ಸೋಮವಾರ, ಜೂಲೈ 13, 2020
22 °C
ಸಾಂಸ್ಥಿಕ ಕ್ವಾರಂಟೈನ್ ನಿಯಮ ಬದಲಿಸಿದ ಆರೋಗ್ಯ ಇಲಾಖೆ

ಪರೀಕ್ಷೆ ಇಲ್ಲದೆಯೇ ಮನೆಗೆ ತೆರಳಲು ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಂಸ್ಥಿಕ ಕ್ವಾರಂಟೈನ್‌ ಅವಧಿಯಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸದಿದ್ದಲ್ಲಿ ಇನ್ನು ಮುಂದೆ ಕೋವಿಡ್‌ ಪರೀಕ್ಷೆ ಮಾಡದೆಯೇ ಮನೆಗೆ ಕಳುಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ‌

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದ್ದು, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. ಕಳೆದ ವಾರವಷ್ಟೇ ಇಲಾಖೆ ಸಾಂಸ್ಥಿಕ ಕ್ವಾರಂಟೈನ್ ಅವಧಿಯನ್ನು 14 ದಿನಗಳಿಂದ 7 ದಿನಕ್ಕೆ ಇಳಿಕೆ ಮಾಡಿತ್ತು. ಆದರೆ, ಮನೆಗೆ ತೆರಳಿದ ಬಳಿಕ 14 ದಿನಗಳು ಕ್ವಾರಂಟೈನ್‌ಗೆ ಒಳಗಾಗಬೇಕಿತ್ತು. ಈಗ ಮನೆಯ ಕ್ವಾರಂಟೈನ್‌ ಅವಧಿಯನ್ನೂ 7 ದಿನಗಳಿಗೆ ಇಳಿಕೆ ಮಾಡಲಾಗಿದೆ.  

ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಕೋವಿಡ್‌ ಪರೀಕ್ಷೆ ಮಾಡುತ್ತಿದ್ದರಿಂದ ಪರೀಕ್ಷಾ ವರದಿ ವಿಳಂಬವಾಗುತ್ತಿತ್ತು. ಇದರಿಂದ ಸೋಂಕು ಲಕ್ಷಣ ಇರುವವರು ವರದಿಗಾಗಿ ಎದುರುನೋಡಬೇಕಾಗಿತ್ತು. ಹಾಗಾಗಿ ಸಾಂಸ್ಥಿಕ ಕ್ವಾರಂಟೈನ್‌ ಅವಧಿಯಲ್ಲಿ ಸೋಂಕು ಲಕ್ಷಣಗಳನ್ನು ಹೊಂದಿರದವರಿಗೆ ಕೋವಿಡ್‌ ಪರೀಕ್ಷೆಯ ವಿನಾಯಿತಿ ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರು, ಮಧುಮೇಹ, ಉಸಿರಾಟದ ತೊಂದರೆ, ಅಸ್ತಮಾ, ಹೃದಯ ತೊಂದರೆಯಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಿ, ಮನೆ ಕ್ವಾರಂಟೈನ್ ಮಾಡಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ಕೋವಿಡ್‌ 19 ಕಾರ್ಯಪಡೆಯ ಶಿಫಾರಸಿನ ಅನುಸಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಲಕ್ಷಣ ಕಾಣಿಸಿಕೊಳ್ಳದಿದ್ದಲ್ಲಿ ಮನೆಯಲ್ಲಿಯೇ ಕ್ವಾರಂಟೈನ್ ಮಾಡಿ, ನಿಗಾ ಇರಿಸಲಾಗುವುದು. ಇದರಿಂದ ಕೋವಿಡ್ ಪರೀಕ್ಷೆ ವರದಿಯನ್ನು ಬೇಗ ನೀಡಲು ಸಾಧ್ಯವಾಗಲಿದೆ’ ಎಂದು ಜಾವೇದ್ ಅಖ್ತರ್ ತಿಳಿಸಿದರು. 

‘ಕೆಲವು ಕೋವಿಡ್‌ ಪರೀಕ್ಷಾ ವರದಿ ವಿಳಂಬವಾಗುತ್ತಿದೆ. ಶೀಘ್ರವಾಗಿ ವರದಿ ನೀಡಲು ಇನ್ನಷ್ಟು  ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಸಂಬಂಧ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಪ್ರತ್ಯೇಕ ಆಸ್ಪತ್ರೆಯನ್ನು ಗುರುತಿಸಿ, ವರದಿಗಳು ಆದಷ್ಟು ಬೇಗ ತಲುಪಲು ಕ್ರಮ ವಹಿಸಲಾಗುವುದು’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು