ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್: ಪಿ.ಜಿ ಕೆಲಸಗಾರ ಬಂಧನ

ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಬೆದರಿಕೆ: ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯ
Last Updated 8 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ (ಪಿ.ಜಿ) ವಾಸವಿದ್ದ ಯುವತಿಯರ ಅರೆಬೆತ್ತಲೆ ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಎಂ. ನಿರಂಜನ್ ಎಂಬುವರನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಪುದುಚೇರಿಯ ನಿರಂಜನ್, ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಬೊಮ್ಮನಹಳ್ಳಿ ಬಳಿಯ ಯುವತಿಯರ ಪೇಯಿಂಗ್ ಗೆಸ್ಟ್‌ ಕಟ್ಟಡವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಅದೇ ಕಟ್ಟಡದಲ್ಲಿ ವಾಸವಿದ್ದ ಯುವತಿಯರ ಅರೆಬೆತ್ತಲೆ ವಿಡಿಯೊ ಚಿತ್ರೀಕರಿಸುತ್ತಿದ್ದ ಈತ, ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಇತ್ತೀಚೆಗೆ ಯುವತಿಯೊಬ್ಬರ ಸ್ನಾನದ ವಿಡಿಯೊವನ್ನು ಆರೋಪಿ ಚಿತ್ರೀಕರಿಸಿದ್ದ. ಅದನ್ನು ಯುವತಿಯ ಮೊಬೈಲ್‌ಗೆ ಕಳುಹಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದ. ಈ ಬಗ್ಗೆ ಯುವತಿ ದೂರು ನೀಡಿದ್ದರು. ನಂತರ, ಯುವತಿ ಮೂಲಕವೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸ್ಥಳವೊಂದಕ್ಕೆ ಕರೆಸಿಕೊಂಡು ಬಂಧಿಸಲಾಗಿದೆ’ ಎಂದು ತಿಳಿಸಿವೆ.

ಮಾಲೀಕರ ನಂಬಿಕೆ ಗಳಿಸಿ ಕೃತ್ಯ: ‘ಪೇಯಿಂಗ್ ಗೆಸ್ಟ್ ಕಟ್ಟಡದ ಮಾಲೀಕರ ಎದುರು ಚೆನ್ನಾಗಿ ಕೆಲಸ ಮಾಡುತ್ತಿದ್ದ ಆರೋಪಿ, ಅವರ ನಂಬಿಕೆ ಗಳಿಸಿದ್ದ. ಸ್ವಚ್ಛತೆ ಹಾಗೂ ನಿರ್ವಹಣೆ ನೆಪದಲ್ಲಿ ಕಟ್ಟಡದ ಕೊಠಡಿಗಳಲ್ಲಿ ಆರೋಪಿ ಸುತ್ತಾಡುತ್ತಿದ್ದ. ಹೀಗಾಗಿ, ಯುವತಿಯರ ವಿಡಿಯೊವನ್ನು ಹೇಗೆ ಚಿತ್ರೀಕರಿಸಬಹುದು ಎಂಬುದು ಆರೋಪಿಗೆ ತಿಳಿದಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಚಾವಣಿಯಿಂದ ವಿಡಿಯೊ ಚಿತ್ರೀಕರಣ: ‘ಯಾರಿಗೂ ಗೊತ್ತಾಗದಂತೆ ಕಟ್ಟಡದ ಚಾವಣಿಯಲ್ಲಿ ಓಡಾಡುತ್ತಿದ್ದ ಆರೋಪಿ, ಕಿಟಕಿಗಳ ಮೂಲಕ ಯುವತಿಯರ ಅರೆಬೆತ್ತಲೆ ವಿಡಿಯೊ ಚಿತ್ರೀಕರಿಸುತ್ತಿದ್ದ. ಯುವತಿಯರು ಸ್ನಾನ ಮಾಡುವ ಹಾಗೂ ಬಟ್ಟೆ ಬದಲಿಸುವ ವಿಡಿಯೊಗಳನ್ನು ಈತ ಚಿತ್ರೀಕರಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆ್ಯಪ್‌ ಬಳಸಿ ಸಂದೇಶ: ‘ಕಟ್ಟಡದ ನೋಂದಣಿ ಪುಸ್ತಕದಲ್ಲಿ ಯುವತಿಯರ ಮೊಬೈಲ್ ಸಂಖ್ಯೆ ನಮೂದಾಗಿರುತ್ತಿತ್ತು. ಅದರ ಮೂಲಕ ಯುವತಿಯರ ಮೊಬೈಲ್ ಸಂಖ್ಯೆ ತಿಳಿದುಕೊಳ್ಳುತ್ತಿದ್ದ ಆರೋಪಿ, ಅಪರಿಚಿತ ಸಂಖ್ಯೆಯಿಂದ ಬ್ಲ್ಯಾಕ್‌ಮೇಲ್ ಸಂದೇಶ ಕಳುಹಿಸುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆ್ಯಪ್‌ ಬಳಸುತ್ತಿದ್ದ ಆರೋಪಿ, ಅಸಲಿ ಸಂಖ್ಯೆಯನ್ನು ಮರೆಮಾಚಿ ನಕಲಿ ಸಂಖ್ಯೆ ಮೂಲಕ ಯುವತಿಯರಿಗೆ ಸಂದೇಶ ಕಳುಹಿಸುತ್ತಿದ್ದ. ಹೀಗಾಗಿ, ಆರೋಪಿ ಸುಳಿವು ಯಾರಿಗೂ ಸಿಗುತ್ತಿರಲಿಲ್ಲ. ‘ನಿಮ್ಮ ಅರೆಬೆತ್ತಲೆ ವಿಡಿಯೊ ನನ್ನ ಬಳಿ ಇದೆ. ನೀವು ನನ್ನ ಜೊತೆ ಲೈಂಗಿಕವಾಗಿ ಸಹಕರಿಸಬೇಕು. ನಾನು ಕರೆದ ಕಡೆ ಬರಬೇಕು. ಇಲ್ಲದಿದ್ದರೆ, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂದು ಸಂದೇಶದಲ್ಲಿ ಬರೆಯುತ್ತಿದ್ದ.’

‘20ಕ್ಕೂ ಹೆಚ್ಚು ಯುವತಿಯರ ವಿಡಿಯೊಗಳನ್ನು ಆರೋಪಿ ಚಿತ್ರೀಕರಿಸಿರುವುದು ಗೊತ್ತಾಗಿದೆ. ಮರ್ಯಾದೆಗೆ ಹೆದರಿದ್ದ ಕೆಲ ಯುವತಿಯರು, ಆರೋಪಿ ಹೇಳಿದಂತೆ ಕೇಳಿದ್ದಾರೆ. ಅಂಥ ಯುವತಿಯರನ್ನು ಹಲವೆಡೆ ಕರೆದೊಯ್ದಿದ್ದ ಆರೋಪಿ, ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಕೆಲವರಿಂದ ಹಣ ಸಹ ಪಡೆದಿದ್ದಾನೆ. ಸಂತ್ರಸ್ತ ಯುವತಿಯರಿಂದ ಹೇಳಿಕೆ ಪಡೆಯಲು ಪ್ರಯತ್ನಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT