ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಇಎಸ್‌ ಹಿರಿಮೆ ಹೆಚ್ಚಿಸಿದ ಸಾರಂಗ್‌

Last Updated 10 ಜುಲೈ 2021, 22:34 IST
ಅಕ್ಷರ ಗಾತ್ರ

ಬೆಂಗಳೂರು: ‍ಪಿಇಎಸ್‌ ವಿಶ್ವವಿದ್ಯಾಲಯದ ಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿ ಸಾರಂಗ್‌ ರವೀಂದ್ರ, ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅಮೆರಿಕದ ಪ್ರತಿಷ್ಠಿತ ಕಾನ್‌ಫ್ಲುಯೆಂಟ್‌ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿರುವ ಅವರಿಗೆ ವಾರ್ಷಿಕ ₹1.5 ಕೋಟಿ ವೇತನ ಸಿಗಲಿದೆ.

22 ವರ್ಷ ವಯಸ್ಸಿನ ಸಾರಂಗ್‌ ಅವರ ಸಾಧನೆ, ಕೋವಿಡ್‌ ಕಾಲದಲ್ಲಿ ಕ್ಯಾಂಪಸ್‌ ಆಯ್ಕೆಯ ಕನವರಿಕೆಯಲ್ಲಿರುವ ನಗರದ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸ್ಸು ಮೂಡುವಂತೆ ಮಾಡಿದೆ.

‘ಕಳೆದ ವರ್ಷ ನಮ್ಮ ಕ್ಯಾಂಪಸ್‌ಗೆ ಭೇಟಿ ನೀಡಿದ್ದ ಕಾನ್‌ಫ್ಲುಯೆಂಟ್‌ ಕಂಪನಿಯ ತಂಡ ಸಾರಂಗ್‌ ಅವರನ್ನು ಇಂಟರ್ನ್‌ಶಿಪ್‌ಗೆ ಆಯ್ಕೆ ಮಾಡಿತ್ತು. ಈ ಅವಧಿಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದ ಸಾರಂಗ್‌, ಉದ್ಯೋಗ ಗಿಟ್ಟಿಸಿ ಕೊಂಡಿದ್ದಾರೆ. ಅವರು ಲಂಡನ್‌ನಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿದ್ದಾರೆ. ಕಂಪ್ಯೂಟರ್‌ ಸೈನ್ಸ್‌ ವಿಭಾಗ ದಲ್ಲೇ ವ್ಯಾಸಂಗ ಮಾಡುತ್ತಿದ್ದ ಜೀವನಾ ಹೆಗಡೆ, ಗೂಗಲ್‌ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ವಿಶ್ವವಿದ್ಯಲಯದ ವಿದ್ಯಾರ್ಥಿಗಳಿಬ್ಬರು ಪ್ರತಿಷ್ಠಿತ ಅಂತರರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶ ಪಡೆದಿರುವುದು ಇದೇ ಮೊದಲು. ಇದು ಖುಷಿಯ ವಿಚಾರ’ ಎಂದು ಕುಲಪತಿ ಪ್ರೊ.ಎಂ.ಆರ್‌. ದೊರೆಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

‘ಕೋವಿಡ್‌ ಸಮಯದಲ್ಲಿ ವಿಶ್ವವಿದ್ಯಾಲಯದ ಒಟ್ಟು 1,283 ವಿದ್ಯಾರ್ಥಿ ಗಳು ವರ್ಚುವಲ್‌ ಇಂಟರ್ನ್‌ಶಿಪ್‌ಗಳಲ್ಲಿ ಪಾಲ್ಗೊಂಡು ಉದ್ಯೋಗಕ್ಕೆ ಸಜ್ಜಾಗಲು ಅಗತ್ಯವಿರುವ ಅನುಭವ ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ ತಿಂಗಳಿಗೆ ₹15 ಸಾವಿರದಿಂದ ಗರಿಷ್ಠ ₹1.25 ಲಕ್ಷದವರೆಗೆ ಗೌರವ ಧನ ಪಡೆದಿದ್ದಾರೆ. ಸುಮಾರು 199 ಮಂದಿ ವಿದ್ಯಾರ್ಥಿಗಳು ವಿಶ್ವದ ಪ್ರತಿಷ್ಠಿತ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿಗೆ ದಾಖಲಾತಿ ಪಡೆದಿದ್ದಾರೆ. ನಮ್ಮ ವಿಶ್ವವಿದ್ಯಾಲಯವು ಪ್ರತಿಭಾನ್ವಿತರ ಕಣಜವಾಗಿದ್ದು ಅಂತರರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸುತ್ತಿದೆ. ಪ್ರಸ್ತುತ 1,377 ಮಂದಿ ಎಂಜಿನಿಯರಿಂಗ್‌, 165 ಮಂದಿ ಮ್ಯಾನೇಜ್‌ಮೆಂಟ್‌, 102 ಮಂದಿ ವಾಣಿಜ್ಯ, 96 ಮಂದಿ ಫಾರ್ಮಸಿ ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಕೆಲಸ ಪಡೆದುಕೊಂಡಿದ್ದಾರೆ’ ಎಂದರು.

‘ನಮ್ಮ ವಿಶ್ವವಿದ್ಯಾಲಯವು ನವೋ ದ್ಯಮಿಗಳನ್ನು ಸೃಷ್ಟಿಸಲೂ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿ ಗಳಲ್ಲಿರುವ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಲು ನೆರವಾಗುತ್ತಿದೆ. ಸಂಶೋಧನೆ ಕೈಗೊಳ್ಳ ಲಿರುವ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೆ ವಾರ್ಷಿಕ ₹1.25 ಕೋಟಿ ಹಣಕಾಸು ನೆರವು ನೀಡಲಾಗುತ್ತಿದೆ. ಈಗಾಗಲೇ ನಮ್ಮ ವಿದ್ಯಾರ್ಥಿಗಳು ಹೊಸ ಹೊಸ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಪೇಟೆಂಟ್‌ಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಕ್ರೀಡೆಗೆ ಹೆಚ್ಚಿನ ಮನ್ನಣೆ ನೀಡುವ ಉದ್ದೇಶದಿಂದ ಬಿಬಿಎ ಇನ್‌ ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್‌ ಕಾರ್ಯಕ್ರಮ ಆರಂಭಿಸಿದ್ದೇವೆ. ಇದು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

ವಿಶ್ವವಿದ್ಯಾಲಯದ ಉಪ ಕುಲಪತಿ ಜೆ. ಸೂರ್ಯಪ್ರಸಾದ್‌, ಕುಲಸಚಿವ ಕೆ.ಎಸ್‌. ಶ್ರೀಧರ್‌ ಇದ್ದರು.

*
ಇಷ್ಟು ದೊಡ್ಡ ಮೊತ್ತದ ವೇತನ ಸಿಗುತ್ತದೆ ಎಂದು ಖಂಡಿತಾ ಭಾವಿಸಿರಲಿಲ್ಲ. ಕಂಪನಿಯವರು ಕರೆ ಮಾಡಿ ಹೇಳಿದಾಗ ನಿಜಕ್ಕೂ ಅಚ್ಚರಿಯಾಯಿತು.
-ಸಾರಂಗ್‌ ರವೀಂದ್ರ, ಪಿಇಎಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT