ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರಿಫೆರಲ್‌: ಭೂಸ್ವಾಧೀನಕ್ಕೆ ₹ 4,500 ಕೋಟಿ

Last Updated 19 ನವೆಂಬರ್ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ನಿರ್ಮಿಸುವ ಮಹತ್ವಾಕಾಂಕ್ಷೆ ಯೋಜನೆಗೆ ವೇಗ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಯೋಜನೆಯ ಭೂಸ್ವಾಧೀನಕ್ಕೆ ₹4,500 ಕೋಟಿ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

100 ಮೀಟರ್‌ ಅಗಲದ ಪಿಆರ್‌ಆರ್‌ ನಿರ್ಮಾಣಕ್ಕೆ ಸಂಬಂಧಿಸಿ 2006ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. 65 ಕಿ.ಮೀ. ಉದ್ದದ ರಸ್ತೆಗೆ ಒಟ್ಟು 1,810 ಎಕರೆ 19 ಗುಂಟೆ ಭೂಸ್ವಾಧೀನ ಮಾಡಲು ಬಿಡಿಎ ಉದ್ದೇಶಿಸಿತ್ತು. ಯೋಜನೆಯ ಅಂದಾಜು ವೆಚ್ಚ ಆರಂಭದಲ್ಲಿ ₹ 5,00 ಕೋಟಿ ಇತ್ತು. 2012ರಲ್ಲಿ ಇದು ₹ 5,800 ಕೋಟಿಗೆ ಹೆಚ್ಚಿತ್ತು. ಭೂಮಿ ಬಿಟ್ಟುಕೊಡುವ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರವಾಗಿ ನೀಡಬೇಕಾಗಿ ಬಂದಿದ್ದರಿಂದ ಯೋಜನೆ ವೆಚ್ಚ ಮತ್ತಷ್ಟು ಹೆಚ್ಚಳವಾಯಿತು.

ಪರಿಷ್ಕೃತ ವಿನ್ಯಾಸದ ಪ್ರಕಾರ ಪಿಆರ್‌ಆರ್‌ 75 ಮೀ ಅಗಲ ಇರಲಿದೆ. ಇದರಲ್ಲಿ 8ಲೇನ್‌ ರಸ್ತೆ, ಹಾಗೂ ಅದರ ಎರಡೂ ಕಡೆ ತಲಾ 2 ಲೇನ್‌ ಸರ್ವಿಸ್‌ ರಸ್ತೆಗಳುನಿರ್ಮಾಣವಾಗಲಿವೆ. ಮಧ್ಯದಲ್ಲಿ ನಮ್ಮ ಮೆಟ್ರೊ ಮಾರ್ಗಕ್ಕೆ ಜಾಗ ಕಾಯ್ದಿರಿಸಲಾಗುತ್ತದೆ.

‘ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಯಿಂದ (ಜೈಕಾ) ಯೋಜನೆಗೆ ನೆರವು ಕೇಳಲಾಗಿತ್ತು. ಭೂಸ್ವಾಧೀನಕ್ಕೆ ಹಣ ನೀಡಲು ಸಾಧ್ಯವಿಲ್ಲ ಎಂದು ಜೈಕಾ ತಿಳಿಸಿತ್ತು. ಭಾರತ್‌ಮಾಲಾ ಯೋಜನೆಯಡಿ ಅನುದಾನ ನೀಡುವುದಾಗಿ ಕೇಂದ್ರ ಭೂಸಾರಿಗೆ ನಿತಿನ್‌ ಗಡ್ಕರಿ ಭರವಸೆ ನೀಡಿದ್ದರು. ಈ ಬಗ್ಗೆ ಭೂಸಾರಿಗೆ ಸಚಿವಾಲಯಕ್ಕೆ ಹಲವು ಸಲ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೆ ಉತ್ತರ ಬಂದಿರಲಿಲ್ಲ. ಹೀಗಾಗಿ, ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರವೇ ಅನುದಾನ ನೀಡಲಿದೆ. ರಸ್ತೆ ನಿರ್ಮಾಣಕ್ಕೆ ಅಂತರರಾಷ್ಟ್ರೀಯ ಏಜೆನ್ಸಿಗಳಿಂದ ನೆರವು ಪಡೆಯುವ ಪ್ರಯತ್ನ ಸಾಗಿದೆ’ ಎಂದು ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ತಿಳಿಸಿದರು.

ಅಂಕಿ ಅಂಶಗಳು

65.35 ಕಿ.ಮೀ

ಪಿಆರ್‌ಆರ್‌ ಉದ್ದ

75 ಮೀಟರ್‌

ರಸ್ತೆಯ ಅಗಲ

₹17,000 ಕೋಟಿ

ಯೋಜನೆಯ ಅಂದಾಜು ವೆಚ್ಚ

ಪ್ರತಿವರ್ಷ ಭರಿಸುವ ಮೊತ್ತ (₹ಕೋಟಿಗಳಲ್ಲಿ)

ವರ್ಷ; ಮೊತ್ತ

2018–19; 1,000

2019–20; 2,000

2020–21; 3,500

2021–22; 3,500


ಪಿಆರ್‌ಆರ್‌ ಸಂಧಿಸುವ ಪ್ರಮುಖ ರಸ್ತೆಗಳು

ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್‌ ರಸ್ತೆ, ಹೊಸೂರು ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಹೆಣ್ಣೂರು ರಸ್ತೆ, ಹೆಸರಘಟ್ಟ ರಸ್ತೆ, ಹೊಸಕೋಟೆ– ಆನೇಕಲ್‌ ರಸ್ತೆ, ವೈಟ್‌ಫೀಲ್ಡ್‌ ರಸ್ತೆ, ಸರ್ಜಾಪುರ ರಸ್ತೆ

ಯೋಜನೆಯ ವಿಶೇಷಗಳು

* ಯೋಜನೆಯ ಬಹುತೇಕ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ

* ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ರಚಿಸಿ ಯೋಜನೆ ಅನುಷ್ಠಾನ

* ಟಿಡಿಆರ್‌ ರೂಪದಲ್ಲಿ ಅಥವಾ ರೈತರು ನೀಡಿರುವ ಜಮೀನಿಗೆ ಪ್ರತಿಯಾಗಿ ಅಭಿವೃದ್ಧಿಪಡಿಸಿದ ಜಮೀನು ನೀಡುವ ಮೂಲಕ ಪರಿಹಾರ

* ಹೈಬ್ರಿಡ್ ಆ್ಯನುಟಿ ಮಾದರಿಯಲ್ಲಿ ಟೆಂಡರ್‌ ಆಹ್ವಾನ

* ಭೂಬಳಕೆ ಬದಲಾವಣೆ, ಪ್ರೀಮಿಯಂ ಎಫ್‌ಎಆರ್, ಅಭಿವೃದ್ಧಿ ತೆರಿಗೆ ಮೂಲಕ ಸಂಪನ್ಮೂಲ ಕ್ರೋಡೀಕರಣ


ಮುಖ್ಯಮಂತ್ರಿ ವಸತಿ ಯೋಜನೆ ಸ್ವರೂಪ ಬದಲು

ನಗರದಲ್ಲಿ ಭೂ ಅಲಭ್ಯತೆಯ ಕಾರಣದಿಂದ ‘ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ’ಯ ಮನೆಗಳನ್ನು ಲಂಬಾಕೃತಿಯಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.

ಆರಂಭದಲ್ಲಿ ಜಿ+ 3 ಅಂತಸ್ತಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಚೆನ್ನೈ, ಹೈದರಾಬಾದ್‌ನಲ್ಲಿ ಸ್ಥಳೀಯ ಸರ್ಕಾರಗಳೇ ಹತ್ತು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಿ ಯಶಸ್ಸು ಸಾಧಿಸಿವೆ. ಅಲ್ಲಿನ ಮಾದರಿಗಳನ್ನು ಅಧ್ಯಯನ ಮಾಡಿದ ಬಳಿಕ ಯೋಜನೆಯ ವಿನ್ಯಾಸ ಬದಲಿಸಲು ತೀರ್ಮಾನಿಸಲಾಗಿದ್ದು, ಜಿ +14 ಅಂತಸ್ತಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ತಲೆ ಎತ್ತಲಿವೆ.

ಬಡವರಿಗೆ ಸೂರು ಒದಗಿಸುವ ಯೋಜನೆಯನ್ನು ಸಿದ್ದರಾಮಯ್ಯ ಅವರು 2017–18ರ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುವ ಮೂಲಕ ಮಹತ್ವಾಕಾಂಕ್ಷಿ ಯೋಜನೆಗೆ 2017ರ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಈಗಾಗಲೇ 50 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.

ಐದು ವರ್ಷಗಳಲ್ಲಿ ನಗರ ಜಿಲ್ಲಾಡಳಿತ ಸುಮಾರು 16 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಲಕ್ಷ ಸೂರುಗಳ ನಿರ್ಮಾಣಕ್ಕೆ 1,130 ಎಕರೆ ಬೇಕಿದೆ ಎಂದು ಅಂದಾಜಿಸಲಾಗಿತ್ತು. ಜಿಲ್ಲಾಡಳಿತವು ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ 582.39 ಎಕರೆ ಗೋಮಾಳ ಹಾಗೂ ಖರಾಬು ಭೂಮಿಯನ್ನು ಶುರುವಿನಲ್ಲೇ ಹಸ್ತಾಂತರಿಸಿತ್ತು. ಬಳಿಕ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿತ್ತು. ಇಲ್ಲಿಯವರೆಗೆ 1,040 ಎಕರೆ ಜಾಗ ನೀಡಿದೆ. ಈ ಜಾಗಗಳು 43 ಕಡೆ ಹಂಚಿ ಹೋಗಿವೆ.


ವಸತಿ ಯೋಜನೆ ವಿಶೇಷಗಳು

320 ಚದರ ಅಡಿ

ಒಂದು ಬಿಎಚ್‌ಕೆ ಮನೆಯ ವಿಸ್ತೀರ್ಣ

₹6 ಲಕ್ಷ

ಮನೆಯ ಬೆಲೆ

520 ಚದರ ಅಡಿ

ಎರಡು ಬಿಎಚ್‌ಕೆ ಮನೆಯ ವಿಸ್ತೀರ್ಣ

12 ಲಕ್ಷ

ಮನೆಯ ಬೆಲೆ

₹ 3.50 ಲಕ್ಷ

ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರಿಗೆ ‌ನೀಡುವ ಸಹಾಯಧನ

₹ 2.70 ಲಕ್ಷ

ಸಾಮಾನ್ಯ ವರ್ಗಕ್ಕೆ ಸಹಾಯಧನ


ಹೊಸಕೋಟೆಯ 30 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು

ಹೊಸಕೋಟೆ ತಾಲ್ಲೂಕಿನ 30 ಕೆರೆಗಳಿಗೆ ಕೆ.ಆರ್‌.ಪುರ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಸಂಸ್ಕರಿಸಿದ ತ್ಯಾಜ್ಯ ನೀರು ತುಂಬಿಸುವ ₹100 ಕೋಟಿಯ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

‘ಹೊಸಕೋಟೆ ತಾಲ್ಲೂಕು 10 ವರ್ಷಗಳಿಂದ ಬರಪೀಡಿತವಾಗಿದೆ. ನೀರಿನ ಸಮಸ್ಯೆ ತೀವ್ರವಾಗಿದೆ. ಹೀಗಾಗಿ, ಕೆರೆಗಳ ಪುನರುಜ್ಜೀವನಕ್ಕೆ ಸಣ್ಣ ನೀರಾವರಿ ಇಲಾಖೆ ಮೂಲಕ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.


ತಿಪ್ಪಗೊಂಡನಹಳ್ಳಿಗೆ ₹285 ಕೋಟಿ

ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಮೊದಲನೇ ಹಂತದಲ್ಲಿ ₹285.95 ಕೋಟಿ ವೆಚ್ಚದಲ್ಲಿ ಪುನಶ್ಚೇತನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಈ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಕಾವೇರಿ ಐದನೇ ಹಂತದ ಯೋಜನೆ ಮೂಲಕ ನೀರು ಪೂರೈಕೆ ಆರಂಭವಾದ ಬಳಿಕ ತಿಪ್ಪಗೊಂಡನಹಳ್ಳಿಯಿಂದ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಕೊಳಚೆ ನೀರು ಸೇರಿ ಜಲಾಶಯದ ನೀರು ಕಲುಷಿತವಾಗಿತ್ತು. ಎತ್ತಿನಹೊಳೆ ಯೋಜನೆ ಮೂಲಕ ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟ ಕೆರೆಗೆ 2.5 ಟಿಎಂಸಿ ಅಡಿ ನೀರು ಪೂರೈಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದಕ್ಕೂ ಮುನ್ನ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ ಜಲಾಶಯಕ್ಕೆ ಕೊಳಚೆ ನೀರು ಸೇರದಂತೆ ತಡೆಯುವುದು ಸರ್ಕಾರದ ಉದ್ದೇಶ.

* ಹೊಸ ರಸ್ತೆ ನಿರ್ಮಾಣವಾದ ಬಳಿಕ ರಸ್ತೆ ಶುಲ್ಕ (ಟೋಲ್‌) ಸಂಗ್ರಹಿಸಲಾಗುತ್ತದೆ.
-ಕೃಷ್ಣ ಬೈರೇಗೌಡ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT