಡಿಗೆದಾರರ ಸಂಘದ ಅಧ್ಯಕ್ಷ ರವಿಚಂದ್ರ ತಿಳಿಸಿದರು.
‘2 ಸಾವಿರಕ್ಕೂ ಹೆಚ್ಚು ಮಂದಿ ವಾಯುವಿಹಾರಿಗಳು ಕಬ್ಬನ್ ಉದ್ಯಾನ ಪ್ರವೇಶಿಸಿದರು. ತೋಟಗಾರಿಕೆ ಇಲಾಖೆ ವತಿಯಿಂದ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಇತ್ತು. ಆದರೆ, ಉದ್ಯಾನಕ್ಕೆ ಬರುವ ಬಹುತೇಕರು ಸ್ಥಳೀಯರೇ ಆಗಿರುವುದರಿಂದ ಕೊರೊನಾ ಸೋಂಕು ಹರಡುವಿಕೆ ಕುರಿತು ಇಲಾಖೆ ಜಾಗೃತಿ ಮೂಡಿಸಬೇಕು. ವಾಯುವಿಹಾರದ ವೇಳೆ ಸಿಬ್ಬಂದಿಯೇ ತಿಳುವಳಿಕೆ ನೀಡಬೇಕು’ ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.