ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ: ನೂತನ ಮೇಯರ್‌ ಗೌತಮ್‌ ಕುಮಾರ್‌ ಕನಸು

Last Updated 1 ಅಕ್ಟೋಬರ್ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರವನ್ನು ಪದೇ ಪದೇ ಕಾಡುವ ಕಸದ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಬೇಕು. ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು’

53ನೇ ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರ ಕನಸು ಇದು. ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ನಮ್ಮ ಪಕ್ಷದ ಸರ್ಕಾರವೇ ಇದೆ. ಹಾಗಾಗಿ, ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಲಿಕೆ ಆಡಳಿತದ ಕುರಿತ ಪ್ರಶ್ನೆಗಳಿಗೆ ಮೇಯರ್‌ ಉತ್ತರಿಸಿದ್ದು ಹೀಗೆ.

* ನೀವು ಆದ್ಯತೆ ಮೇರೆಗೆ ಬಗೆಹರಿಸುವ ಸಮಸ್ಯೆಗಳು ಯಾವುವು?

ಕಸದ ಸಮಸ್ಯೆ ಮತ್ತು ಜಲಮಂಡಳಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜನರು ನಮ್ಮನ್ನು ಬೈಯುತ್ತಾರೆ. ನೀರು ಪೂರೈಕೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಬೇಕಿದೆ. ಸಂಚಾರ ದಟ್ಟಣೆಯೂ ತೀವ್ರವಾಗಿದೆ. ಇವುಗಳ ನಿವಾರಣೆಗೆ ಸಚಿವರು, ಸಂಸದರು, ಶಾಸಕರು, ಸಹಸದಸ್ಯರು ಹಾಗೂ ಅಧಿಕಾರಿಗಳ ಸಲಹೆ ಪಡೆದು ಕಾರ್ಯಪ್ರವೃತ್ತನಾಗುತ್ತೇನೆ.

* ಹಸಿ ಕಸ ಪ್ರತ್ಯೇಕವಾಗಿ ಸಂಗ್ರಹಿಸುವ ಟೆಂಡರ್‌ ವಿಳಂಬವಾಗುತ್ತಿದೆಯಲ್ಲಾ?

ಅಧಿಕಾರಿಗಳ ಜೊತೆ ಚರ್ಚಿಸಿ ಹೊಸ ಟೆಂಡರ್‌ ಆದಷ್ಟು ಬೇಗ ಜಾರಿಯಾಗುವಂತೆ ನೋಡಿಕೊಳ್ಳುತ್ತೇನೆ. ಕಸ ಸಂಸ್ಕರಣಾ ವ್ಯವಸ್ಥೆಯ ಸುಧಾರಣೆಗೂ ಕ್ರಮ ಕೈಗೊಳ್ಳುತ್ತೇನೆ.

* ನಿಮ್ಮ ಅವಧಿಯಲ್ಲಾದರೂ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿ ಆದೀತೇ?

ಪ್ಲಾಸ್ಟಿಕ್‌ ನಿಷೇಧ ಕಟ್ಟುನಿಟ್ಟಿನ ಜಾರಿ ನಮ್ಮ ಪಕ್ಷದ ಉದ್ದೇಶವೂ ಆಗಿದೆ. ಇದಕ್ಕೆ ರೂಪರೇಷೆ ಸಿದ್ಧಪಡಿಸುತ್ತೇವೆ.

* ನಿಮ್ಮ ಆಡಳಿತ ಪಾಲಿಕೆ ಚುನಾವಣೆಯನ್ನು ಕೇಂದ್ರೀಕರಿಸಿರುತ್ತದೆಯೇ?

ಚುನಾವಣೆ ಬರುತ್ತದೆ, ಹೋಗುತ್ತದೆ. ನಮ್ಮದೇನಿದ್ದರೂ ಅಭಿವೃದ್ಧಿಯೇ ಮೂಲಮಂತ್ರ. ಜನರ ಅಗತ್ಯ ಈಡೇರಿಸುವುದೇ ನಮ್ಮ ಗುರಿ.

* ಪಾಲಿಕೆ ಕಾಮಗಾರಿಗಳ ಗುಣಮಟ್ಟ ರಕ್ಷಣೆಗೆ ಏನು ಕ್ರಮ ಕೈಗೊಳ್ಳುವಿರಿ?

ಗುಣಮಟ್ಟ ಕಾಪಾಡುವುದು ನಮ್ಮ ಆದ್ಯತೆ. ಈಗಾಗಲೇ ಮುಖ್ಯಮಂತ್ರಿಯವರು ಅನೇಕ ಕಳಪೆ ಕಾಮಗಾರಿಗಳ ತನಿಖೆಗೆ ಆದೇಶ ಮಾಡಿದ್ದಾರೆ.

* ಕನ್ನಡಿಗರೇತರರನ್ನು ಮೇಯರ್ ಮಾಡಲಾಗಿದೆ ಎಂಬ ಟೀಕೆ ವ್ಯಕ್ತವಾಗಿದೆಯಲ್ಲ?

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ರೈತನ ಮಗ ನಾನು. ಕನ್ನಡ ನನ್ನ ತಾಯಿ. ಕರ್ನಾಟಕವೇ ನನ್ನ ಭೂಮಿ. ಕನ್ನಡದ ಬಗ್ಗೆ ಪ್ರೇಮ, ಭಕ್ತಿ ಪ್ರೀತಿ ಎಲ್ಲವೂ ಇದೆ. ರಾಜ್ಯದ ಕನ್ನಡಕ್ಕೆ ಧಕ್ಕೆ ತರುವ ಕೆಲಸವನ್ನು ಯಾವತ್ತೂ ಮಾಡುವುದಿಲ್ಲ. ಇಲ್ಲಿ ಭೇದ ಭಾವ ಇಲ್ಲ. ನಮಗೆ ದೇಶ ಮೊದಲು. ಆದರೆ, ಕನ್ನಡ ಹಾಗೂ ಕರ್ನಾಟಕವೇ ನನ್ನ ಆದ್ಯತೆ.

ವಾಟಾಳ್‌ ನಾಗರಾಜ್‌ ಅವರು ಕನ್ನಡದ ಬಗ್ಗೆ, ಕನ್ನಡ ನಾಡಿನ ಬಗ್ಗೆ ಏನು ಕನಸು ಇಟ್ಟುಕೊಂಡಿದ್ದಾರೋ ಅದನ್ನು ನನಸು ಮಾಡಿ ಅವರ ಮನಸು ಗೆಲ್ಲುತ್ತೇನೆ.

* ಪಾಲಿಕೆಯಲ್ಲೂ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಅನುಷ್ಠಾನ ತರುತ್ತೀರಾ?

ಸುಳ್ಳು ಆಶ್ವಾಸನೆ ಕೊಡುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟವರ ಬಳಿ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇನೆ.

* ಜಾಹೀರಾತು ನಿಷೇಧದ ಬಗ್ಗೆ ನಿಮ್ಮ ನಿಲುವೇನು?

ಬಿಜೆಪಿ ಹಿಂದಿನಿಂದಲೂ ಜಾಹೀರಾತು ನಿಷೇಧವನ್ನು ಬೆಂಬಲಿಸಿದೆ. ನಗರದ ಸೌಂದರ್ಯಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವ ಹೊಣೆ ನಮ್ಮದು. ಜಾಹೀರಾತು ನೀತಿಯ ಅನುಷ್ಠಾನದ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ.

* ತೆರಿಗೆ ಹೆಚ್ಚಳ ಪ್ರಸ್ತಾವ ಜಾರಿಗೆ ತರುತ್ತೀರಾ?

ಸಂಪನ್ಮೂಲ ಕ್ರೋಢಿಕರಣವೂ ಆಗಬೇಕು. ನಗರಕ್ಕೆ ಒಳ್ಳೆಯದಾಗುವುದಾದರೆ ನಾನು ಇದಕ್ಕೆ ಸಿದ್ಧ.

‘ಟಿಡಿಆರ್ ಹಗರಣ ತನಿಖೆ ಆಗಲಿ’

ಟಿಡಿಆರ್‌ ಹಗರಣದಲ್ಲಿ ತಮ್ಮ ಹೆಸರು ತಳಕು ಹಾಕಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಗೌತಮ್‌ ಕುಮಾರ್, ‘ಇದು ಕಾಂಗ್ರೆಸ್‌ನವರ ಷಡ್ಯಂತ್ರ’ ಎಂದರು.

‘ಈ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ಸತ್ಯಾಂಶ ಹೊರಬರಲಿದೆ’ ಎಂದು ಪ್ರತಿಕ್ರಿಯಿಸಿದರು.

ಆಡಳಿತಾತ್ಮಕ ವರದಿ ಮಂಡಿಸುವೆ: ಉಪಮೇಯರ್

‘ಪಾಲಿಕೆಯಲ್ಲಿ ಆಡಳಿತಾತ್ಮಕ ವರದಿಯನ್ನು ಮಂಡಿಸುವುದು ಉಪಮೇಯರ್ ಅವರಿಗಿರುವ ಅಧಿಕಾರ. ನನ್ನ ಅವಧಿಯಲ್ಲಿ ಆಡಳಿತಾತ್ಮಕ ವರದಿಯನ್ನು ಖಂಡಿತಾ ಮಂಡಿಸುತ್ತೇನೆ’ ಎಂದು ಉಪಮೇಯರ್‌ ರಾಮಮೋಹನ್ ರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT