ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಗುಡಿಸಲು ಖಾಲಿ: ಪಿಐಎಲ್‌ ವಜಾ

ಗೋಮಾಳ ಅತ್ರಿಕಮಣ ಸಲ್ಲ–ಹೈಕೋರ್ಟ್‌
Last Updated 23 ನವೆಂಬರ್ 2021, 16:36 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾರ್ಮಿಕರ ಗುಡಿಸಲುಗಳನ್ನು ಬಲವಂತವಾಗಿ ಖಾಲಿ ಮಾಡಿಸಿದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಅದೇ ಜಾಗ ಅಥವಾ ಪರ್ಯಾಯ ಜಾಗದಲ್ಲಿ ಆಶ್ರಯ ಯೋಜನೆ ಅಡಿ ಸಂತ್ರಸ್ತರಿಗೆ ಮನೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತಂತೆ ದಲಿತ ಸಂಘರ್ಷ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ಅರ್ಜಿದಾರರು ಬಡವರು ಹಾಗೂ ನಿರ್ಗತಿಕರು ಇರಬಹುದು. ಅವರು ವಾಸವಿದ್ದ ಜಾಗದ ಮೇಲೆ ಅವರಿಗೆ ಯಾವುದೇ ಹಕ್ಕು ಇರಲಿಲ್ಲ. ಅಂತೆಯೇಸರ್ಕಾರಿ ಗೋಮಾಳ ಅತಿಕ್ರಮಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ಅರ್ಜಿದಾರರ ಮನವಿ ಪರಿಗಣಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.

‘ಅರ್ಜಿದಾರರು ಆಶ್ರಯ ಯೋಜನೆ ಅಡಿ ವಸತಿ ಸೌಲಭ್ಯ ಕೋರಿ ಸಂಬಂಧಿತ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು. ಮನವಿ ಪರಿಗಣಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬಹುದು’ ಎಂದು ನಿರ್ದೇಶಿಸಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.

ಪ್ರಕರಣವೇನು?: ಆನೇಕಲ್ ತಾಲ್ಲೂಕು ಸರ್ಜಾಪುರ ಹೋಬಳಿಯ ಕೂಡ್ಲು ಗ್ರಾಮದ ಸರ್ವೆ ನಂಬರ್ 148ರಲ್ಲಿನ ಗೋಮಾಳ ಜಮೀನಿನಲ್ಲಿ ಕೆಲವು ಬಡ ಕೂಲಿ ಕಾರ್ಮಿಕರು ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ‘ಇವರು ವಾಸಿಸುತ್ತಿರುವುದು ಗೋಮಾಳದ ಜಾಗವಾಗಿದೆ’ ಎಂದು ಆರೋಪಿಸಿ, ‘ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ಟ್ರಸ್ಟ್’ ನೀಡಿದ್ದ ದೂರಿನ ಅನುಸಾರ ಆನೇಕಲ್ ಪೊಲೀಸರು ಗುಡಿಸಲುಗಳನ್ನು ತೆರವುಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT