ಗುರುವಾರ , ಮೇ 13, 2021
39 °C
ನೀಲಗಿರಿ ಮರ ತೆರವುಗೊಳಿಸಿ ಹೂ, ಹಣ್ಣು ಗಿಡ ಬೆಳೆಸಲು ನೆರವು ನೀಡಿ–ಲಿಂಬಾವಳಿ

ಮಾಲ್ಗುಡಿ ಛಾಯಾಗ್ರಹಣ ಸ್ಪರ್ಧೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನೀಲಗಿರಿ ಮರಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕಾಡು ಪ್ರಾಣಿಗಳಿಗೆ ಮೇವು ಸಿಗುತ್ತಿಲ್ಲ. ಹಾಗಾಗಿ, ನೀಲಗಿರಿ ಮರಗಳನ್ನು ತೆರವುಗೊಳಿಸಿ ಕಾಡಿನಲ್ಲಿ ಹೂ, ಹಣ್ಣು, ಹಾಗೂ ಆರೋಗ್ಯವರ್ಧಕ ಗಿಡಗಳನ್ನು ನೆಡಲು ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಉದ್ಯಮಿಗಳು ಹಾಗೂ ಸಂಸ್ಥೆಗಳು ಕೈಜೋಡಿಸಬೇಕು’ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದರು.

ರೋಟರಿ ಇಂಟರ್‌ನ್ಯಾಷನಲ್‌ನ 3,190ನೇ ಜಿಲ್ಲೆ, ಅರಣ್ಯ ಇಲಾಖೆ, ಫೆಡರೇಷನ್ ಆಫ್ ಇಂಡಿಯನ್ ಫೋಟೊಗ್ರಫಿ ಹಾಗೂ ಯೂತ್ ಫೋಟೊಗ್ರಫಿಕ್ ಸೊಸೈಟಿಗಳ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಮಾಲ್ಗುಡಿ ಅಖಿಲ ಭಾರತ ಛಾಯಾಗ್ರಹಣ ಸ್ಪರ್ಧೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ಅರಣ್ಯ ಪ್ರದೇಶದಲ್ಲಿ ಜೀವನ ನಡೆಸುತ್ತಿರುವ ಸೋಲಿಗರಿಗೆ ಮೂಲ ಸೌಲಭ್ಯ ದೊರಕಿಸಿಕೊಡುವ ಮೂಲಕ ಕಾಡುಪ್ರಾಣಿಗಳಿಗೆ ಆಹಾರ ಸಿಗುವಂತಹ ವಾತಾವರಣ ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಚಿಂತನೆ ನಡೆಸಿದೆ. ಎಲ್ಲವನ್ನೂ ಸರ್ಕಾರದಿಂದ ಮಾಡಲು ಸಾಧ್ಯವಿಲ್ಲ. ಕಾಡು ಹಾಗೂ ಜೀವಿಗಳ ಉಳಿವಿಗಾಗಿ ಉದ್ಯಮಿಗಳೂ ಕೈಜೋಡಿಸಬೇಕು’ ಎಂದರು.

ವಿನಯ ಗೂರೂಜಿ, ‘ಮನುಷ್ಯ ಮತ್ತು ಪರಿಸರ ಸಹೋದರರಿದ್ದಂತೆ. ನಾವು ಪ್ರಕೃತಿಯನ್ನು ಉಳಿಸಿದಾಗ ಮಾತ್ರ ಆರೋಗ್ಯವಂತ ಸಮಾಜವನ್ನು ಕಾಣಬಹುದು‘ ಎಂದರು.

ರೋಟರಿ 3190ನೇ ಜಿಲ್ಲೆಯ ಎನ್.ಎಸ್.ಮಹದೇವ ಪ್ರಸಾದ್, ‘ಬೇಸಿಗೆಯಲ್ಲಿ ಅರಣ್ಯ ಜೀವಿಗಳ ಉಳಿವಿಗಾಗಿ ನೀರಿನ ಹೊಂಡ, ತಂತಿ ಬೇಲಿ ಅಳವಡಿಕೆಗೆ ರೋಟರಿ ಸಂಸ್ಥೆ ಮುಂದಾಗಿದೆ’ ಎಂದರು.

ರೋಟರಿ ಸಂಸ್ಥೆಯ ಗವರ್ನರ್ ಬಿ.ಎಲ್.ನಾಗೇಂದ್ರ ಪ್ರಸಾದ್, ‘ರಾಜ್ಯದ ಹಲವೆಡೆ ರೋಟರಿ ಸಂಸ್ಥೆಯೊಂದಿಗೆ ಉದ್ಯಮಿಗಳು ಜೊತೆಗೂಡಿ ಮರ ಬೆಳೆಸಲು ಅರಣ್ಯ ಇಲಾಖೆಯ ಅನುಮತಿ ಬೇಕಾಗಿದೆ. ರಾಷ್ಟ್ರವ್ಯಾಪಿ ಛಾಯಾಚಿತ್ರಗಾರರಿಂದ ₹1 ಕೋಟಿ ಸಂಗ್ರಹವಾಗಲಿದ್ದು, ಅದನ್ನು ಅರಣ್ಯ ಸಂರಕ್ಷಣೆಗೆ ಉಪಯೋಗಿಸಿಕೊಳ್ಳಲಾಗುವುದು’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು