ಮಂಗಳವಾರ, ಆಗಸ್ಟ್ 3, 2021
22 °C
ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ

ಬೆಂಗಳೂರು: ಆಂಬುಲೆನ್ಸ್‌ನಲ್ಲೇ ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ 55 ವರ್ಷದ ವ್ಯಕ್ತಿಯೊಬ್ಬರು ಆಂಬುಲೆನ್ಸ್‌ನಲ್ಲೇ ಮೃತಪಟ್ಟಿದ್ದಾರೆ.

ವಾಲ್ಮಿಕಿನಗರದ ಪ್ರಹ್ಲಾದ್ ಎಂಬುವರಿಗೆ ಬುಧವಾರ ರಕ್ತದೊತ್ತಡ ಕಡಿಮೆಯಾಗಿತ್ತಲ್ಲದೇ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಬೆಳಿಗ್ಗೆ ಆಂಬುಲೆನ್ಸ್‌ನಲ್ಲಿ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಹಾಸಿಗೆ ಕೊರತೆ ಇದೆ ಎಂಬ ಕಾರಣಕ್ಕೆ ವೈದ್ಯರ ಸೂಚನೆಯಂತೆ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿಯೂ ಚಿಕಿತ್ಸೆ ಸಿಗದೆ ಜಾಲಹಳ್ಳಿ ಖಾಸಗಿ ಆಸ್ಪತ್ರೆಯೊಂದಕ್ಕೆ ಹೋಗಿ ವಿಚಾರಿಸಿದ್ದರು. ಅಲ್ಲಿಯೂ ಹಾಸಿಗೆ ಕೊರತೆ ಇದೆ ಎಂದು ವೈದ್ಯರು ತಿಳಿಸಿದ್ದರು.

‘ಬೇರೆ ಆಸ್ಪತ್ರೆ ಹುಡುಕಿಕೊಂಡು ಹೋಗುತ್ತಿರುವಾಗ ಅವರು ಆಂಬುಲೆನ್ಸ್‌ನಲ್ಲೇ ಮೃತಪಟ್ಟಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರೆ ಬದುಕುಳಿಯುತ್ತಿದ್ದರು’ ಎಂದು ಕುಟುಂಬದವರು ಆರೋಪಿಸಿದ್ದಾರೆ. 

ಚಿಕಿತ್ಸೆ ನೀಡದೆ ರೋಗಿಯನ್ನು ಅಲೆದಾಡಿಸಿರುವ ಆಸ್ಪತ್ರೆ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಮಗಳೇ ಮುಂದೆ ನಿಂತು ಅಂತ್ಯಕ್ರಿಯೆ: ಕೊರೊನಾ ಸೋಂಕಿನಿಂದ ಮೃತಪಟ್ಟ ಶಕ್ತಿಗಣಪತಿನಗರದ ವ್ಯಕ್ತಿಗೆ ಮಗಳೇ ಮುಂದೆ ನಿಂತು ಅಂತ್ಯಕ್ರಿಯೆ ನೆರವೇರಿಸಿದರು.

ಶಕ್ತಿಗಣಪತಿನಗರದಲ್ಲಿ ಆಟೊ ಚಾಲಕ ಸೋಂಕಿನಿಂದ ಮೃತಪಟ್ಟಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಇದ್ದಾನೆ. ತಂದೆ ಮೃತಪಟ್ಟಿರುವ ಸುದ್ದಿ ತಿಳಿದ ಯುವತಿ, ಶಂಕರಮಠ ವಾರ್ಡ್‌ನ ಪಾಲಿಕೆ ಸದಸ್ಯ ಎಂ. ಶಿವರಾಜ್ ಅವರನ್ನು ಸಂಪರ್ಕಿಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕೋರಿದರು. ಸುಮನಹಳ್ಳಿ ಚಿತಾಗಾರಕ್ಕೆ ಪಿಪಿಇ ಕಿಟ್ ಧರಿಸಿ ಬಂದು ಸ್ವತಃ ಮುಂದೆ ನಿಂತು ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು